ಕರ್ನಾಟಕ ರಾಷ್ಟ್ರೀಯ ಸಮಿತಿ(ಕೆಆರ್‌ಎಸ್) ಪಕ್ಷವು ಸ್ಥಾಪನೆಗೊಂಡು 6 ವರ್ಷಗಳು ತುಂಬಿದ ಹಿನ್ನಲೆ ಆ.10ರಂದು ಬೆಳಿಗ್ಗೆ 11.30ಕ್ಕೆ ಮಂಡ್ಯನಗರದ ಸಿಲ್ವರ್ ಜ್ಯೂಬಿಲಿ ಉದ್ಯಾನದಲ್ಲಿ ಮಹಾಧಿವೇಶನ ನಡೆಯಲಿದೆ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ಸೋಮಸುಂದರ್.ಕೆ.ಎಸ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಆರ್‌ಎಸ್ ಪಕ್ಷವು 2019ರಲ್ಲಿ ಹಿರಿಯ 75ನೇ ಸ್ವಾತಂತ್ರ್ಯ ದಿನಾಚರಣೆಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ, ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್‌ರಿಂದ ಉದ್ಘಾಟನೆಗೊಂಡಿದ್ದು, ಇದೇ ಆ.10ಕ್ಕೆ 6 ವಸಂತಗಳನ್ನು ಪೂರ್ಣಗೊಳಿಸಲಿದೆ ಎಂದರು.
ಅಂದು ಬೆಳಿಗ್ಗೆ 10 ಗಂಟೆಗೆ ನಗರದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆಯಿಂದ ಹಳೇ ಎಂ.ಸಿ.ರಸ್ತೆ, ಆರ್.ಪಿ.ರಸ್ತೆ. ವಿವಿ ರಸ್ತೆ ಮಾರ್ಗವಾಗಿ ಸಿಲ್ವರ್ ಜ್ಯೂಬಿಲಿ ಉದ್ಯಾನದವರೆಗೆ ಮೆರವಣಿಗೆ ನಡೆಸಿ, ಪಕ್ಷದ ಮಹಾಧಿವೇಶನ ಕಾರ್ಯಕ್ರಮ ನಡೆಯಲಿದ್ದು, ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು ಮತ್ತು ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್‌ಕುಮಾರ್ ಮಾತನಾಡಿ, ಸಂಸ್ಥಾಪನಾ ದಿನದ ಹಿಂದಿನ ದಿನವಾದ ಆ.09ರಂದು ಬೆಳಿಗ್ಗೆ 10.30ಕ್ಕೆ ನಗರದ ಗಾಂಧಿ ಭವನದಲ್ಲಿ ಚುನಾವಣಾ ಸುಧಾರಣೆ ಮತ್ತು ಅದರ ಅವಶ್ಯಕತೆ ಬಗ್ಗೆ ವಿಚಾರ ಸಂಕಿರಣವನ್ನು ಆಯೋಜಿಸಿದ್ದು, ದಿಕ್ಸೂಚಿ ಭಾಷಣಕಾರರಾಗಿ ಹಿರಿಯ ಯೋರಾಟಗಾರ ಎಸ್.ಆರ್.ಹಿರೇಮಠ್ ಮಾತನಾಡಲಿದ್ದು, ಮಾಜಿ ಸಚಿವ ಬಿ.ಸೋಮಶೇಖರ್, ರೈತ ಮುಖಂಡರಾದ ಸುನಂದಾ ಜಯರಾಂ, ಬೋರಯ್ಯ ಭಾಗವಹಿಸಲಿದ್ದು, ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಅಧ್ಯಕ್ಷತೆ ವಹಿಸುವರು ಎಂದು ವಿವರಿಸಿದರು.
ಅಂದು ಸಂಜೆ ಗಾಂಧಿ ಭವನದಲ್ಲಿ ಪಕ್ಷದ ಕಾರ್ಯಕಾರಿ ಸಮಿತಿ ಮತ್ತು ಕಾರ್ಯನಿರ್ವಾಹಕ ಸಮಿತಿ ಸಭೆ ನಡೆಯಲಿದ್ದು, ನಾಡು ಎದುರಿಸುತ್ತಿರುವ ಗಂಭೀರ ವಿಚಾರಗಳ ಬಗ್ಗೆ ಚರ್ಚೆ ನಡೆಸಿ, ಮುಂದಿನ ಯೋರಾಟದ ಸ್ವರೂಪಗಳು ಮತ್ತು ಸಂಘಟನೆಯ ವಿಚಾರವಾಗಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದು ಮಾಹಿತಿ ಹಂಚಿಕೊಂಡರು.
ಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ದೀಪ ಮನ್ನೂರು, ಜಿಲ್ಲಾಧ್ಯಕ್ಷ ನಾಗರಾಜು.ಡಿ.ಜಿ, ಗುರುಮೂರ್ತಿ ಇದ್ದರು.




