ಮಂಡ್ಯದ ಬೆಂಗಳೂರು- ಮೈಸೂರು ರಸ್ತೆಯಲ್ಲಿದ್ದ ‘ಗಿರಿಜಾ’ ಟಾಕೀಸ್ ಅನ್ನು ನೆಲಸಮ ಮಾಡಲಾಗಿದ್ದು,ಚಿತ್ರ ರಸಿಕರ ಕಣ್ಣಲ್ಲಿ ಗಿರಿಜಾ ಟಾಕೀಸ್ ಇನ್ನು ನೆನಪು ಮಾತ್ರ.
ಕನ್ನಡ ಚಿತ್ರಗಳು ಸೇರಿದಂತೆ ಪರಭಾಷೆಯ ಚಿತ್ರಗಳನ್ನು ಪ್ರದರ್ಶಿಸುತ್ತಿದ್ದ ಗಿರಿಜಾ ಟಾಕೀಸ್ ಬದಲಾದ ಕಾಲಘಟ್ಟದಲ್ಲಿ ಪ್ರೇಕ್ಷಕರ ಕೊರತೆಯಿಂದ ಕೆಲವು ವರ್ಷಗಳ ಹಿಂದೆಯೇ ಮುಚ್ಚಿತು. ಈಗ ಗಿರಿಜಾ ಟಾಕೀಸ್ ಅನ್ನು ನೆಲಸಮ ಮಾಡಲಾಗಿದ್ದು, ಇನ್ನು ಮುಂದೆ ಈ ಟಾಕೀಸ್ ಮಂಡ್ಯದ ಜನರ ಮನದಲ್ಲಿ ನೆನಪು ಮಾತ್ರವಾಗಿ ಉಳಿದಿದೆ.
ಮೈಸೂರು ಸಕ್ಕರೆ ಕಂಪನಿಯ ವೃತ್ತದ ಬಳಿ 1966 ರಲ್ಲಿ ಗಿರಿಜಾ ಟಾಕಿಸ್ ಅನ್ನು ನಿರ್ಮಾಣ ಮಾಡಲಾಗಿತ್ತು. ಹಲವು ದಶಕಗಳ ಕಾಲ ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿತ್ತು.

ಕನ್ನಡಕ್ಕೆ ಮೊದಲ ಆದ್ಯತೆ ನೀಡಲಾಗಿದ್ದ ಗಿರಿಜಾ ಚಿತ್ರಮಂದಿರದಲ್ಲಿ ಕನ್ನಡ ಸೇರಿದಂತೆ ಪರಭಾಷೆಯ ಹೊಸ ಹೊಸ ಚಿತ್ರಗಳು ರಿಲೀಸ್ ಆಗಿ ಚಿತ್ರ ಪ್ರೇಮಿಗಳ ಮನ ತಣಿಸುತ್ತಿತ್ತು. ಐದಾರು ವರ್ಷಗಳ ಹಿಂದೆ ಪ್ರೇಕ್ಷಕರ ಕೊರತೆಯಿಂದ ಚಿತ್ರ ಪ್ರದರ್ಶನ ಸ್ಥಗಿತ ಮಾಡಲಾಗಿತ್ತಾದರೂ, ಕಟ್ಟಡ ಹಾಗೇ ಇತ್ತು.
ಇಂದು ಗಿರಿಜಾ ಚಿತ್ರಮಂದಿರವನ್ನು ನೆಲಸಮ ಮಾಡಲಾಗುತ್ತಿದ್ದು, ಮಂಡ್ಯದ ಮತ್ತೊಂದು ಸಿನಿಮಾ ಚಿತ್ರಮಂದಿರ ಇತಿಹಾಸದ ಪುಟ ಸೇರಿದಂತಾಯಿತು. ಈಗಾಗಲೇ ಸಿದ್ದಾರ್ಥ,ನಂದಾ ಮತ್ತು ರಾಮಕೃಷ್ಣ ಚಿತ್ರಮಂದಿರಗಳು ಸ್ಥಗಿತವಾಗಿದ್ದು, ಸಿದ್ಧಾರ್ಥ ಚಿತ್ರಮಂದಿರದ ಜಾಗದಲ್ಲಿ ಬೃಹತ್ ಮಾಲ್ ತಲೆಯತ್ತಿದೆ. ಈಗ ಗಿರಿಜಾ ಟಾಕೀಸ್ ಜಾಗದಲ್ಲೂ ಮತ್ತೊಂದು ಬೃಹತ್ ಕಟ್ಟಡ ನಿರ್ಮಾಣವಾಗಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.




