ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮರಿತಿಬ್ಬೇಗೌಡರಿಗೆ ಮೊದಲನೇ ಪ್ರಾಶಸ್ತ್ಯದ ಮತವನ್ನು ಕೊಟ್ಟು ಗೆಲ್ಲಿಸುವುದರ ಮೂಲಕ ಐದನೇ ಭಾರಿಗೆ ಪರಿಷತ್ಗೆ ಕಳುಹಿಸಲು ಕಾಂಗ್ರೆಸ್ ಮುಖಂಡರು ಶ್ರಮಿಸಬೇಕೆಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ ಗಂಗಾಧರ್ ತಿಳಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ವಿಧಾನ ಪರಿಷತ್ ಚುನಾವಣಾ ಸಂಬಂಧ ಮಳವಳ್ಳಿಯಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮರಿತಿಬ್ಬೇಗೌಡರು ಮೂಲ ಮಳವಳ್ಳಿಯವರೇ ಆಗಿರುವುದರಿಂದ ಹೆಚ್ಚಿನ ಮತಗಳು ಇಲ್ಲಿಂದಲೇ ಬರುವಂತೆ ಶಿಕ್ಷಕರನ್ನು ಮನವೊಲಿಸುವ ಪ್ರಯತ್ನವನ್ನು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮಾಡಬೇಕೆಂದು ಸಲಹೆ ನೀಡಿದರು.
ಸತತ ನಾಲ್ಕು ಭಾರಿ ಶಿಕ್ಷಕರ ಕ್ಷೇತ್ರದಿಂದಲೇ ಆಯ್ಕೆಯಾಗಿರುವ ಮರಿತಿಬ್ಬೇಗೌಡರು ಶಿಕ್ಷಕರ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ, ಜೊತೆಗೆ ಶಿಕ್ಷಕರ ಜೊತೆಯಲ್ಲಿಯೇ ಇದ್ದು, ಕಷ್ಟಸುಖಗಳನ್ನು ಅರ್ಥಮಾಡಿಕೊಂಡಿದ್ದಾರೆ. ಕಾಂಗ್ರೆಸ್ಪಕ್ಷ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ, ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ರಾಜ್ಯದ ಜನತೆಗೆ ನೀಡಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿರುವ ಮತದಾರರು ಮರಿತಿಬ್ಬೇಗೌಡರನ್ನು ಗೆಲ್ಲುಸುತ್ತಾರೆಂಬ ವಿಶ್ವಾಸವಿದೆ ಎಂದರು.
ಶಿಕ್ಷಕರ ಬಂಧುಗಳು ಮರಿತಿಬ್ಬೇಗೌಡರಿಗೆ ಮೊದಲ ಪ್ರಾಶಸ್ತ್ಯದ ಮತವನ್ನು ಗೆಲ್ಲಿಸಿ ಮತ್ತಷ್ಟು ಸೇವೆ ಮಾಡುವ ಅವಕಾಶವನ್ನು ಕಲ್ಪಿಸಬೇಕು, ಶಿಕ್ಷಕರ ಋಣ ತೀರಿಸುವ ಜವಾಬ್ದಾರಿಯಲ್ಲಿ ಮರಿತಿಬ್ಬೇಗೌಡರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲಿದ್ದಾರೆಂದು ಹೇಳಿದರು.
ಮೇ 29ರಿಂದ ಪ್ರೌಢಶಾಲೆಗಳು ಆರಂಭಗೊಳ್ಳುತ್ತಿರುವುದರಿಂದ ಹೋಬಳಿ ಮಟ್ಟದಲ್ಲಿ ಮುಖಂಡರು ತಂಡಗಳನ್ನಾಗಿ ಮಾಡಿಕೊಂಡು ವ್ಯಾಪ್ತಿಯ ಶಾಲೆಗಳಿಗೆ ಭೇಟಿ ಕೊಟ್ಟು ಚುನಾವಣಾ ಪ್ರಚಾರದಲ್ಲಿ ತೊಡಗಬೇಕು. 31ರಂದು ನಡೆಯಲಿರುವ ಪೂರ್ವಭಾವಿ ಸಭೆಯಲ್ಲಿ ಪ್ರಚಾರದ ಮಾಹಿತಿಯನ್ನು ತಿಳಿಸಬೇಕಿದೆ ಎಂದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಚಿಕ್ಕಲಿಂಗಯ್ಯ ಮಾತನಾಡಿ, ಶಿಕ್ಷಕರ ಕುಂದುಕೊರತೆಗಳ ಬಗ್ಗೆ ಸ್ಪಂದಿಸುವ ಮರಿತಿಬ್ಬೇಗೌಡರಿಗೆ ಮೊದಲೇ ಪ್ರಾಶಸ್ತö್ಯದ ಮತವನ್ನು ಕೊಟ್ಟು ಗೆಲ್ಲಿಸಲು ಪ್ರತಿ ಗ್ರಾ,ಪಂ ವ್ಯಾಪ್ತಿಯಲ್ಲಿರುವ ಶಾಲಾ ಕಾಲೇಜುಗಳಿಗೆ ಬೇಟಿ ಕೊಟ್ಟು ಶಿಕ್ಷಕರನ್ನು ಮನವೊಲಿಸುವ ಪ್ರಯತ್ನವನ್ನು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಮಾಡಬೇಕಿದೆ, ಹಣ ಇದೆ ಎಂದು ಎಸ್ಎಸ್ಎಲ್ಸಿ ಓದಿದವರಿಗೆ ಮೈತ್ರಿ ಅಭ್ಯರ್ಥಿಯನ್ನಾಗಿ ಮಾಡಿದ್ದು, ಶಿಕ್ಷಕರು ಸೂಕ್ತ ಅಭ್ಯರ್ಥಿಗೆ ಮತಕೊಟ್ಟು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ ರಾಜು ಮಾತನಾಡಿ, ವಿಧಾನಪರಿಷತ್ ಚುನಾವಣೆ ಸಂಬಂಧ ಮೇ 31ರಂದು ಸಂಜೆ 4 ಗಂಟೆಗೆ ಬಸವನಪುರದ ಸಮುದಾಯ ಭವನವೊಂದರಲ್ಲಿ ಶಾಸಕ ಪಿ.ಎಂ ನರೇಂದ್ರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯನ್ನು ಆಯೋಜನೆ ಮಾಡಲಾಗಿದ್ದು, ಹೆಚ್ಚಿನ ಶಿಕ್ಷಕರನ್ನು ಸಭೆಗೆ ಕರೆತರುವ ಪ್ರಯತ್ನವನ್ನು ಕಾಂಗ್ರೆಸ್ ಮುಖಂಡರು ಮಾಡಬೇಕೆಂದು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸಿ.ಮಾಧು ಮಾತನಾಡಿ, ಮಳವಳ್ಳಿ ತಾಲ್ಲೂಕಿನಲ್ಲಿ 667 ಮತದಾರರು ಇದ್ದಾರೆ, 300 ಮಂದಿ ಹೊರಗಡೆ ವಾಸವಿದ್ದು, ಅಂತಹವರನ್ನು ಗುರುತಿಸಿ ದೂರವಾಣಿಯ ಮೂಲಕ ಮರಿತಿಬ್ಬೇಗೌಡರಿಗೆ ಮತ ಹಾಕುವಂತೆ ಮನವಿ ಮಾಡಿಕೊಳ್ಳಬೇಕು, ಈಗಾಗಲೇ ಶಾಸಕರು ವಿಧಾನಪರಿಷತ್ ಚುನಾವಣೆಯಲ್ಲಿ ಯಾವ ರೀತಿ ಮತಯಾಚನೆ ಮಾಡಬೇಕೆಂದು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಮರಿತಿಬ್ಬೇಗೌಡರನ್ನು 5ನೇ ಭಾರಿ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದರು.
ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ, ಮಾಜಿ ಅಧ್ಯಕ್ಷ ದೇವರಾಜು ಮಾತನಾಡಿದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಜ್ಜಹಳ್ಳಿ ರಾಮಕೃಷ್ಣ, ಕೆ.ಎಂ.ದೊಡ್ಡಿ ಪುಟ್ಟರಾಮು, ಬಸವೇಶ್, ದೀಪು, ದಶರಥ, ಶಿವರಾಮು, ಆಶ್ವಿನ್, ಕಿರಣ್ ಶಂಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.




