Friday, September 20, 2024

ಪ್ರಾಯೋಗಿಕ ಆವೃತ್ತಿ

ಆಡಳಿತ ಸರ್ಕಾರಗಳು ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿವೆ : ಕುಮಾರ ಕೊಪ್ಪ

ವರದಿ : ಪ್ರಭು ವಿ.ಎಸ್.

ಡಾ. ಬಿ.ಆರ್. ಅಂಬೇಡ್ಕರ್ ಅವರು ವಿಶ್ವವೇ ಮೆಚ್ಚುವ ಸಂವಿಧಾನ ರಚಿಸಿ ಭವ್ಯ ಭಾರತದಲ್ಲಿ ಎಲ್ಲಾ ಜನರು ನೆಮ್ಮದಿಯಾಗಿ ಬದುಕುವಂತೆ ಮಾಡಿದ್ದಾರೆ. ಸಂವಿಧಾನ ಭಾರತದ ಪವಿತ್ರ ಗ್ರಂಥ ಎಂದು ಯಂಬಾರ್ಜಿಯರ್ ಮಠದ ಅಧ್ಯಕ್ಷ ಕುಮಾರ ಕೊಪ್ಪ ಹೇಳಿದರು.

ಮದ್ದೂರು ತಾಲೂಕಿನ ಬೆಸಗರಹಳ್ಳಿ ಗ್ರಾಮದ ಬಸ್ ನಿಲ್ದಾಣದ ಆವರಣದಲ್ಲಿ ನೆಲದಸಿರಿ ಗ್ರಾಮಾಭಿವೃದ್ಧಿ ಸೇವಾ ಟ್ರಸ್ಟ್ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರ ಸವಿ ನೆನಪಿನಲ್ಲಿ ಸಂವಿಧಾನ ದಿನಾಚರಣೆ, ವಿಚಾರ ಸಂಕಿರಣ ಹಾಗೂ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿಗೆ ಅಧಿಕಾರಕ್ಕೆ ಬಂದ ಸರ್ಕಾರಗಳು ಸಂವಿಧಾನವನ್ನು ಬದಲಾಯಿಸುವ ಬಗ್ಗೆ ಮಾತನಾಡುತ್ತಿದ್ದಾರೆ‌. ಅಂಬೇಡ್ಕರ್ ಅವರು ದೂರ ದೃಷ್ಟಿಯ ಕನಸಿಟ್ಟುಕೊಂಡು ಸರ್ವ ಜನಾಂಗದವರಿಗೂ ಸಾಮಾಜಿಕ ನ್ಯಾಯ ಒದಗಿಸುವ ದೃಷ್ಟಿಯಿಂದ ಸಂವಿಧಾನವನ್ನು ರಚಿಸಿದ್ದಾರೆ. ಹಿಂದುಳಿದವರಿಗೆ, ಮಹಿಳೆಯರಿಗೆ, ದಮನಿತರಿಗೆ ನ್ಯಾಯ ಒದಗಿಸುವಲ್ಲಿ ಅಂಬೇಡ್ಕರ್ ಅವರು ಸಫಲರಾಗಿದ್ದಾರೆ. ಆಡಳಿತ ಮಾಡುವ ಸರ್ಕಾರಗಳು ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಮನಸೊ ಇಚ್ಛೆ ಆಡಳಿತ ಮಾಡುತ್ತಿವೆ ಎಂದು ಕಿಡಿಕಾರಿದರು.

ಭಾರತದ ಸಂವಿಧಾನ ಶೋಷಿತರ, ಧಮನಿತರ ಬಡವರ ಹಾಗೂ ತುಳಿತಕ್ಕೊಳಗಾದವರಿಗೆ ಆಧಾರ ಸ್ತಂಭವಾಗಿದೆ. ಸಂವಿಧಾನ ಬದಲಾಯಿಸುವ ಮಾತನಾಡಿದರೆ ದೇಶದಲ್ಲಿ ರಕ್ತ ಚರಿತ್ರೆ ಉಂಟಾಗುತ್ತದೆ. ಕೆಲವು ಮನುವಾದಿಗಳು ಸಂವಿಧಾನವನ್ನು ಬದಲಾಯಿಸುವ ಹಾಗೂ ಶೋಷಣೆಯನ್ನು ಹೆರುವ ಪದ್ಧತಿಯನ್ನು ಜಾರಿಗೆ ತರಲು ಹವಣಿಸುತ್ತಿವೆ ಅದು ಸಾಧ್ಯವಿಲ್ಲ. ಸಂವಿಧಾನವನ್ನು ರಕ್ಷಣೆ ಮಾಡದಿದ್ದರೆ ಮುನ್ನೊಂದು ದಿನ ಭಾರತಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.

ಕೀಳಘಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ನರಸಿಂಹರಾಜು ಮಾತನಾಡಿ, ಅಂಬೇಡ್ಕರ್ ಅವರು ಪರಿಶ್ರಮ ಪಟ್ಟು ಎಲ್ಲಾ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ, ಪರಿಪೂರ್ಣವಾದ ಹಾಗೂ ವಿಭಿನ್ನತೆಯಲ್ಲಿ ಏಕತೆ ಕಂಡ ಭಾರತ ದೇಶಕ್ಕೆ ಸಂವಿಧಾನವನ್ನು ನೀಡಿದ್ದಾರೆ. ಹಗಲು ಇರುಳೆನ್ನದೆ ನಿರಂತರವಾಗಿ ಸಂವಿಧಾನ ರಚನೆ ಮಾಡಲು ತಮ್ಮ ಜೀವವನ್ನು ದಾರೆ ಎರೆದಿದ್ದಾರೆ. ಅವರ ಶ್ರಮ ಸಾರ್ಥಕವಾಗಬೇಕಾದರೆ ಪ್ರತಿ ಮನೆಯಲ್ಲೂ ಧರ್ಮ ಗ್ರಂಥಗಳು ಹೇಗಿದೆಯೋ ಹಾಗೆಯೇ ಸಂವಿಧಾನವು ಕೂಡ ಇರಬೇಕು. ಬಾಲ್ಯದಿಂದಲೇ ಮಕ್ಕಳಿಗೆ ಸಂವಿಧಾನವನ್ನು ಹೇಳಿಕೊಡಬೇಕು. ದೇಶದ ಕಾನೂನಿಗೆ ಸಂವಿಧಾನದ ಮೂಲಕ ಬಹುದೊಡ್ಡ ಶಕ್ತಿ ಇದೆ. ಸಂವಿಧಾನದ ಆಶಯಗಳನ್ನು ಈಡೇರಿಸಲು ಪ್ರತಿಯೊಬ್ಬರು ಮುಂದಾಗಬೇಕು ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗೊರವನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಧುಸೂದನ, ರೈತ ಸಂಘದ ಹಿರಿಯ ಹೋರಾಟಗಾರ ಅಣ್ಣೂರು ಮಹೇಂದ್ರ, ನಿವೃತ್ತ ಎಎಸ್ಐ ಪುಟ್ಟಸ್ವಾಮಿ ಅವರನ್ನು ಅಭಿನಂದಿಸಲಾಯಿತು.

ಗ್ರಾ.ಪಂ ಅಧ್ಯಕ್ಷರಾದ ಸಿ.ಜೋತಿ ನಾರಾಯಣ್, ಎ.ಎಸ್. ಪ್ರದೀಪ್, ಯುವ ಮುಖಂಡ ಎನ್‌.ಡಿ‌ ಗೋವಿಂದರಾಜು, ರೈತ ಮುಖಂಡ ಕೀಳಘಟ್ಟ ನಂಜುಂಡಯ್ಯ, ದಲಿತ ಹೋರಾಟಗಾರ ಬಿ.ಎಂ.ಸತ್ಯ, ಉಪ ತಹಶೀಲ್ದಾರ್ ಕೆ‌. ದೇವರಾಜು, ನೆಲದಸಿರಿ ಗ್ರಾಮಾಭಿವೃದ್ಧಿ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಗೂಳೂರು ನಾಗರಾಜು, ಅಧ್ಯಕ್ಷ ಬಿ.ಎ. ಮಧುಕುಮಾರ, ಕಾರ್ಯದರ್ಶಿ ಹುರುಗಲವಾಡಿ ರಾಮಯ್ಯ ಸಂಚಾಲಕ ಟಿ.ಎಂ. ಸುಂದರೇಶ, ಸಹ ಸಂಚಾಲಕ ಎ.ಎನ್. ನಂದೀಶ, ಸಾಂಸ್ಕೃತಿಕ ಕಾರ್ಯದರ್ಶಿ ಎನ್. ಚಂದ್ರಕಾಂತ, ಖಜಾಂಚಿ ಸಿ.ವಿ. ನಾರಾಯಣಪ್ಪ ಸೇರಿದಂತೆ ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!