ಮದ್ದೂರು ಪಟ್ಟಣದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಹೋಟೆಲ್ ನಲ್ಲಿ ಸಂಸ್ಥೆಯ ನೌಕರರಿಗೆ ಕಳಪೆ ಗುಣಮಟ್ಟದ ವಿತರಣೆ ಮಾಡಲಾಗುತ್ತಿದೆ ಎಂಬ ದೂರಿನ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ವಕೀಲರು ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.
ಸುಪ್ರೀಂ ಕೋರ್ಟ್ ವಕೀಲ ಹೆಚ್.ಬಿ.ಶಿವರಾಜು ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಬಸ್ ನಿಲ್ದಾಣದ ಆವರಣದ ಹೋಟೆಲ್ ಗೆ ಭೇಟಿ ನೀಡಿ ಪರಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಕೀಲ ಹೆಚ್.ಬಿ.ಶಿವರಾಜು ಅವರು, ಚಾಲಕ ಮತ್ತು ನಿರ್ವಾಹಕರಿಗೆ ಬಿಸಿ ಆಹಾರ ಮತ್ತು ಶುದ್ದೀಕರಿಸಿದ ನೀರು ನೀಡಬೇಕು, ಅವರೇ ಈ ಹೋಟೆಲ್ ವ್ಯಾಪಾರಕ್ಕೆ ಕಾರಣಕರ್ತರು, ಅವರು ಆರೋಗ್ಯವಾಗಿದ್ದರೆ ನಿಮ್ಮ ಹೋಟೆಲ್ ಹೆಚ್ಚು ಲಾಭಗಳಿಸಲು ಸಾಧ್ಯ ಎಂದು ಮಾಲೀಕರಿಗೆ ಕಿವಿ ಮಾತು ಹೇಳಿದರು.
ಹೋಟೆಲ್ ಹೊರಗೆ ಮತ್ತು ಒಳಭಾಗದಲ್ಲಿ ಸ್ವಚ್ಚತೆಗೆ ಆದ್ಯತೆ ನೀಡುವಂತೆ ಸೂಚಿಸಿದ ಅವರು ಸಾರಿಗೆ ಸಂಸ್ಥೆಯ ಸಿಬ್ಬಂದಿಗಳಿಂದ ಮತ್ತೆ ದೂರು ಬರದಂತೆ ಕ್ರಮ ವಹಿಸುವಂತೆ ಮಾಲೀಕರಿಗೆ ಸೂಚಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘವು ನೌಕರರು ಮತ್ತು ಅವರ ಕುಟುಂಬದವರ ಹಿತರಕ್ಷಣೆಗಾಗಿ ದಿನದ 24 ಗಂಟೆಯೂ ಕೆಲಸ ಮಾಡುತ್ತಿದೆ. ಸಂಘದ ಸದಸ್ಯರಾದವರಿಗೆ ಸಾರಿಗೆ ಸಂಸ್ಥೆಯ ಕೆಲವು ಪ್ರಕರಣಗಳಿಗೆ ಉಚಿತ ಕಾನೂನು ನೆರವು ದೊರಕಿಸಿಕೊಡಲಾಗುತ್ತಿದೆ. ನೌಕರರು ತಮ್ಮ ಸಮಸ್ಯೆಗಳನ್ನು ಸಂಘದ ಸಹಾಯವಾಣಿಗೆ ದೂರವಾಣಿ ಕರೆ ಮಾಡಿ ನೆರವು ಪಡೆದುಕೊಳ್ಳುವಂತೆ ಸೂಚಿಸಿದರು.
ಮದ್ದೂರು ಬಸ್ ನಿಲ್ದಾಣದಲ್ಲಿದ್ದ ಸಾರಿಗೆ ಸಿಬ್ಬಂದಿಯ ಕುಂದುಕೊರತೆಗಳನ್ನು ಆಲಿಸಿದ ಅವರು ಸಂಘದ ಸಹಾಯವಾಣಿ 94812 11019ಗೆ ಕರೆ ಮಾಡುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದರು.
ಈ ವೇಳೆ ನೌಕರರ ಸಂಘದ ಅಧ್ಯಕ್ಷ ಭೈರಣ್ಣ, ಕಾರ್ಯಾಧ್ಯಕ್ಷ ವೇಣುಗೋಪಾಲ್, ನಿರ್ದೇಶಕರಾದ ಪ್ರಕಾಶ್, ಜಯದೇವ್, ಕುಮಾರ್, ಮತ್ತಿತರರು ಇದ್ದರು.




