Thursday, September 19, 2024

ಪ್ರಾಯೋಗಿಕ ಆವೃತ್ತಿ

ನಾಳೆ ಸಕ್ಕರೆನಗರದಲ್ಲಿ ನಮಗೆ ನಾವೇ ಮಾಡಿಕೊಂಡ ”ಗಾಯಗಳು” ನಾಟಕ ಪ್ರದರ್ಶನ

ಮನುಷ್ಯರನ್ನೇ ವಿಭಜಿಸುವ, ಮನುಷ್ಯತ್ವವನ್ನೇ ಅಣಕಿಸುವ ವರ್ಣಭೇದವಂತೂ ಇನ್ನೂ ಕ್ರೂರ. ಇವು ನಮಗೆ ನಾವೇ ಮಾಡಿಕೊಂಡ ಗಾಯಗಳು, ಇವುಗಳಿಗೆ ಮುಖಾಮುಖಿಯಾಗದೇ ನಮಗೆ ಬಿಡುಗಡೆಯಿಲ್ಲ. ಅಂಥ ಅಸಂಖ್ಯಾತ ಗಾಯಗಳ ಕಥೆಗಳನ್ನು ಎತ್ತಿ ತೋರಿಸುವ ಕಥೆ- ಕವನ- ಕಾದಂಬರಿ ಆಧಾರಿತ ರಂಗರೂಪಕ ”ಗಾಯಗಳು” ನಾಟಕ ಪ್ರದರ್ಶನವು ಮಂಡ್ಯನಗರದ ಪಿಇಎಸ್ ಕಾಲೇಜಿನ ವಿವೇಕಾನಂದ ರಂಗಮಂದಿರದಲ್ಲಿ ನಾಳೆ (ಅ.2) ಸಂಜೆ 6.30 ಗಂಟೆಗೆ ಪ್ರದರ್ಶನಗೊಳ್ಳಲಿದೆ.

ಮಂಡ್ಯ ಜಿಲ್ಲೆಯ ಸಮಾನ ಮನಸ್ಕರ ವೇದಿಕೆ, ನೆಲದನಿ ಬಳಗ ಮಂಗಲ, ಮುಸ್ಲಿಂ ಒಕ್ಕೂಟ ಮಂಡ್ಯ, ಎಸ್ಸಿ, ಎಸ್ಟಿ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘ, ಮಂಡ್ಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್‌, ಪ್ರಜ್ಞಾವಂತರ ವೇದಿಕ ಶ್ರೀರಂಗಪಟ್ಟಣ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಸಹಯೋಗದಲ್ಲಿ ನಡೆಯುತ್ತಿರುವ ಈ ನಾಟಕವನ್ನು ‘ನಿರ್ದಿಗಂತ’ದ ನಟ ಪ್ರಕಾಶ್ ರಾಜ್ ಅರ್ಪಿಸಿದ್ದಾರೆ. ಪರಿಕಲ್ಪನೆ, ವಿನ್ಯಾಸ, ನಿರ್ದೇಶನವನ್ನು ಡಾ.ಶ್ರೀಪಾದ ಭಟ್ ನಿರ್ವಹಿಸಿದ್ದಾರೆ. ಸಹ ನಿರ್ದೇಶನವನ್ನು ಶ್ವೇತಾರಾಣಿ ಹಾಸನ,  ಸಂಗೀತವನ್ನು ಅನುಷ್ ಶೆಟ್ಟಿ ಮುನ್ನ, ಸನ್ನುತ ಮೈಸೂರು ಅವರು ನೀಡಿದ್ದು, ಕಲಾ ನಿರ್ದೇಶನವನ್ನು ಬಾಜು ಗುತ್ತಲ ನಿರ್ವಹಿಸಿದ್ದಾರೆ. ಪ್ರವೇಶ ದರ ₹100 ಇದ್ದು, ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ನಾಟಕವನ್ನು ವೀಕ್ಷಿಸುವಂತೆ ಸಮಾನ ಮನಸ್ಕರ ವೇದಿಕೆ ಮನವಿ ಮಾಡಿದೆ.

”ಗಾಯಗಳು” ಹೇಳುವುದೇನು…. 

ಇಡಿಯ ಜಗತ್ತು ಯುದ್ಧೋನ್ಮಾದದಿಂದ ನರಳುತ್ತಿದೆ. ರಾಜಕಾರಣಿಗಳ, ಧರ್ಮಗುರುಗಳ, ಮಾರುಕಟ್ಟೆಯ ದಲ್ಲಾಳಿಗಳ ಕೈಗಳು ಲೇಡಿಮ್ಯಾಕ್ ಬೆತ್ ಳ ಕೈಗಳಂತೆ ಎಷ್ಟು ತೊಳೆದರೂ ತೊಡೆಯಲಾಗದ ರಕ್ತದ ಕಲೆಗಳಿಂದ ತೊಯ್ದದೆ. ಪುರುಷಾಹಂಕಾರದ ಈ ಗಾಯಗಳು ಮೇದಿನಿ ಮತ್ತು ಮಾನಿನಿಯರ ಕರುಳ ಕತ್ತರಿಸುತ್ತಿದೆ. ಮನುಷ್ಯರನ್ನೇ ವಿಭಜಿಸುವ ಮನುಷ್ಯತ್ವವನ್ನೇ ಅಣಕಿಸುವ ವರ್ಣಭೇದವಂತೂ ಇನ್ನೂ ಕ್ರೂರ. ಇವು ನಮಗೆ ನಾವೇ ಮಾಡಿಕೊಂಡ ಗಾಯಗಳು, ಇವುಗಳಗೆ ಮುಖಾಮುಖಿಯಾಗದೇ ನಮಗೆ ಬಿಡುಗಡೆಯಿಲ್ಲ. ಅಂಥ ಅಸಂಖ್ಯಾತ ಗಾಯಗಳ ಕಥೆಗಳಿವೆ ಈ ನೆಲದ ತುಂಬ, ಅವುಗಳಿಂದ ಯುದ್ಧ ಹಾಗೂ ಕೋಮುಹಿಂಸೆಯ ಕಥನಗಳಲ್ಲಿ ಕೆಲವನ್ನು ಆಯ್ದು ಇಲ್ಲ ರಂಗಚಿತ್ರವಾಗಿಸುತ್ತಿದ್ದೇವೆ ಮತ್ತು ಅವು ಸಹಜವಾಗಿಯೇ ಮಹಿಳೆಯರ ನೋವಿನ ಸೊಲ್ಲುಗಳಾಗಿ ಪರಿಣಮಿಸಿವೆ, ನಮ್ಮಿಂದ ಎಣಿಸಲಾದಷ್ಟು ಗಾಯದ ಕಥೆಗಳಿವೆ. ಇಲ್ಲ ಎಣಿಸಲಾಗದ ಅಸಂಖ್ಯ ಕಥೆಗಳ ಬಗೆಗೂ ಸಹಾನುಭೂತಿ, ಸಂತಾಪಗಳಿವೆ.

ರಂಗಭೂಮಿಯ ಆಸಕ್ತಿಯಿಂದ ತೊಡಗಿಕೊಳ್ಳಲೆತ್ನಿಸುತ್ತಿರುವ ರಂಗ ವಿದ್ಯಾರ್ಥಿಗಳ ಕಲಿಕಾ ಪಠ್ಯವಾಗಿಯೂ ಇದನ್ನು ಪ್ರಯೋಗಿಸಲಾಗುತ್ತಿದೆ. ಇಲ್ಲಿ ಕಥೆಗಳಿವೆ. ನಾಟಕದ ಅಯ್ದ ಭಾಗಗಳಿವೆ. ಕಾದಂಬರಿಯ ಪುಟಗಳಿವೆ.

ನಟ ಪ್ರಕಾಶ್ ರಾಜ್ ಕನಸಿನ ಕೂಸು ”ನಿರ್ದಿಗಂತ”

ಮೈಸೂರಿಗೆ ಸಮೀಪದಲ್ಲಿರುವ ಶ್ರೀರಂಗಪಟ್ಟಣದ ಪಕ್ಕದ ಕೆ ಶೆಟ್ಟಹಳ್ಳಿಯಲ್ಲಿ ಶಾಂತವಾಗಿ ಹರಿಯುವ ಲೋಕಪಾವನಿ ನದಿಗೆ ಹೊಂದಿಕೊಂಡಂತೆ ಇರುವ ”ನಿರ್ದಿಗಂತ” ಒಂದು ವಿಭಿನ್ನ ರೀತಿಯ ರಂಗ ಸಾಧ್ಯತೆಗಳನ್ನು ಅನ್ವೇಷಿಸುವ ಸ್ಥಳವಾಗಿದೆ.

ಇಲ್ಲಿ ಹೊಸ ಬಗೆಯ ರಂಗಭೂಮಿಯನ್ನು ಕಟ್ಟಲು ಬೇಕಾದ ಎಲ್ಲಾ ಬಗೆಯ ಸಂಪನ್ಮೂಲಗಳು, ಸೌಲಭ್ಯಗಳ ಜೊತೆಗೆ ಪ್ರಶಾಂತವಾದ ಮತ್ತು ಸ್ಫೂರ್ತಿದಾಯಕ ನೈಸರ್ಗಿಕ ವಾತಾವರಣವಿದೆ. ರಮಣೀಯ ನೋಟಗಳು, ಹರಿಯುವ ನೀರಿನ ಜುಳು ಜುಳು ನಾದ ಮತ್ತು ಇಲ್ಲಿನ ತಾಜಾ ಗಾಳಿಯು ಸೃಜನಶೀಲತೆಯ ಉತ್ತುಂಗವನ್ನು ಮುಟ್ಟುವ ವಾತಾವರಣವನ್ನು ಸೃಷ್ಟಿಸಿದೆ. ಇದು ರಂಗನತಿಟ್ಟಿನ ಪಕ್ಕದಲ್ಲಿರುವ ”ರಂಗದ ತಿಟ್ಟು” ಇದು ಬಹುಭಾಷಾ ನಟ ಮತ್ತು ನಿರ್ದೇಶಕ ಪ್ರಕಾಶ್ ರಾಜ್ ಅವರ ಕನಸಿನ ಕೂಸು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!