ರಾಜ್ಯದ ಬಿಪಿಎಲ್ ಪಡಿತರ ಕಾರ್ಡುದಾರರಿಗೆ ಅಕ್ಕಿ ಜೊತೆಗೆ ಬೇಳೆ, ಉಪ್ಪು, ಸಕ್ಕರೆ, ಸೋಪು ಹಾಗೂ ಅಡುಗೆ ಎಣ್ಣೆಯಂತಹ ಅಗತ್ಯ ಪಡಿತರ ಸಾಮಗ್ರಿಗಳನ್ನು ವಿತರಣೆ ಮಾಡಲು ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಸರಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ ಒತ್ತಾಯಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರದಿಂದ 10 ಕೆ.ಜಿ. ಅಕ್ಕಿ ವಿತರಣೆ ಮಾಡುತ್ತಿದೆ. ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ದಿನೇ ದಿನೇ ಏರಿಕೆ ಕಾಣುತ್ತಿದ್ದು, ಇಂತಹ ದಿನನಿತ್ಯದ ಬಳಕೆ ವಸ್ತುಗಳನ್ನು ನೀಡಿದರೆ, ಜನಸಾಮಾನ್ಯರ ಮೇಲಿನ ಹೊರೆ ತಗ್ಗಲಿದೆ ಎಂದರು.
2013ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಬೇಳೆ, ಉಪ್ಪು, ಸಕ್ಕರೆ, ಸೋಪು ಹಾಗೂ ಅಡುಗೆ ಎಣ್ಣೆಯನ್ನು ನೀಡಲಾಗುತ್ತಿತ್ತು. ಈ ಬಾರಿ ಚುನಾವಣೆಯ ವೇಳೆಯಲ್ಲಿಯೂ ತಮ್ಮ ಪ್ರಣಾಳಿಕೆಯಲ್ಲಿ ಈ ವಸ್ತುಗಳನ್ನು ನೀಡುವುದಾಗಿ ಘೋಷಣೆ ಮಾಡಿದ್ದರು. ಹಾಗಾಗಿ ಈ ಯೋಜನೆಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ಈ ಆಹಾರ ಪದಾರ್ಥಗಳ ಮೇಲೆ ಸರ್ಕಾರದ ಲಾಂಛನ, ಮುಖ್ಯಮಂತ್ರಿಗಳು, ಆಹಾರ ಸಚಿವರ ಫೋಟೋ ಹಾಕುವ ಮೂಲಕ ಸರ್ಕಾರಕ್ಕೂ ಹೆಚ್ಚಿನ ಪ್ರಚಾರ ದೊರೆಯಲಿದೆ. ರಾಜ್ಯದ ಸಗಟು ಮಳಿಗೆಗಳಿಗೆ ಎಲೆಕ್ಟ್ರಾನಿಕ್ ಸ್ಕೇಲ್, ಸಿಸಿಟಿವಿ ಕ್ಯಾಮೆರಾ ಹಾಗೂ ಸಾಗಾಣಿಕೆ ಮಾಡುವ ಲಾರಿಗಳಿಗೆ ಜಿಪಿಎಸ್ ಅಳವಡಿಸಲು 33 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದು, ಈವರೆಗೆ ಈ ವ್ಯವಸ್ಥೆಗಳನ್ನು ಕಲ್ಪಿಸಿಲ್ಲ. ತಿಂಗಳೊಳಗೆ ಎಲೆಕ್ಟ್ರಾನಿಕ್ ಸ್ಕೇಲ್, ಸಿಸಿಟಿವಿ ಕ್ಯಾಮೆರಾ ಹಾಗೂ ಸಾಗಾಣಿಕೆ ಮಾಡುವ ಲಾರಿಗಳಿಗೆ ಜಿಪಿಎಸ್ ಅಳವಡಿಸದಿದ್ದರೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಹನಕೆರೆ ರಾಜಣ್ಣ, ಮಹದೇವು, ನಂಜುಂಡೇಗೌಡ, ದೇವರಾಜು, ಮಂಟೇಸ್ವಾಮಿ, ವಜ್ರೇಗೌಡ ಇದ್ದರು.




