Saturday, July 13, 2024

ಪ್ರಾಯೋಗಿಕ ಆವೃತ್ತಿ

ತೋಟಗಾರಿಕೆ ಇಲಾಖೆ ಜಾಗ ಉಳಿಸಿಕೊಳ್ಳಲು ನಗರಸಭೆ ನಿರ್ಣಯ

ಮಂಡ್ಯ ನಗರದ ಹೃದಯ ಭಾಗದಲ್ಲಿರುವ ತೋಟಗಾರಿಕೆ ಜಾಗವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲು ನಗರಸಭೆ ನಿರ್ಣಯ ಕೈಗೊಂಡಿದೆ.

ಇಂದು ನಗರಸಭೆಯ ಧರಣಪ್ಪ ಸಭಾಂಗಣದಲ್ಲಿ ಅಧ್ಯಕ್ಷ ಹೆಚ್.ಎಸ್.ಮಂಜು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರು ಸರ್ವಾನುಮತದ ನಿರ್ಣಯ ಕೈಗೊಂಡು ತೋಟಗಾರಿಕೆ ಜಾಗವನ್ನು ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಬಿಟ್ಟು ಕೊಡುವುದಿಲ್ಲ ಎಂಬ ನಿರ್ಣಯ ಅಂಗೀಕರಿಸಿ ಸರ್ಕಾರಕ್ಕೆ ಶಿಫಾರಸು ಮಾಡಿದರು.

ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮಾಡಿರುವ ಮನವಿಯನ್ನು ಚರ್ಚೆಗೆ ತಂದ ಅಧ್ಯಕ್ಷ ಎಚ್.ಎಸ್.ಮಂಜು ಅವರು, ತೋಟಗಾರಿಕೆ ಇಲಾಖೆ ಜಾಗದಲ್ಲಿನ ಪ್ರಮುಖ ಅಂಶಗಳನ್ನು ಸದಸ್ಯರ ಗಮನಕ್ಕೆ ತಂದರು. ಸದಸ್ಯರಾದ ಶ್ರೀಧರ್, ಎಂ.ಪಿ.ಅರುಣ್‌ಕುಮಾರ್, ಟಿ.ಕೆ.ರಾಮಲಿಂಗಯ್ಯ ಇತರರು ಮಾತನಾಡಿ, ಈಗಾಗಲೇ ನ್ಯಾಯಾಂಗ ಇಲಾಖೆಗೆ ಸೇರಿದ ಸ್ಥಳ ಸಾಕಷ್ಟಿದೆ. ಇನ್ನೂ ಹೆಚ್ಚಿನ ಸ್ಥಳಾವಕಾಶ ಅಗತ್ಯವಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಹಿಂಭಾಗ ಹಾಗೂ ಹಳೇ ತಾಲೂಕು ಕಚೇರಿಯ ಜಾಗವೂ ಇದೆ. ಇದಕ್ಕಿಂತಲೂ ಹೆಚ್ಚಿನ ಸ್ಥಳಾವಕಾಶ ಬೇಕೆಂದಾದಲ್ಲಿ ನಗರದ ಹೊರ ವಲಯದಲ್ಲೂ ಅವಕಾಶ ಕಲ್ಪಿಸಬಹುದು.

ಅಲ್ಲದೆ, ಜಿ+ 5 ಮಾದರಿಯಲ್ಲಿ ಕಟ್ಟಡ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಿದೆ. ಆದರೆ, ನಗರಕ್ಕೆ ಆಮ್ಲಜನಕ ಒದಗಿಸುವ ನಗರದ ಹೃದಯ ಭಾಗದಲ್ಲಿರುವ ತೋಟಗಾರಿಕೆ ಜಾಗದಲ್ಲಿ ವೈವಿಧ್ಯಮಯವಾದ ಗಿಡ-ಮರಗಳಿದ್ದು, ಅವುಗಳು ನೀಡುವ ಆಮ್ಲಜನಕಕ್ಕೆ ಬೆಲೆ ಕಟ್ಟಲಾಗದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ ಅಧ್ಯಕ್ಷರು ಹಾಗೂ ಆಯುಕ್ತರು ಈ ಅಭಿಪ್ರಾಯಗಳನ್ನು ನಿರ್ಣಯಕ್ಕಿಟ್ಟಾಗ ಎಲ್ಲ ಸದಸ್ಯರೂ ಮೇಜು ಕುಟ್ಟಿ ಜಾಗ ಯಥಾಸ್ಥಿತಿಯಲ್ಲಿಯೇ ಇರಬೇಕೆಂದು ತಮ್ಮ ಅನುಮೋದನೆ ಸೂಚಿಸಿದರು. ಅದರಂತೆ ಸಭೆಯ ನಿರ್ಣಯದಂತೆ ನ್ಯಾಯಾಂಗ ಇಲಾಖೆಗೆ ತೋಟಗಾರಿಕೆ ಇಲಾಖೆಯ ಜಾಗವನ್ನು ನೀಡದಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಯಿತು.

ಜಲಮಂಡಳಿ ವಿರುದ್ಧ ಸದಸ್ಯರ ಗರಂ

ಸದಸ್ಯ ಶ್ರೀಧರ್ ಕುಡಿಯುವ ನೀರು ಸರಬರಾಜು ಹಾಗೂ ದರ ನಿಗದಿ ವಿಚಾರದಲ್ಲಿ ನಗರದ ನಾಗರೀಕರಲ್ಲಿ ಸಾಕಷ್ಟು ಗೊಂದಲ ಏರ್ಪಟ್ಟಿದೆ. ನಗರಸಭೆ ಆಡಳಿತದ ಕೆಳಗೆ ಜಲಮಂಡಳಿ ಇದ್ದರೂ ಅಧಿಕಾರಿಗಳು ತಮ್ಮ ಇಷ್ಟದಂತೆ ನಡೆದುಕೊಳ್ಳುತ್ತಿದ್ದಾರೆ. ನಗರಸಭೆಗೆ ಖರ್ಚು ವೆಚ್ಚದ ವಿವರಗಳನ್ನೇ ನೀಡದೆ ತಾವೇ ತೀರ್ಮಾನ ತೆಗೆದುಕೊಂಡು ನಗರಸಭೆಯನ್ನು ತಮ್ಮ ಕೈ ಕೆಳಗಿನ ಸಂಸ್ಥೆಯಂತೆ ಕಡೆಗಣಿಸುತ್ತಿದ್ದಾರೆ ಎಂದು ದೂರಿದರು. ಇದಕ್ಕೆ ಎಲ್ಲ ಸದಸ್ಯರು ದನಿಗೂಡಿಸಿದರು.

ಜಲಮಂಡಳಿ ಅಧಿಕಾರಿ ಪ್ರತಿಕ್ರಿಯಿಸಿ,ನಗರದಲ್ಲಿ 20,900ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಈಗಾಗಲೇ ಅಮೃತ್ ಯೋಜನೆಯಡಿ ಶೇ.90ರಷ್ಟು ಸಂಪರ್ಕಗಳಿಗೆ ಮೀಟರ್ ಅಳವಡಿಸಲಾಗಿದ್ದು, ನಿವಾಸಿಗಳ ಅಧಿಕೃತ ಆಸ್ತಿಯ ದಾಖಲಾತಿಗಳ ಪರಿಶೀಲನೆ ನಡೆಸಿ ಹೊಸ ಸಂಪರ್ಕಗಳನ್ನು ನೀಡಲಾಗುತ್ತಿದೆ. ಇದರಲ್ಲಿ ಕೆಲವು ಸಂಪರ್ಕಗಳಲ್ಲಿ ಏರು ಪೇರಾಗಿರಬಹುದು. ಅದನ್ನು ಶೀಘ್ರದಲ್ಲಿ ಸರಿಪಡಿಸಲಾಗುವುದು ಎಂದರು.

ಸದ್ಯ ನೀಡುತ್ತಿರುವ ಬಿಲ್ ತಾತ್ಕಾಲಿಕವಾಗಿದ್ದು, ನೀರಿನ ಬಳಕೆಯ ಪ್ರಮಾಣದ ಮೇಲೆ ಬಿಲ್ ನೀಡಲಾಗುತ್ತಿಲ್ಲ. ಸರ್ಕಾರದ ಹೊಸ ಆದೇಶ ಬಂದ ನಂತರ ಅಧಿಕೃತವಾಗಿ ಮೀಟರನ್ನು ಕಡ್ಡಾಯಗೊಳಿಸಲಾಗುವುದು ಎಂದು ಸಮಜಾಯಿಷಿ ನೀಡಲು ಮುಂದಾದರು.

ಇದರಿಂದ ಅಸಮಾಧಾನಿತರಾದ ಸದಸ್ಯರು, ಜಲಮಂಡಳಿ ನಗರಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸರಬರಾಜು ಮಾಡುತ್ತಿಲ್ಲ. ಅಲ್ಲದೆ, 2006ರಿಂದ ಅಮೃತ್ ಯೋಜನೆಗೊಳಪಟ್ಟ ಬಳಿಕವೂ ದರ ಪರಿಷ್ಕರಣೆ ವಿಚಾರದಲ್ಲಿ ನಗರಸಭೆ ಆಡಳಿತವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ನಗರಸಭೆಯಿಂದ ಖರ್ಚು ವೆಚ್ಚದ ಪಟ್ಟಿಯನ್ನು ಇಲಾಖೆಗೆ ಸಲ್ಲಿಸಲಾಗುತ್ತದೆ. ಆದರೆ, ಜಲಮಂಡಳಿ ಪ್ರತಿ ತಿಂಗಳು ಖರ್ಚು ವೆಚ್ಚದ ಪಟ್ಟಿಯನ್ನು ಸಲ್ಲಿಸುತ್ತಿಲ್ಲವೇಕೆ ಎಂದು ತರಾಟೆಗೆ ತೆಗೆದುಕೊಂಡರು.

ಆಗ ಮಧ್ಯ ಪ್ರವೇಶಿಸಿದ ಅಧ್ಯಕ್ಷ ಎಚ್.ಎಸ್.ಮಂಜು, ಇನ್ನು ಮುಂದೆ ಪ್ರತೀ ತಿಂಗಳು 10ನೇ ತಾರೀಖಿನ ಒಳಗೆ ಜಲಮಂಡಳಿ ಅಧಿಕಾರಿಗಳು ಖರ್ಚು ವೆಚ್ಚದ ಪಟ್ಟಿಯನ್ನು ಎಲ್ಲ ಸದಸ್ಯರಿಗೂ ತಲುಪಿಸಬೇಕು ಎಂದು ತಾಕೀತು ಮಾಡಿದರು.

ಜಲಮಂಡಳಿ ನೀಡುತ್ತಿರುವ ಬಿಲ್ ಸಂಪೂರ್ಣ ಆಂಗ್ಲಮಯವಾಗಿದೆ. ಇದನ್ನು ಕೂಡಲೇ ಬದಲಿಸಿ ಕನ್ನಡದಲ್ಲಿರುವಂತೆ ನೋಡಿಕೊಳ್ಳಿ ಎಂದರು.

ಸಭೆಯಲ್ಲಿ ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವಾರು ವಿಷಯಗಳ ಕುರಿತು ಚರ್ಚೆ ನಡೆಯಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!