Thursday, September 19, 2024

ಪ್ರಾಯೋಗಿಕ ಆವೃತ್ತಿ

ಇದು ಮಂಡ್ಯ…ಹೊರಗಿನಿಂದ ಬಂದವರು ಎಂಎಲ್ಎ ಆಗಲ್ಲ

ಹೊರಗಿನಿಂದ ಬಂದವರು ಟಿಕೆಟ್ ತೆಗೆದುಕೊಳ್ಳೋದಿಕ್ಕೆ ಆಗೋಲ್ಲ, ಎಂಎಲ್ಎ ಆಗೋದಿಕ್ಕೆ ಆಗಲ್ಲ. ಯಾಕಂದ್ರೆ ಇದು ಮಂಡ್ಯ. ಮಂಡ್ಯದ ಜನರು ಸ್ವಾಭಿಮಾನಿಗಳು, ಅವರು ದುಡಿಯುವ ಎತ್ತಿಗೆ ಮಾತ್ರ ಹುಲ್ಲು ಹಾಕೋದು ಎನ್ನುವ ಮೂಲಕ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಗಣಿಗ ರವಿಕುಮಾರ್ ವಲಸಿಗರಿಗೆ ಟಾಂಗ್ ನೀಡಿದ್ದಾರೆ.

ಮಂಡ್ಯ ತಾಲ್ಲೂಕಿನ ಬಸರಾಳು ಹೋಬಳಿಯ ಹಲ್ಲೇಗೆರೆ ಗ್ರಾಮದ ದಂಡಿನಮ್ಮ ದೇವಸ್ಥಾನದ ಬಳಿ ನಡೆದ ಕಾಂಗ್ರೆಸ್ ಜನಶೀರ್ವಾದದ ಸಭೆಯಲ್ಲಿ ಗಣಿಗ ರವಿಕುಮಾರ್ ಹೇಳುತ್ತಿದ್ದರೆ, ಒಂದು ಕ್ಷಣ ವೇದಿಕೆಯಲ್ಲಿದ್ದ ಕಾಂಗ್ರೆಸ್ ನಾಯಕರು ಆಶ್ಚರ್ಯದಿಂದ ಕಣ್ಣರಳಿಸಿ ನೋಡುತ್ತಿದ್ದರು.

ನಾನು ಎಲ್ಲೋ ಹೈಕಮಾಂಡ್ ನಾಯಕರನ್ನು ಅಡ್ಜಸ್ಟ್ ಮಾಡ್ಕೊಂಡು ಬಿಡ್ತೀನಿ ಅಂದ್ರೆ ನಡೆಯೋಲ್ಲ, ನಡೆಯೋದಕ್ಕೆ ನಾವು ಬಿಡೋದಿಲ್ಲ, ಹಾಗೆ ಬಿಡೋ ಮಕ್ಕಳೂ ಅಲ್ಲ. ನಾವು ಏನು ಬೇಕಾದ್ರೂ ಮಾಡೋ ತಾಕತ್ತಿದೆ‌‌. ಈ ಊರಿಗೆ ಎಂಎಲ್ಎ ಆಗೋಕೆ ಬಂದಿದ್ದೇವೆ. ನಿಮ್ಮಗಳ ಸೇವೆ ಮಾಡೋಕೆ ಬಂದಿದ್ದೇವೆ. ನಿಮಗೆ ಯಾರು ದುಡಿಯುತ್ತಿದ್ದಾರೋ ಅವರಿಗೆ ಆಶೀರ್ವಾದ ಮಾಡಿ. ನಾವು ನಿಮ್ಮ ಮನೆ ಮಕ್ಕಳು. ನಾನು ಈ ಹೋಬಳಿಯ ಮಗ. ಕಳೆದ ಚುನಾವಣೆಯಲ್ಲಿ ಐದು ಸಾವಿರ ಮತಗಳ ಲೀಡ್ ಕೊಟ್ಟಿದ್ದೀರಾ…. ಎಂದೆಲ್ಲಾ ಗಣಿಗ ರವಿಕುಮಾರ್ ಕಾಂಗ್ರೆಸ್ ವಲಸಿಗರ ಉದ್ದೇಶಿಸಿ ವಾಗ್ದಾಳಿ ನಡೆಸಿದರು.

ಮಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಗಣಿಗ ರವಿಕುಮಾರ್ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಈಗಾಗಲೇ ಕಾಂಗ್ರೆಸ್ ನಾಯಕರು ಈ ಕ್ಷೇತ್ರದ ಪ್ರಬಲ ಮೂವರು ಆಕಾಂಕ್ಷಿಗಳ ಪಟ್ಟಿಯನ್ನು ಕಾಂಗ್ರೆಸ್ ವರಿಷ್ಠರಿಗೆ ಮುಟ್ಟಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್ ಸೇರಿದ ಕೀಲಾರ ರಾಧಾಕೃಷ್ಣ ಅವರ ಹೆಸರು ಕೂಡ ಪ್ರಬಲವಾಗಿ ಕೇಳಿಬರುತ್ತಿದೆ.ಅವರಿಗೆ ಟಿಕೆಟ್ ಎಂದು,ಹಾಗಾಗಿ ಕಾಂಗ್ರೆಸ್ ಸೇರಿದ್ದಾರೆ ಎಂದು ಕೆಲವರು ಮಾತನಾಡುತ್ತಿರುವ ಹಿನ್ನಲೆಯಲ್ಲಿ, ಗಣಿಗ ರವಿಕುಮಾರ್ ವಲಸಿಗರ ಹೆಸರೇಳದೆ ವಾಗ್ದಾಳಿ ನಡೆಸಿದ್ದಾರೆ.

ಇದು ಇತ್ತೀಚೆಗೆ ಕಾಂಗ್ರೆಸ್ ಸೇರಿ ನನಗೆ ಟಿಕೆಟ್ ಎಂದು ಹೇಳಿಕೊಂಡು ಓಡಾಡುತ್ತಿರುವ ವಲಸಿಗರಿಗೆ ನೇರವಾಗಿಯೇ ಜಿಲ್ಲಾ ಕಾಂಗ್ರೆಸ್ ನಾಯಕರ ಮುಂದೆ ಗಣಿಗ ರವಿಕುಮಾರ್ ಹರಿಹಾಯ್ದಿದ್ದಾರೆ.ಇದೇ ವೇದಿಕೆಯಲ್ಲಿ ಜೆಡಿಎಸ್ ನಿಂದ ವಲಸೆ ಬಂದಿದ್ದ ಡಾ.ಕೃಷ್ಣ ಕೂಡ ಇದ್ದರು.

ಮೂಲ ವರ್ಸಸ್ ವಲಸಿಗ

ಸದ್ಯಕ್ಕೆ ಪಕ್ಷದೊಳಗೆ ಮೂಲ ವರ್ಸಸ್ ವಲಸಿಗ ಎನ್ನುವ ಚರ್ಚೆ ಆರಂಭವಾಗಿದೆ.ಈ ಹಿನ್ನಲೆಯಲ್ಲಿ ಗಣಿಗ ರವಿಕುಮಾರ್ ಮೂಲ-ವಲಸಿಗ ಎನ್ನುವ ಮಾತುಗಳನ್ನು ಎತ್ತಿದ್ದಾರೆ. ಇದೇ ರೀತಿ ಮತ್ತೋರ್ವ ಕಾಂಗ್ರೆಸ್ ನಾಯಕ ಸಿದ್ಧಾರೂಢ ಸತೀಶ್ ಗೌಡ ಕೂಡ ಅದೇ ವೇದಿಕೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದುಡಿದವರಿಗೆ ಟಿಕೆಟ್‌ ಕೊಡಿ ಎಂದಿದ್ದಾರೆ‌. ಇವರಿಬ್ಬರಲ್ಲದೆ ಇದೇ ಮಾತನ್ನು ಕಾಂಗ್ರೆಸ್ ಆಕಾಂಕ್ಷಿತರ ಪೈಕಿ ಹಲವರು ಬಹಿರಂಗವಾಗಿಯೇ ಹೇಳುತ್ತಿದ್ದಾರೆ.

ಪಕ್ಷಕ್ಕಾಗಿ ದುಡಿದವರಿಗೆ ಅವಕಾಶ ನೀಡಬೇಕು ಎನ್ನುವ ಮೂಲಕ ವಲಸಿಗರ ವಿರುದ್ಧ ಶೀತಲ ಸಮರ ಸಾರಿದ್ದಾರೆ. ಅಂದರೆ ಅರ್ಜಿ ಸಲ್ಲಿಸಿರುವವರ ಪೈಕಿ ಕೆ.ಕೆ.ರಾಧಾಕೃಷ್ಣ ಹಾಗೂ ಡಾ.ಕೃಷ್ಣ ಅವರೇ ಗಣಿಗ ರವಿಕುಮಾರ್ ಸೇರಿದಂತೆ ಬಹುತೇಕ ಆಕಾಂಕ್ಷಿತರ ಟಾರ್ಗೆಟ್ ಆಗಿದ್ದಾರೆನ್ನುವುದು ಸ್ಪಷ್ಟ.

ಜೆಡಿಎಸ್‌ನಲ್ಲಿದ್ದ ಡಾ.ಕೃಷ್ಣ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯರ ಆಯ್ಕೆ ಚುನಾವಣೆ ಸಮಯದಲ್ಲಿ ಕೈ ಹಿಡಿದರು. ಅಂದಿನಿಂದ ಪಕ್ಷದೊಳಗೆ ಸಕ್ರಿಯರಾಗಿದ್ದಾರೆ. ಇನ್ನು ಮಂಡ್ಯ ವಿಧಾನಸಭಾ ಕ್ಷೇತ್ರದ ದಳದ ಟಿಕೆಟ್ ರೇಸ್‌ನಲ್ಲಿದ್ದ ಕೆ.ಕೆ.ರಾಧಾಕೃಷ್ಣ ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದಾರೆ.

ಜೆಡಿಎಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೆಕೆಆರ್ ಈ ಬಾರಿಯೂ ತನಗೆ ಟಿಕೆಟ್ ಸಿಗುವುದಿಲ್ಲ ಎನ್ನುವುದು ಖಾತ್ರಿಯಾಗುತ್ತಿದ್ದಂತೆ, ಕಾಂಗ್ರೆಸ್ ಸದಸ್ಯತ್ವ ಪಡೆದು ಟಿಕೆಟ್‌ಗಾಗಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಇಷ್ಟೇ ಆಗಿದ್ದರೆ ಅತೃಪ್ತಿಗೆ ಕಾರಣವಾಗುತ್ತಿರಲಿಲ್ಲ. ಈ ಇಬ್ಬರು ಕೂಡ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.

ಜನರಿಗೆ ಕೂಡ ಸಾಕಷ್ಟು ಹತ್ತಿರವಾಗುತ್ತಿದ್ದಾರೆ. ಹೈಕಮಾಂಡ್ ನಾಯಕರು ಎಷ್ಟು ಬಂಡವಾಳ ಹೂಡಿ ಎಂದು ಹೇಳುತ್ತಾರೋ ಅದಕ್ಕೆ ಸಿದ್ಧ ಎಂದು ಪಕ್ಷದ ವಲಯದಲ್ಲಿ ಹೇಳಿಕೊಂಡು ತಿರುಗುತ್ತಿರುವುದು ಕೂಡ ಮೂಲ ಕಾಂಗ್ರೆಸ್ಸಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಒಟ್ಟಾರೆ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ವರಿಷ್ಠರು ಮೂಲ ಕಾಂಗ್ರೆಸ್ಸಿಗರಿಗೆ ಟಿಕೆಟ್‌ ಕೊಡ್ತಾರೋ,ವಲಸಿಗರಿಗೆ ಮಣೆ ಹಾಕ್ತಾರೋ ಕಾದು ನೋಡಬೇಕಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!