Friday, September 20, 2024

ಪ್ರಾಯೋಗಿಕ ಆವೃತ್ತಿ

ಇಸ್ರೇಲ್ ದಾಳಿಯಿಂದ 12,000 ಪ್ಯಾಲೇಸ್ತೀನಿಯರ ನರಮೇಧ: ಶಿವಸುಂದರ್

ಕಳೆದ ಅಕ್ಟೋಬರ್ 7ರಿಂದ ಇಲ್ಲಿಯವರಗೆ ಸುಮಾರು 12 ಸಾವಿರ ನಿರಾಯುಧರಾದ ಅಮಾಯಕ ಪ್ಯಾಲೇಸ್ತೀನಿಯರನ್ನು ಇಸ್ರೇಲ್ ನರಮೇಧ ನಡೆಸಿದೆ ಎಂದು ಪ್ರಗತಿಪರ ಚಿಂತಕ ಶಿವಸುಂದರ್ ಆಘಾತ ವ್ಯಕ್ತಪಡಿಸಿದರು.

ಕರ್ನಾಟಕ ಜನಶಕ್ತಿ ಸಂಘಟನೆ ವತಿಯಿಂದ ಮಂಡ್ಯನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಇಸ್ರೇಲ್- ಪ್ಯಾಲೇಸ್ತೀಯನ್ಸ್ ಸಂಘರ್ಷದ ಭೀಕರತೆ ಕುರಿತ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ಯಾಲೇಸ್ತೀಯನ್ನಲ್ಲಿ ಪ್ರತಿ 10 ನಿಮಿಷಕ್ಕೆ ಒಂದು ಮಗುವನ್ನು ಹತ್ಯೆ ಮಾಡಲಾಗುತ್ತಿದೆ. ಪ್ರತಿ ಒಂದು ಗಂಟೆಗೆ 45 ಬಾಂಬ್ ಗಳನ್ನು ಹಾಕಲಾಗುತ್ತಿದೆ, 12 ಸಾವಿರ ಅಮಾಯಕರ ಸಾವಿನಲ್ಲಿ ಐದೂವರೆ ಸಾವಿರ ಮಂದಿ ಮಕ್ಕಳೇ ಇದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಕಳೆದ ಅ.17ರಂದು ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿ ಅತ್ಯಂತ ಖಂಡನೀಯ, ಅದನ್ನು ಸಮರ್ಥಿಸಲು ಸಾಧ್ಯವಿಲ್ಲ, ಆದರೆ ಆನಂತರ ಇಸ್ರೇಲ್ ಸೇನೆಯೂ ಪ್ಯಾಲೇಸ್ತೀನಿಯರ ಮೇಲೆ ಮುಗಿ ಬಿದ್ದಿದೆ. ಕೇವಲ 14 ಮಿ.ಮೀ X 40 ಕಿ.ಮೀ. ವಿಸ್ತೀರ್ಣದ ಗಾಝಾ ಪಟ್ಟಣದಲ್ಲಿ ಸುಮಾರು 23 ಲಕ್ಷ ಪ್ಯಾಲೇಸ್ತೀನಿಯರು ನೆಲೆಸಿದ್ದು, ಅವರನ್ನು ಗುರಿಯಾಗಿಸಿಕೊಂಡು ನಿರಂತರ ದಾಳಿ ನಡೆಸಲಾಗುತ್ತಿದೆ. ಮಹಿಳೆಯರು, ಮಕ್ಕಳೆನ್ನಲ್ಲದೇ ಬೇರೆಡೆಗೆ ವಲಸೆ ಹೋಗುವವರು ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಮೇಲೆಯೂ ದಾಳಿ ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಇಡೀ ಗಾಜಾ ಪಟ್ಟಣದ ಸುತ್ತಮುತ್ತ ಇಸ್ರೇಲ್ 8 ಮೀಟರ್ ಎತ್ತರದ ತಂತಿ ಬೇಲಿ ಹಾಕಿಸಿದ್ದು, ಮೂರೇ ಮೂರು ದ್ವಾರಗಳಲ್ಲಿ ಮಾತ್ರ, ಸೈನಿಕರ ಅನುಮತಿ ಪಡೆದು ಸಂಚರಿಸುವ ಪರಿಸ್ಥಿತಿ ಇದೆ. ಅಲ್ಲದೇ ಯಾರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೂ ಅವರನ್ನು ಆಸ್ಪತ್ರೆಗೆ ಸೇರಿಸಲು ಮೂರು ದಿನ ಮುಂಚಿತವಾಗಿಯೇ ಅನುಮತಿ ಕೇಳಬೇಕು, ಅದು ಇಸ್ರೇಲ್ ಸೈನಿಕರು ಅನುಮತಿಸಿದರೆ ಅವರಿಗೆ ಚಿಕಿತ್ಸೆ ದೊರೆಯಲಿದೆ, ಇಲ್ಲವಾದರೆ ಇಲ್ಲ. ಗಾಜಾ ಪಟ್ಟಣಕ್ಕೆ ನೀರು, ಆಹಾರ ಸೇರಿದಂತೆ ಇನ್ನೂ ಮುಂತಾದ ಜೀವನಾವಶ್ಯಕ ವಸ್ತುಗಳನ್ನು ಕೊಂಡೊಯ್ಯಬೇಕಾದರೆ, ಇಸ್ರೇಲ್ ಅನುಮತಿ ಪಡೆಯಬೇಕಾದ ಸಂಕಷ್ಟ ಸ್ಥಿತಿಯಲ್ಲಿ ಪ್ಯಾಲೇಸ್ತೀನಿಯರು ಬದುಕುತ್ತಿದ್ದಾರೆ ಎಂದರು.

ಒಟ್ಟಾರೆಯಾಗಿ ಉತ್ತರ ಗಾಜಾ ಪಟ್ಟಣದಲ್ಲಿರುವ ಲಕ್ಷಾಂತರ ಪ್ಯಾಲೇಸ್ತೀನಿಯರನ್ನು ದಕ್ಷಿಣ ಪ್ಯಾಲೇಸ್ತೀನ್ ಗೆ ಅಟ್ಟಿ, ಅಲ್ಲಿಂದ ಈಜಿಪ್ಟ್ ನ ಮರುಳುಗಾಡಿಗೆ ಅವರನ್ನು ಓಡಿಸುವುದು ಇಸ್ರೇಲಿಗಳ ಕಾರ್ಯಸೂಚಿಯಾಗಿದೆ. ತಮ್ಮ ನೆಲದಲ್ಲೇ ಪ್ಯಾಲೇಸ್ತೀನಿಯರು ಅತಂತ್ರವಾಗಿ ಬದುಕುವಂತಹ ವಾತಾವರಣ ಸೃಷ್ಠಿಯಾಗಿದೆ, ಯಹೂದಿಗಳ ರಾಷ್ಟ್ರೀಯತೆ ಹಾಗೂ ಜನಾಂಗೀಯ ಶ್ರೇಷ್ಠತೆಗಾಗಿ ಅಮಾಯಕ ಪ್ಯಾಲೇಸ್ತೀನಿಯರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆಂದು ಹೇಳಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮುಖಂಡ ಗುರುಪ್ರಸಾದ್ ಕೆರಗೋಡು, ಕರ್ನಾಟಕ ಜನಶಕ್ತಿಯ ಶಿಲ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!