Friday, October 18, 2024

ಪ್ರಾಯೋಗಿಕ ಆವೃತ್ತಿ

ಗಾಂಧೀ ಜಯಂತಿ ಮತ್ತು ಮಾಂಸಾಹಾರಿ ಮಿತ್ರ

✍🏿ಗಿರೀಶ್ ತಾಳಿಕಟ್ಟೆ

ಬೆಳಿಗ್ಗೆಯೇ ಫೋನ್ ರಿಂಗಣಿಸಿತು. ಕಾಲೇಜು ದಿನಗಳ ಗೆಳೆಯ. ಪಕ್ಕಾ ಕೋಮುವಾದಿ ಪಾಳಯದಲ್ಲಿ ಉರುಳಾಡುವ ಮನಸ್ಸು. ನನ್ನ ಮೇಲೆ ವಿಜೃಂಭಿಸಬಹುದೆನ್ನುವ ವಿಷಯ ಸಿಕ್ಕಾಗಲೆಲ್ಲ ಕಾಲುಕೆರೆದು ಫೋನ್ ಮಾಡುತ್ತಾನೆ. ಪೆದ್ದುಪೆದ್ದಾಗಿ ಮಾತಾಡುವ ಅವನೊಟ್ಟಿಗಿನ ವಾದವೂ ಒಂಥರಾ ಮಜವಾಗಿರುತ್ತೆ. ಫೋನ್ ಎತ್ತಿದೆ.

ಯಥಾ ಪ್ರಕಾರ ತನ್ನ ಅಸಹನೆಯ ದನಿಯಲ್ಲಿ ಕುಂಯ್ಯ್‌ಗುಟ್ಟಿದ, “ಹೇ, ಏನ್ ಮಾರಾಯ ನಿಮ್ಮ ಗಾಂಧಿ ನಮಿಗೆ ಇಂಥಾ ತೊಂದ್ರೇನಾ ಕೊಡೋದು?”

“ಅಲ್ಲಪ್ಪ, ನಮ್ಮ ಗಾಂಧಿ ಇದ್ದ್ರೆ ನಿಮಿಗೆ ಬಹಳ ತೊಂದ್ರೆ ಅಂತಲೇ ಅಲ್ಲವಾ, ನಿಮ್ಮ ಪೂರ್ವಿಕರೆಲ್ಲ ಮಸಲತ್ತು ಮಾಡಿ ಅವರನ್ನು ಕೊಂದು ಹಾಕಿದ್ದು” ಕಿಚಾಯಿಸಿದೆ.

“ಸತ್ತರೂ ಆ ನಿಮ್ಮ ಮಹಾತ್ಮನ ಕಾಟ ತಪ್ಪಂಗಿಲ್ಲ ನೋಡು” ಶಪಿಸಿದ.

“ಅಂತದ್ದೇನಾಯ್ತಪ್ಪ ಇವಾಗ?”

“ಇವತ್ತು ಗಾಂಧೀ ಜಯಂತಿ. ಹೋಗಿಹೋಗಿ ಭಾನುವಾರವೇ ಬರಬೇಕಾ? ನಮ್ಮ ಜನಕ್ಕೆ ಆರಾಮಾಗಿ ಮಜಾ ಮಾಡೋಕೆ ಅಂತ ಸಿಗೋದು ಒಂದೇ ಭಾನುವಾರ. ಮನೇಲಿ ಚಿಕನ್ನೊ ಮಟನ್ನೊ ಮಾಡ್ಕೊಂಡು ಹೆಂಡ್ತಿ ಮಕ್ಕಳ ಜೊತೆ ಕೂತು ಖುಷಿಯಾಗಿ ಊಟ ಮಾಡೋಣ ಅಂದ್ರೆ, ಒಂದೇ ಒಂದು ಮಟನ್ ಸ್ಟಾಲ್ ಓಪನ್ ಇಲ್ಲ. ಗಾಂಧೀ ಜಯಂತಿ ಕಾರಣಕ್ಕೆ ಅವೆಲ್ಲ ಇವತ್ತು ಕ್ಲೋಸ್ ಅಂತೆ. ಹಿಂಗಾ ಮಾಡೋದು ನಿಮ್ಮ ಗಾಂಧಿ” ಅಂದ.

“ಅಲ್ಲ ಕಣಯ್ಯ, ಗಾಂಧೀಜಿ ಏನಾದ್ರು ನನ್ನ ಹುಟ್ಟಿದ ದಿನಕ್ಕೆ ನಾನ್ ವೆಜ್ ಅಂಗಡಿಗಳನ್ನ ಕ್ಲೋಸ್ ಮಾಡ್ಸಿ ಅಂದಿದ್ದ್ರಾ? ಆಮೇಲೆ ಬಂದೋರು, ಗಾಂಧೀ ತತ್ವನ ಹಿಂಗೂ ಜಾರಿ ಮಾಡಬಹುದು ಅನ್ನೋ ಭ್ರಮೆಯಲ್ಲಿ ಹಂಗೆ ಮಾಡಿದಾರೆ. ಅದಿರಲಿ, ನನ್ನ ಒಂದು ಪ್ರಶ್ನೆಗೆ ಉತ್ತರ ಕೊಡಪ್ಪ. ಒಂದು ದಿನ ನಿನಗೆ ನಾನ್‌ವೆಜ್ ತಿನ್ನಕ್ಕೆ ಆಗಲಿಲ್ಲ ಅಂತ ಗಾಂಧೀನ ಇಷ್ಟೆಲ್ಲ ಆರೋಪಿಸ್ತಾ ಇದೀಯಲ್ಲ, ಅದೇ ನಿಮ್ಮ ಭಾಗವತರು ಮಾಂಸಾಹಾರ ಅಂದ್ರೇನೆ ಕೆಟ್ಟದ್ದು, ಅದನ್ನ ತಿಂದ್ರೆ ನೀವು ಕೆಟ್ಟ ಕೆಲ್ಸಾನೆ ಮಾಡ್ತೀರಿ ಅಂತ ಮೊನ್ನೆ ತಾನೇ ಹೇಳಿದಾರೆ. ಅಂದ್ರೆ ಮಾಂಸ ತಿನ್ನೋರು ಕೆಟ್ಟೋರು ಅಂತ್ಲೋ, ಅಥವಾ ಬಹುಸಂಖ್ಯಾತರ ಪೌಷ್ಠಿಕ ಖಾದ್ಯವಾದ ಮಾಂಸವನ್ನೇ ತಿನ್ನೋದು ಬಿಡಿಸ್ಬೇಕು ಅಂತ್ಲೋ ಅವರು ಆ ಮಾತು ಹೇಳಿದಾರೆ. ಅದಕ್ಕೇನೇಳ್ತೀಯಾ?”

“ಹೇ, ಅದು ಬೇರೆ ವಿಚಾರ, ಇದು ಬೇರೆ ವಿಚಾರ. ಎರಡಕ್ಕೂ ಲಿಂಕ್ ಮಾಡಕ್ಕೆ ಬರಬೇಡ” ಅಂದ.

“ಹೆಂಗಯ್ಯ ಬೇರೆ ಬೇರೆ ಆಗುತ್ತೆ. ಸ್ವಲ್ಪ ಎಕ್ಸ್‌ಪ್ಲೇನ್ ಮಾಡು”

“ಮುಂದಿನ ವಾರ ಸಿಕ್ತೀವಲ್ವಾ, ಅವಾಗ ಎಕ್ಸ್‌ಪ್ಲೇನ್ ಮಾಡ್ತೀನಿ ಬಿಡು” ಫೋನ್ ಕಟ್ ಆಯಿತು.

ಇಲ್ಲ, ಖಂಡಿತವಾಗಿಯೂ ಇದು ತಮಾಷೆಯ ಸಂಗತಿಯಲ್ಲ. ಗಾಂಧಿಯನ್ನು ಟೀಕಿಸುವುದು, ವಿಮರ್ಶೆಯ ಗಡಿಯನ್ನು ದಾಟಿ ಒಂದು ಕಾಯಿಲೆಯಂತಾಗಿ ವ್ಯಾಪಿಸಿದೆ. ವಿಮರ್ಶೆಗೆ ಅತೀತವಾದ ವ್ಯಕ್ತಿ ಯಾರೂ ಇಲ್ಲ. ಗಾಂಧಿ ಕೂಡಾ ವಿಮರ್ಶೆಗೆ ಒಳಪಡಬೇಕಾದ ವ್ಯಕ್ತಿ. ಆದರೆ ಕಾಲದ ತುರ್ತನ್ನೂ ಮೀರಿ ನಾವು ಗಾಂಧಿ ವಿಮರ್ಶೆಯ ಕ್ಲೀಷೆಗೆ ಬಿದ್ದಾಗ, ‘ಅವರು’ ಸಂಭ್ರಮಿಸುತ್ತಾರೆ, ‘ಅವರ’ ವಿಜಯೋತ್ಸವಗಳು ಮುಗಿಲು ಮುಟ್ಟುತ್ತಲೇ ಇರುತ್ತವೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!