Tuesday, June 25, 2024

ಪ್ರಾಯೋಗಿಕ ಆವೃತ್ತಿ

ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಸೇವೆ ಸಿಗಬೇಕು

ಪ್ರತಿಯೊಬ್ಬ ಪ್ರಜೆಗೂ ಉತ್ತಮ ಆರೋಗ್ಯ ಸೇವೆ ಸಿಗಬೇಕು ಎನ್ನುವ ಉದ್ದೇಶ ನನ್ನದಾಗಿದ್ದು, ಅದಕ್ಕಾಗಿ ಕೊಡಿಯಾಲದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ತಿಳಿಸಿದರು.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕೊಡಿಯಾಲ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಕೊಡಿಯಾಲ ಗ್ರಾಮವು ಬಡವರು, ನೇಕಾರರು ಹಾಗೂ ರೈತಾಪಿ ವರ್ಗ ನೆಲೆಸಿರುವ ಗ್ರಾಮವಾಗಿದೆ.

ಹೆಚ್ಚು ಜನಸಂದಣಿಯುಳ್ಳ ಕೊಡಿಯಾಲ ಗ್ರಾಮದಲ್ಲಿ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ 1.70 ಕೋಟಿ ರೂ. ವೆಚ್ಚದಲ್ಲಿ 7 ಹಾಸಿಗೆಗಳ ಸಾಮರ್ಥ್ಯದ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನಿರ್ಮಾಣ ಮಾಡಲಾಗಿದ್ದು, ಶಸ್ತ್ರಚಿಕಿತ್ಸಾ ಕೊಠಡಿ, ಹೆರಿಗೆ ಕೊಠಡಿ, ಔಷಧ ಶೇಖರಣಾ ಕೊಠಡಿ, ಪ್ರಯೋಗಾಲಯ, ಪುರುಷ ಮತ್ತು ಮಹಿಳೆಯರ ಪ್ರತ್ಯೇಕ ವಾರ್ಡ್ ಹಾಗೂ ವೈದ್ಯಾಧಿಕಾರಿಗಳ ಕೊಠಡಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕೋವಿಡ್ ಸೋಂಕು ಅಲ್ಪ ಪ್ರಮಾಣದಲ್ಲಿ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ತುರ್ತಾಗಿ ಆಸ್ಪತ್ರೆ ಸಾರ್ವಜನಿಕ ಸೇವೆಗಾಗಿ ತೆರೆಯಲಾಯಿತು ಎಂದರು.

ಕೊಡಿಯಾಲ ಗ್ರಾಮಕ್ಕೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದ್ದು, ನಮ್ಮ ತಾಯಿ ಪಾರ್ವತಮ್ಮ ಅವರು ಶಾಸಕರಾಗಿದ್ದಾಗ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಮನವೊಲಿಸಿ ಗ್ರಾಮಕ್ಕೆ 24 ಗಂಟೆಗಳ ವಿದ್ಯುತ್ ಸಂಪರ್ಕ ಕಲ್ಪಿಸಿ ನೇಕಾರರ ಬದುಕು ಹಸನಾಗಲು ಶ್ರಮಿಸಿದ್ದರು.

ನಮ್ಮ ತಂದೆ ಎ.ಸಿ.ಶ್ರೀಕಂಠಯ್ಯನವರ ಪ್ರಯತ್ನದಿಂದ ಎಸ್.ಬಿ.ಐ.ಬ್ಯಾಂಕ್ ಬಹಳ ವರ್ಷಗಳ ಹಿಂದೆಯೇ ಆರಂಭಗೊಂಡಿದೆ. ನನ್ನ ಅವಧಿಯಲ್ಲಿ ಆಸ್ಪತ್ರೆ ಕಟ್ಟಡ ಹಾಗೂ ಗ್ರಾಮ ಪರಿಮಿತಿ ರಸ್ತೆಗಳು ಅಭಿವೃದ್ಧಿ ಕಂಡಿವೆ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಟಿ.ಎನ್.ಧನಂಜಯ್ ಅವರು ಉತ್ತಮ ಅಧಿಕಾರಿಯಾಗಿದ್ದು, ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಪ್ರಯತ್ನಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಟಿ.ಎನ್.ಧನಂಜಯ್ ಮಾತನಾಡಿ, ಕೊಡಿಯಾಲದ ಪ್ರಾಥಮಿಕ ಆರೋಗ್ಯ ಕೇಂದ್ರವು ವಾರಪೂರ್ತಿ ಕಾರ್ಯನಿರ್ವಹಿಸಲಿದೆ. ಮುಂದಿನ 15 ದಿನಗಳಲ್ಲಿ ಆಸ್ಪತ್ರೆಗೆ ಆಗತ್ಯವಿರುವ ಸಲಕರಣೆಗಳನ್ನು ಪೂರೈಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ತಾಲ್ಲೂಕಿನಲ್ಲಿ ಸಾಕಷ್ಟು ವೈದ್ಯರು ಲಭ್ಯವಿದ್ದು, ಆರೋಗ್ಯ ಸೇವೆ ವ್ಯತ್ಯಯವಾಗದಂತೆ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.

ವೇದಿಕೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ವೆಂಕಟೇಶ್, ವೈದ್ಯಾಧಿಕಾರಿ ಡಾ.ಹೇಮಲತಾ, ಜಿ.ಪಂ. ಮಾಜಿ ಸದಸ್ಯ ಮರಿಗೌಡ, ತಾಪಂ ಮಾಜಿ ಸದಸ್ಯರಾದ ದೇವೇಗೌಡ, ಭಾಸ್ಕರ್, ಮುಖಂಡರಾದ ರೈಸಮಿಲ್ ದೇವೇಗೌಡ, ನಟರಾಜು, ಹೇಮಂತ್, ಕಿಶೋರ್ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!