Friday, November 20, 2026

ಪ್ರಾಯೋಗಿಕ ಆವೃತ್ತಿ

‘ಗೌರಿ’ ಸಾಕ್ಷ್ಯಚಿತ್ರ ನೋಡುನೋಡುತ್ತಾ ತಣ್ಣಗಾದೆವು… ನಮ್ಮ ಭಾವಕೋಶದೊಳಗೆ ಅವಿತಿರುವ ಗೌರಿ ಕಣ್ಣೀರಾಗಿ ಹೊರಬಂದರು…

✍️ ಯತಿರಾಜ್ ಬ್ಯಾಲಹಳ್ಳಿ,ಪತ್ರಕರ್ತರು.


  • “ಗೌರಿ ಲಂಕೇಶ್‌ ಕೊಂದರಲ್ಲ, ಅವರು ಸಿಕ್ಕರಾ? ಕೊಲೆ ಮಾಡಿದ್ದು ಏತಕ್ಕೆ? ಕೊಲೆಗಡುಕರಿಗೆ ಶಿಕ್ಷೆಯಾಯಿತಾ?”
  • “ಗೌರಿ, ತನ್ನ ತಂದೆಯಾದ ಲಂಕೇಶ ಅವರ ಮುಂದುವರಿಕೆಯಲ್ಲ, ಬೆಳವಣಿಗೆ”
  • 2022ರ ಟೊರೊಂಟೊ ವುಮೆನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬೆಸ್ಟ್ ಹ್ಯೂಮನ್ ರೈಟ್ಸ್ ಪ್ರಶಸ್ತಿ ಗೆದ್ದಿರುವ ‘ಗೌರಿ ಸಾಕ್ಷ್ಯಚಿತ್ರ

’ಗೌರಿ’  ಸಾಕ್ಷ್ಯಚಿತ್ರ ನೋಡುನೋಡುತ್ತಾ ತಣ್ಣಗಾದೆವು… ನಮ್ಮ ಭಾವಕೋಶದೊಳಗೆ ಅವಿತಿರುವ ಗೌರಿ ಕಣ್ಣೀರಾಗಿ ಹೊರಬಂದರು…

ಪೇಪರ್‌ ಸ್ಟಾಲ್, ಟೀ ಸ್ಟಾಲ್‌, ತರಕಾರಿ ಅಂಗಡಿ, ಕಟ್ಟಿಂಗ್‌ ಶಾಪ್‌, ಸಿನಿಮಾ ಮಾಲ್‌, ಸಂತೆ, ಜಾತ್ರೆ- ಹೀಗೆ ಎಲ್ಲಾದರೂ ಸಿಕ್ಕ ಅಪರಿಚಿತರಲ್ಲಿ “ನಾನು ಗೌರಿ ಲಂಕೇಶ್ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ” ಎಂದು ಪರಿಚಯ ಮಾಡಿಕೊಂಡ ತಕ್ಷಣ, “ಗೌರಿ ಲಂಕೇಶ್‌ ಕೊಂದರಲ್ಲ, ಅವರು ಸಿಕ್ಕರಾ? ಕೊಲೆ ಮಾಡಿದ್ದು ಏತಕ್ಕೆ? ಕೊಲೆಗಡುಕರಿಗೆ ಶಿಕ್ಷೆಯಾಯಿತಾ?”- ಎಂದು ಸಾಕಷ್ಟು ಜನ ಕೇಳಿದ್ದಾರೆ. ಗೌರಿ ಅಂದರೆ ಹಾಗೆ, ಜನಪದವಾಗಿ ಬಿಟ್ಟಿದ್ದಾರೆ, ದಂತಕತೆಯಾಗಿದ್ದಾರೆ.

ಹತ್ಯೆಯಾದ ಗೌರಿ, ಅನೇಕರ ಹೃದಯದಲ್ಲಿ ಮರುಹುಟ್ಟು ಪಡೆದಿದ್ದಾರೆ. ಆದರೆ ಈ ನಾಡಿನ ಜನತೆಗೆ ಗೌರಿಯ ವ್ಯಕ್ತಿತ್ವದ ಬಗ್ಗೆ ಎಷ್ಟು ಗೊತ್ತು? ನಮ್ಮ ಮುಖ್ಯವಾಹಿನಿ ದೃಶ್ಯ ಮಾಧ್ಯಮಗಳು ಗೌರಿಯ ಬಗ್ಗೆ ತಿಳಿಸಲು ಎಷ್ಟು ಪ್ರಯತ್ನ ಮಾಡಿವೆ? ಜನಮಾನಸದಲ್ಲಿನ ಭಾವನಾತ್ಮಕ ಗೌರಿಯನ್ನು ಅರ್ಥಪೂರ್ಣವಾಗಿ ಮನವರಿಕೆ ಮಾಡುವ ಕೆಲಸ ಆಗಿದೆಯೇ? ಗೌರಿಯ ಹೋರಾಟ, ಚಿಂತನೆಯ ಬದುಕನ್ನು ಸಾಮಾನ್ಯ ಜನತೆಗೆ ತಿಳಿಸುವ ಪ್ರಯತ್ನ ನಡೆದಿದೆಯೇ? ಈ ಪ್ರಯತ್ನ ಆಗಿದ್ದರೂ ಪರಿಣಾಮಕಾರಿಯಾಗಿ ನಡೆದಿದೆಯೇ? ಉತ್ತರ ಅಸ್ಪಷ್ಟ. ಚಿಂತೆ ಬೇಡಿ, ಆ ಕೊರತೆಯನ್ನು ಕವಿತಾ ಲಂಕೇಶ್ ನಿರ್ದೇಶನದ ‘ಗೌರಿ’ ಸಾಕ್ಷ್ಯಚಿತ್ರ ನೀಗಿಸಿದೆ. ದೃಶ್ಯ ಮಾಧ್ಯಮದ ಶಕ್ತಿಯನ್ನು ವಿಸ್ತರಿಸಿದೆ.

ಕೋಮುವಾದಿಗಳು ಗೌರಿಯ ಬಗ್ಗೆ ಎಷ್ಟೇ ಅಪಪ್ರಚಾರ ಮಾಡಿದರೂ ಅವರು ಈ ನಾಡಿನ ಸೌಹಾರ್ದತೆಗಾಗಿ, ನೆಮ್ಮದಿಗಾಗಿ, ಶಾಂತಿಗಾಗಿ ದಣಿದ ಜೀವವೆಂಬುದನ್ನು ಚರಿತ್ರೆಯ ಪುಟಗಳಿಂದ ಅಳಿಸಿ ಹಾಕಲು ಸಾಧ್ಯವಿಲ್ಲ. ಮೊನ್ನೆ ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ಅರವತ್ತು ದಾಟಿದ ವ್ಯಕ್ತಿಯೊಬ್ಬರು ಮಾತಿಗೆ ಸಿಕ್ಕಿದ್ದರು. “ಗೌರಿಯವರ ಸಂಪಾದಕೀಯ ಬರಹಗಳ ‘ಕಂಡದ್ದು ಕಂಡಹಾಗೆ’ ಒಂದು ಸಂಪುಟ ಮಾತ್ರ ನನ್ನ ಬಳಿ ಇದೆ, ಇನ್ನೊಂದಿಲ್ಲ. ಗೌರಿ ಹತ್ಯೆಯಾದ ಬಳಿಕ ಆಕೆಯ ಬರಹಗಳನ್ನು ಓದಲಾರಂಭಿಸಿದೆ, ಗೌರಿ ಎಂದರೆ ಏನು, ಆಕೆಯ ಬದುಕು ಎಂತಹ ದಿಟ್ಟತನದ್ದು ಎಂಬುದನ್ನು ತಿಳಿದು ಕಣ್ಣೀರು ಹಾಕಿದ್ದೇನೆ, ನಿಜಕ್ಕೂ ಈ ನಾಡಿಗೆ ದೊಡ್ಡ ನಷ್ಟ” ಎಂದು ಮರುಗಿದರು. ನಿಜ, ಗೌರಿಯ ಬಗ್ಗೆ ತಿಳಿದುಕೊಂಡಷ್ಟೂ, ಅವರು ನಂಬಿದ್ದ ಮತ್ತು ನಂಬಿದ್ದಂತೆ ನಡೆದ ರೀತಿಯ ಕುರಿತು ಅತೀವ ಗೌರವ ಹುಟ್ಟುತ್ತದೆ.

ಇಂಗ್ಲಿಷ್ ಪತ್ರಿಕೋದ್ಯಮದಲ್ಲಿದ್ದ ಗೌರಿ, ತನ್ನ ತಂದೆಯ ಮರಣದ ನಂತರ ಕನ್ನಡ ಪತ್ರಿಕೋದ್ಯಮಕ್ಕೆ ಕಾಲಿಟ್ಟರು. ಸವಾಲುಗಳನ್ನು ಎದುರಿಸಿದರು. ಲಂಕೇಶ್ ಪತ್ರಿಕೆಯ ಬಳಿಕ, ಗೌರಿ ಲಂಕೇಶ್ ಪತ್ರಿಕೆ ಆರಂಭಿಸಿದರು. ಸಾಕ್ಷ್ಯಚಿತ್ರದಲ್ಲಿ ಮಾತನಾಡಿರುವ ಎಂ.ಎಸ್.ಆಶಾದೇವಿ ಹೇಳುತ್ತಾರೆ: “ಗೌರಿ, ತನ್ನ ತಂದೆಯಾದ ಲಂಕೇಶ ಅವರ ಮುಂದುವರಿಕೆಯಲ್ಲ, ಬೆಳವಣಿಗೆ”. ನಿಜ, ಲಂಕೇಶ್‌ ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ, ಆಕ್ಟಿವಿಸ್ಟ್ ಆದರು. ಬಾಬಾ ಬುಡನ್‌ಗಿರಿ ದರ್ಗಾ ವಿವಾದದಿಂದ ಹಿಡಿದು, ವಿದ್ಯಾರ್ಥಿಗಳ ಹೋರಾಟದವರೆಗೂ ಗೌರಿ ದಣಿದರು, ದುಡಿದರು. ಇದೆಲ್ಲವನ್ನೂ ‘ಗೌರಿ’ ಸಾಕ್ಷ್ಯಚಿತ್ರ ತೆರೆದಿಟ್ಟಿದೆ.

ಪತ್ರಿಕೆಯ ಕುರಿತು ಗೌರಿ ಒಮ್ಮೆ ಹೇಳಿದ್ದನ್ನು ಲೇಖಕಿ ಕೆ.ಷರೀಫಾ ಅವರು ನೆನೆಯುತ್ತಾ, “ಷರೀಫಾ ಎಲ್‌ಐಸಿಯ ಹಣ ಬಂದಿದೆ, ನನ್ನ ಕಚೇರಿ ಸಿಬ್ಬಂದಿಗಳಿಗೆ ಹಣವನ್ನು ಹಂಚಿ, ಪತ್ರಿಕೆ ಮುಚ್ಚಬೇಕೆಂದಿದ್ದೇನೆ ಎಂದಿದ್ದಳು”- ಈ ಮಾತು ಬಂದ ಕೂಡಲೇ ಷರೀಫಾ ಗದ್ಗದಿತರಾಗುತ್ತಾರೆ. ಅದನ್ನು ತೆರೆಯ ಮೇಲೆ ನೋಡಿ, ನಮಗರಿವಿಗೆ ಬಾರದೇ ಕಣ್ಣೀರು ಹರಿಯಿತು.

ಗೌರಿ ಮುಂಚೂಣಿಯಲ್ಲಿದ್ದ ದಿಡ್ಡಳ್ಳಿ ಹೋರಾಟದಿಂದಾಗಿ ನಿರಾಶ್ರಿತರಿಗೆ ಪುನವರ್ಸತಿ ಸಿಕ್ಕಿತು, ನಕ್ಸಲ್ ಚಳವಳಿಯಲ್ಲಿದ್ದ ಹೋರಾಟಗಾರರು ಮುಖ್ಯವಾಹಿನಿಗೆ ಬಂದರು, ಕೋಮುವಾದದ ಎಲ್ಲ ಚಳವಳಿಗಳಲ್ಲಿ ಗೌರಿ ಸಕ್ರಿಯವಾದರು. ತಂದೆಗೆ ತಕ್ಕ ಮಗಳಾಗಿದ್ದವರು ಗೌರಿ.

ಕವಿತಾ ಲಂಕೇಶ್‌ ಅವರು ನಿರ್ದೇಶಿಸಿರುವ ಈ ಸಾಕ್ಷ್ಯಚಿತ್ರವನ್ನು ಪ್ರತಿ ಕಾಲೇಜಿನಲ್ಲೂ ಪ್ರದರ್ಶಿಸಬೇಕು, ವಿದ್ಯಾರ್ಥಿ ಸಂಘಟನೆಗಳು ಮುಂದೆ ಬಂದು ಕಾರ್ಯಕ್ರಮ ಕೈಗೆತ್ತಿಕೊಳ್ಳಬೇಕು. ಗೌರಿ ಕೊಲೆಯಾದ ಕಾರಣ- ಈ ನಾಡಿನ ಜನತೆಯಲ್ಲಿ ಗೌರಿಯ ಕುರಿತು ಭಾವನಾತ್ಮಕತೆ ಇದೆ. ಆದರೆ ಅಸಂಖ್ಯಾತ ಜನಕ್ಕೆ ಗೌರಿಯ ಬದುಕು, ಹೋರಾಟ, ಚಿಂತನೆಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲ. ಒಂದು ಗಂಟೆಯ ಈ ಸಾಕ್ಷ್ಯಚಿತ್ರ ನಮ್ಮ ಹೊಸ ತಲೆಮಾರಿನಲ್ಲಿ ಅರಿವಿನ ದೀಪ ಹಚ್ಚುತ್ತದೆ, ನಾವು ಕಳೆದುಕೊಂಡಿದ್ದು ಅನರ್ಘ್ಯ ರತ್ನವೆಂಬುದನ್ನು ನೆನೆನೆನೆದು ಕಣ್ಣೀರು ಹಾಕಿಸುತ್ತದೆ, ಗೌರಿ ನಂಬಿದ್ದ ಪ್ರಜಾಸತ್ತಾತ್ಮಕ, ಸಂವಿಧಾತ್ಮಕ ಮೌಲ್ಯಗಳ ಉಳಿವು ಅಗತ್ಯ ಎಂಬುದನ್ನು ಮನವರಿಕೆ ಮಾಡಿಕೊಳ್ಳುತ್ತದೆ.

ಇಂಥದ್ದೊಂದು ಸಾಕ್ಷ್ಯಚಿತ್ರ ನೀಡಿದ ಹೋರಾಟದ ಎಲ್ಲ ಒಡನಾಡಿಗಳಿಗೆ ಶರಣು…

(2022ರ ಟೊರೊಂಟೊ ವುಮೆನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬೆಸ್ಟ್ ಹ್ಯೂಮನ್ ರೈಟ್ಸ್ ಪ್ರಶಸ್ತಿ ಗೆದ್ದಿರುವ ‘ಗೌರಿ ಸಾಕ್ಷ್ಯಚಿತ್ರ’ವನ್ನು ಗೌರಿ ಜನ್ಮದಿನದ ಅಂಗವಾಗಿ ಬೆಂಗಳೂರಿನಲ್ಲಿ ಪ್ರದರ್ಶಿಸಲಾಯಿತು.)

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ