Thursday, September 19, 2024

ಪ್ರಾಯೋಗಿಕ ಆವೃತ್ತಿ

ಬಾಲಕಿ ಅತ್ಯಾಚಾರ- ಕೊಲೆ ಖಂಡಿಸಿ ರಸ್ತೆಗಿಳಿದ ಜನತೆ

ಮಳವಳ್ಳಿ ಪಟ್ಟಣದ ನಿವಾಸಿ ಹತ್ತು ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ವಿವಿಧ ಸಂಘಟನೆಗಳು ಹಾಗೂ ನಾಗರೀಕರು ರಸ್ತೆಗಿಳಿದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಮುಗ್ಧ ಬಾಲಕಿಯ ಫ್ಲೆಕ್ಸ್ ಗಳನ್ನು ಹಿಡಿದು ರಸ್ತೆಗಿಳಿದ ಜನರು ಇಂತಹ ಹೀನ ಕೃತ್ಯವೆಸಗಿದ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಕುರುಬರ ಸಂಘ, ಜನವಾದಿ ಮಹಿಳಾ ಸಂಘಟನೆ, ಕೃಷಿ ಕೂಲಿಕಾರರ ಸಂಘ, ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಬಾಲಕಿಯ ಸಂಬಂಧಿಕರು ಪ್ರತಿಭಟನೆ ನಡೆಸಿ ಕೃತ್ಯವನ್ನು ಖಂಡಿಸಿದರು. ಆರೋಪಿ ಕಾಂತರಾಜು ವಿರುದ್ಧ ಕಠಿಣ ಕ್ರಮ ಕೈಗೊಂಡು ತ್ವರಿತ ವಿಚಾರಣೆ ನಡೆಸಿ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು. ಮಳವಳ್ಳಿ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಕೃತ್ಯಗಳು ಸಾಕಷ್ಟು ನಡೆಯುತ್ತಿದ್ದು, ಪೊಲೀಸರ ಇಂತಹ ಕೃತ್ಯಗಳನ್ನು ತಡೆಯುವಲ್ಲಿ ವಿಫಲವಾಗಿರುವುದರಿಂದ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪಾರ್ಥಿವ ಶರೀರದ ಮೆರವಣಿಗೆ 

ಬಾಲಕಿಯ ಮೃತ ದೇಹ ಮಳವಳ್ಳಿ ಪಟ್ಟಣಕ್ಕೆ ಬರುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಸಾರ್ವಜನಿಕರು ಮೆರವಣಿಗೆಯಲ್ಲಿ ಪಾಲ್ಗೊಂಡು ಸಂತಾಪ ಸೂಚಿಸಿ, ಕಂಬನಿ ಮಿಡಿದರು. ಪಟ್ಟಣದ ಅನಂತ್‌ರಾಮ್ ವೃತ್ತಕ್ಕೆ ಪಾರ್ಥಿವ ಶರೀರ ತರುತ್ತಿದ್ದಂತೆ ಮೃತರ ಕುಟುಂಬಸ್ಥರು, ಸಂಬಂಧಿಕರು ಸೇರಿದಂತೆ ಸಾರ್ವಜನಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಅಕ್ರಮ ದಂಧೆಗೆ ಪೊಲೀಸರ ಕುಮ್ಮಕ್ಕು 

ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿ, ಮುಗ್ಧ ಕಂದಮ್ಮನ
ಮೇಲೆ ಇಂತಹ ಕೃತ್ಯ ನಡೆದಿರುವುದು ಖಂಡನೀಯ, ಬಾಲಕಿಯ ಮೇಲೆ ಪೈಶಾಚಿಕವಾಗಿ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು. ಅಲ್ಲದೇ ಮಳವಳ್ಳಿ ತಾಲ್ಲೂಕು ಆಡಳಿತ ಸಂಪೂರ್ಣ ಕುಸಿದಿದೆ, ಎಲ್ಲೆಲ್ಲಿಯೂ ಗಾಂಜಾ ಮಾರಾಟವಾಗುತ್ತಿದೆ ಎಂದು ಆರೋಪಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಮದ್ಯ ಮಾರಾಟ ಯಥೇಚ್ಚವಾಗಿ ನಡೆಯುತ್ತಿದೆ, ಪಟ್ಟಣದ
ಲಾಡ್ಜ್ ಗಳಲ್ಲಿ ವೇಶ್ಯಾವಾಟಿಕೆ ದಂಧೆಗಳು ನಡೆಯುತ್ತಿವೆ, ಇಲ್ಲಿನ ಪುರ ಠಾಣೆಯಲ್ಲಿರುವ ಇನ್ಸ್ ಪೆಕ್ಟರ್
ರೊಬ್ಬರು ಟೌನ್‌ನಿಂದ ಗ್ರಾಮಾಂತರ ಠಾಣೆಗೆ, ಗ್ರಾಮಾಂತರ ಠಾಣೆಯಿಂದ ಟೌನ್‌ಗೆ ಮೂರು
ಬಾರಿ ವರ್ಗಾವಣೆ ಮಾಡಿಸಿಕೊಂಡು ಪಟ್ಟಣ ಪುರ ಠಾಣೆಗೆ ಬಂದು ಕಾನೂನು ಸುವ್ಯವಸ್ಥೆಯನ್ನು
ಹಾಳು ಮಾಡುತ್ತಿದ್ದಾರೆ. ದಯವಿಟ್ಟು ತಾಲ್ಲೂಕನ್ನು ಬಿಟ್ಟು ಎಲ್ಲಿಗಾದರೂ ಹೋಗಲಿ ಎಂದು
ಪರೋಕ್ಷವಾಗಿ ಇನ್ಸ್ ಫೆಕ್ಟರ್ ರಾಜೇಶ್ ವಿರುದ್ದ ಕಿಡಿಕಾರಿದರು.

ಕುರುಬರ ಸಂಘದ ಉಪಾಧ್ಯಕ್ಷ  ಪುಟ್ಟಬಸವಯ್ಯ ಮಾತನಾಡಿ, ಟ್ಯೂಷನ್‌ಗೆ ಬಂದ ವಿದ್ಯಾರ್ಥಿನಿಯ ಮೇಲೆ ಇಂತಹ ಕೃತ್ಯ ನಡೆಸಿರುವುದನ್ನು ಕುರುಬರ ಸಂಘ ತೀವ್ರವಾಗಿ ಖಂಡಿಸುತ್ತದೆ. ಆರೋಪಿಯನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು, ಇಂತಹ ಘಟನೆ ಮರುಕಳಿಸದಂತೆ ಸರ್ಕಾರ ಮತ್ತು ಪೊಲೀಸ್ ಇಲಾಖೆ ಎಚ್ಚರ
ವಹಿಸಬೇಕು ಎಂದು  ಒತ್ತಾಯಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!