Friday, September 20, 2024

ಪ್ರಾಯೋಗಿಕ ಆವೃತ್ತಿ

ಭಗವಂತನ ನಂಬಿದರೆ ಬದುಕಲು ಪರ್ಯಾಯ ಮಾರ್ಗ ಕಲ್ಪಿಸುತ್ತಾನೆ : ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

ಭಗವಂತ ಕೊಟ್ಟದ್ದನ್ನು ಸಮರ್ಪಕವಾಗಿ ಬಳಸಿಕೊಂಡರೆ ಭಗವಂತನಿಗೆ ಸಂತೃಪ್ತಿ ಸಿಗುತ್ತದೆ. ಭಗವಂತನನ್ನು ನಂಬಿದರೆ ಪರ್ಯಾಯ ಮಾರ್ಗವನ್ನು ನಮಗೆ ಕಲ್ಪಿಸಿಕೊಡುತ್ತಾನೆ ಎಂದು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ನುಡಿದರು.

ನಾಗಮಂಗಲ ತಾಲ್ಲೂಕಿನ ಬಿ.ಜಿ.ನಗರದಲ್ಲಿ ಆದಿಚುಂಚನಗಿರಿ ವಿಶ್ವವಿದ್ಯಾಲಯ, ಆದಿಚುಂಚನಗಿರಿ ಆಸ್ಪತ್ರೆ ಮತ್ತು ಕರ್ನಾಟಕ ಮಾರ್ವಾಡಿ ಯುವ ಯೂತ್ ಫೆಡರೇಷನ್ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಉಚಿತ ಕೃತಕ ಕೈ ಮತ್ತು ಕಾಲು ಜೋಡಣಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ರೈತರು ಬದುಕು ಹಸನಾಗಬೇಕೆಂದರೆ ಸದೃಢ ಮನಸ್ಸನ್ನಿಟ್ಟು ತಮ್ಮನ್ನು ಪರಿವರ್ತನ ವ್ಯವಸಾಯದಲ್ಲಿ ತೊಡಗಿಸಿ ಕೊಳ್ಳಬೇಕು. ಅಂತಹ ವ್ಯವಸ್ಥೆಯನ್ನು ಕೃಷಿ ಸಚಿವರು ಕಲ್ಪಿಸಿಕೊಡುತ್ತಾರೆ. ಅವರ ಮೇಲೆ ಕಾಲ ಭೈರವೇಶ್ವರ ಸ್ವಾಮಿಯ ಆಶೀರ್ವಾದವಿರಲಿ ಎಂದರು.

ಇಂದು ವಿಜ್ಞಾನ-ತಂತ್ರಜ್ಞಾನ ಅಭಿವೃದ್ಧಿಗೊಳ್ಳುತ್ತಿದೆ. ಮೂರ್ನಾಲ್ಕು ವರ್ಷಗಳಲ್ಲಿ ಕೃತಕ ಜೋಡಣೆ ಮಾಡುವ ಕಾಲುಗಳು ಮಾನವನ ನಿಜವಾದ ಕಾಲುಗಳ ಅಸ್ತಿತ್ವವನ್ನು ಪಡೆದುಕೊಳ್ಳುತ್ತವೆ. ಅನಂತರ ಕ್ರೀಡೆ, ಕೃಷಿ ಇತರ ಚಟುವಟಿಕೆಗಳಲ್ಲಿ ಎಲ್ಲರೂ ಮುಕ್ತವಾಗಿ ತೊಡಗಬಹುದು ಎಂದು ಆತ್ಮ ವಿಶ್ವಾಸ ತುಂಬಿದರು.

ಉತ್ತಮ ಆಡಳಿತ
ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿ, ನಾನು ಹಿಂದಿನ ಸರ್ಕಾರದಲ್ಲಿ ಆರೋಗ್ಯ ಸಚಿವನಾದ ಸಂದರ್ಭದಲ್ಲಿ ಜನರ ಆರೋಗ್ಯ ಉತ್ತಮ ಪಡಿಸುವ ನಿಟ್ಟಿನಲ್ಲಿ ವೈದ್ಯರ ನೇಮಕ, ಉತ್ತಮ ಗುಣಮಟ್ಟದ ಆಸ್ಪತ್ರೆಗಳ ಸ್ಥಾಪನೆ ಮಾಡಿದ್ದೇನೆ. ತಾಲೂಕಿನ ಜನರಾಗಲಿ ಸ್ವಾಮೀಜಿಗಳಾಗಲಿ, ಅಧಿಕಾರಿಗಳಾಗಲಿ ನನ್ನನ್ನು ಮಾಜಿ ಶಾಸಕ ಎಂದು ಕಂಡಿಲ್ಲ. ಕಾಲ ಭೈರವೇಶ್ವರ ಸ್ವಾಮಿಯ ಅನುಗ್ರಹದಿಂದ ನಾನು ಈ ಸಾಲಿನಲ್ಲಿ ಕೃಷಿ ಸಚಿವನಾಗಿ ನೇಮಕ ಗೊಂಡಿದ್ದೇನೆ. ಜಿಲ್ಲಾ ಪಂಚಾಯತ್ ಸದಸ್ಯನಾದ ಸಂದರ್ಭದಲ್ಲಿ ನಿಷ್ಪಕ್ಷಪಾತವಾಗಿ ಆಡಳಿತ ಮಾಡಿದ್ದೇನೆ. ಈಗಲೂ ಅಂತಹ ಆಡಳಿತ ನಡೆಸಿ ಕೊಂಡು ಹೋಗುತ್ತೇನೆ ಎಂದರು.

ಬಡವರ ಮೇಲೆ ಅಪಾರವಾದ ಕಾಳಜಿಯಿದ್ದ, ಕಷ್ಟದಲ್ಲಿ ಇರುವವರ ಕೈ ಹಿಡಿದು ನಡೆಸಿದ ಮಹಾ ಗುರುಗಳು ಬಾಲಗಂಗಾಧರನಾಥ ಮಹಾ ಸ್ವಾಮೀಜಿಯವರು. ಸಾವಿರಾರು ಜನರ ಬಾಳಿಗೆ ಬೆಳಕಾಗಿ ನಿಲ್ಲುತ್ತಿದ್ದ ಶ್ರೀ ಗಳು ಮಠದ ಜವಾಬ್ದಾರಿಯನ್ನು ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರಿಗೆ ಮಠದ ಜವಾಬ್ದಾರಿಯನ್ನು ವಹಿಸಿದರು.ಅದರಂತೆ ಶ್ರೀ ಗಳು ಮಠದ ಸರ್ವ ಜವಾಬ್ದಾರಿ ವಹಿಸಿಕೊಂಡು ಉತ್ತಮವಾಗಿ ಮಠವನ್ನು ಬೆಳೆಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.

248 ಮಂದಿಗೆ ಕೃತಕ ಕೈ-ಕಾಲು ಜೋಡಣೆ
ಪ್ರಾಸ್ತಾವಿಕ ಭಾಷಣ ಮಾಡಿದ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಎಂ.ಜಿ.ಶಿವರಾಂ, ಕೃತಕ ಕೈ ಮತ್ತು ಕಾಲು ಜೋಡಣಾ ಶಿಬಿರಕ್ಕೆ 300ಕ್ಕೂ ಹೆಚ್ಚು ಮಂದಿ ನೊಂದಣಿ ಮಾಡಿಸಿಕೊಂಡಿದ್ದರು. ಶಿಬಿರದಲ್ಲಿ 248 ಮಂದಿಗೆ ಕೃತಕ ಉಚಿತ ಕೈ,ಕಾಲು ಜೋಡಣೆ ಮಾಡಲಾಗಿದೆ. ಇನ್ನುಳಿದ 50ಕ್ಕೂ ಹೆಚ್ಚು ಮಂದಿಗೆ ತಾಂತ್ರಿಕ ಕಾರಣಗಳಿಂದ ಜೋಡಣೆ ಮಾಡಲಾಗಿಲ್ಲ. ಜೋಡಣೆಯಾದವರಲ್ಲಿ 27 ಜನ ಮಹಿಳೆಯರು, ಉಳಿದವರು ಪುರುಷರು. 40 ವರ್ಷ ಮೇಲ್ಪಟ್ಟವರೇ ಹೆಚ್ಚು ಮಂದಿ ಫಲಾನುಭವಿಗಳಾಗಿದ್ದಾರೆ. 248 ಫಲಾನುಭವಿಗಳಲ್ಲಿ 76 ಮಂದಿ ಅಪಘಾತದಲ್ಲಿ ಕೈ-ಕಾಲು ಕಳೆದುಕೊಂಡಿದ್ದರೆ, ಇನ್ನುಳಿದವರು ಗ್ಯಾಂಗ್ರಿನ್ ಮತ್ತು ಇನ್ನಿತರೆ ಕಾಯಿಲೆಗಳಿಂದ ಅಂಗವಿಕಲರಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ದೇವರಾಜು, ಕೆಎಂವೈಎಫ್ ಅಧ್ಯಕ್ಷ ರಮೇಶ್ ಶಂಖಲ, ಮಾಜಿ ಅಧ್ಯಕ್ಷ ಡಾ. ಉತ್ತಮ್ ಕಿಂಚ, ಎಸಿಯು ಕುಲ ಸಚಿವ ಸಿ.ಕೆ ಸುಬ್ಬರಾಯ, ಡಿಹೆಚ್‍ಓ ಧನಂಜಯ, ಆದಿಚುಂಚನಗುರಿ ಆಸ್ಪತ್ರೆಯ ಮುಖ್ಯಸ್ಥರಾದ ಶಿವಕುಮಾರ್, ಆಡಳಿತ ಮಂಡಳಿಯ ಸದಸ್ಯರು, ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!