Sunday, October 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಗ್ರಾಮ ಸ್ವರಾಜ್ಯಕ್ಕಾಗಿ ನಾಳೆಯಿಂದ ಗ್ರಾ.ಪಂ. ಸದಸ್ಯರ ನಿರ್ಣಾಯಕ ಹೋರಾಟ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ವತಿಯಿಂದ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಸೇರಿ ಗ್ರಾಮ ಸ್ವರಾಜ್ಯಕ್ಕಾಗಿ ಗ್ರಾಮ ಪಂಚಾಯಿತಿ ಸದಸ್ಯರ ನಿರ್ಣಾಯಕ ಹೋರಾಟವನ್ನು ಅ.4ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ರಾಜ್ಯ ಸಂಚಾಲಕ ನಾಗೇಶ್ ಉಪ್ಪಾರಕನಹಳ್ಳಿ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್‌ರಾಜ್ ಕಾಯ್ದೆಯನ್ವಯ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಗ್ರಾ.ಪಂಗಳಿಗೆ ವಹಿಸಲಾಗುತ್ತಿದ್ದು, ಸದರಿ ಯೋಜನೆಗಳ ಅನುಷ್ಠಾನಕ್ಕೆ ಸಮರ್ಪಕ ಅನುದಾನ ಒದಗಿಸದೇ ಗ್ರಾ.ಪಂಗಳು ಸ್ವಂತ ಸಂಪನ್ಮೂಲಗಳಿಂದ ಅನುಷ್ಠಾನ ಮಾಡುವಂತೆ ಕಾಯ್ದೆ ಮೀರಿ ಆದೇಶ ನೀಡುತ್ತಿದ್ದು, ಇದರಿಂದ ಶೇ.95 ರಷ್ಟು ಗ್ರಾ.ಪಂಗಳು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುತ್ತಿವೆಯೆಂದರು.

ಈ ಸಂಬಂಧ 2024ರ ಫೆ.04ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬೆಂಗಳೂರು ಚಲೋ ಹೋರಾಟ ಮಾಡಲಾಗಿದ್ದು, ಸಚಿವ ಪ್ರಿಯಾಂಕ್ ಖರ್ಗೆ ಹೋರಾಟ ಸ್ಥಳಕ್ಕೆ ಭೇಟಿ ನೀಡಿ, ಬೇಡಿಕೆಗಳ ಸಂಬಂಧ ವಿಸ್ತೃತ ಚರ್ಚೆ ನಡೆಸಲು ಅದೇ ತಿಂಗಳ 13ರಂದು ವಿಕಾಸಸೌಧದ ತಮ್ಮ ಕಛೇರಿಯಲ್ಲಿ ಸಭೆ ಕರೆದು ಈಡೇರಿಸುವ ಭರವಸೆ ನೀಡಿದ್ದರೂ, ಈವರೆಗೂ ಯಾವುದೇ ಸಭೆಯಾಗಲಿ, ಬೇಡಿಕೆ ಈಡೇರಿಸುವ ಕೆಲಸವಾಗಲಿ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು.

ಈ ಸಂಬಂಧ ಪಂಚಾಯತ್ ರಾಜ್‌ನ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದು, ಯಾವುದೇ ಪ್ರತಿಕ್ರಿಯೆ ನೀಡಲಾಗಿಲ್ಲ, ಬೆಂಗಳೂರಿನಲ್ಲಿ ಕೇಂದ್ರೀಕರಣಗೊಂಡಿರುವ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಕಾಯ್ದೆಯನ್ವಯ ಯೋಜನೆಗಳನ್ನು ರೂಪಿಸುವ ಹಾಗೂ ಅನುಷ್ಠಾನಗೊಳಿಸುವ ಅಧಿಕಾರ ವಿಕೇಂದ್ರಿಕರಣಗೊಳಿಸುವ ನಿಟ್ಟಿನಲ್ಲಿ ಬೇಡಿಕೆ ಈಡೇರಿಕೆಗೆ ಅ.2ರ ವರೆಗೆ ಗಡುವು ನೀಡಿದ್ದರೂ ಪ್ರತಿಕ್ರಿಯೆ ನೀಡದ ಸರ್ಕಾರದ ವಿರುದ್ಧ ಗ್ರಾಮ ಸ್ವರಾಜ್ಯಕ್ಕಾಗಿ ಗ್ರಾಮ ಪಂಚಾಯಿತಿ ಸದಸ್ಯರ ನಿರ್ಣಾಯಕ ಹೋರಾಟ ನಡೆಸಲಾಗುವುದು ಎಂದರು.

ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷೆ ಸುವರ್ಣಾವತಿ ಮಾತನಾಡಿ, ಸ್ಥಳೀಯ ಸಂಸ್ಥೆಗಳು ಸ್ಥಳೀಯ ಸರ್ಕಾರವೆಂದೇ ಹೇಳುವ ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಯ ಸದಸ್ಯರಿಗೆ ಯಾವುದೇ ನಿರ್ಧಾರ ಕೈಗೊಳ್ಳುವ ಅಧಿಕಾರ ನೀಡಿಲ್ಲ, ಪ್ರತಿ ಯೋಜನೆಗಳ ಅನುಷ್ಠಾನಕ್ಕೆ ಇಂತಿಷ್ಟೇ ಅನುದಾನ ಬಳಕೆಗೆ ನಿರ್ದೇಶನ ನೀಡಲಾಗುತ್ತಿದೆ. ಇಲ್ಲಿನ ಸ್ಥಳೀಯ ಸಮಸ್ಯೆಗಳ ಬಗ್ಗೆ ನಮಗೆ ಮಾತ್ರ ಅರಿವಿದ್ದು, ಇದನ್ನು ಮೇಲ್ಮಟ್ಟದ ಅಧಿಕಾರಿಗಳೂ ಹೇಗೆ ನಿಯಂತ್ರಿಸುತ್ತಾರೆ ಎಂದು ಪ್ರಶ್ನಿಸಿದರು.

ಸ್ಥಳೀಯ ಅನುದಾನವನ್ನು ಸದರಿ ಯೋಜನೆಗಳಿಗೆ ಬಳಸುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಕೂಸಿನ, ಗ್ರಂಥಾಲಯ, ಶೌಚಾಲಯಗಳ ನಿರ್ವಹಣೆ, ಗ್ರಾಮಗಳ ನೈರ್ಮಲ್ಯ ಕಾಪಾಡಲು ವಾಹನ ನೀಡಿದ್ದು, ಅದರ ವೇತನವನ್ನು ಸ್ಥಳೀಯ ಸಂಸ್ಥೆಗಳೇ ಭರಿಸುವಂತೆ ನಿರ್ದೇಶನ ನೀಡಿದ್ದು, ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚು ಹೊರೆಯಾಗುತ್ತಿದೆ. ಅಭಿವೃದ್ಧಿ ದೃಷ್ಠಿಯಿಂದ ತಾವು ರೂಪಿಸುವ ಯೋಜನೆಗಳಿಗೆ ಅನುದಾನ ನೀಡಿ, ಗ್ರಾ.ಪಂ ಆಡಳಿತದಲ್ಲಿ ಹಸ್ತಕ್ಷೇಪ ನಿಲ್ಲಿಸಿ ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಒಕ್ಕೂಟದ ಮಂಡ್ಯ ಗೌರವಾಧ್ಯಕ್ಷ ಬೇವಿನಹಳ್ಳಿ ಮಹೇಶ್, ಅಧ್ಯಕ್ಷ ಪ್ರದೀಪ್ ಸಿದ್ದೇಗೌಡ, ಉಪಾಧ್ಯಕ್ಷ ಕಾಲೇಗೌಡ, ಕಾರ್ಯದರ್ಶಿ ಕೆಂಪೇಗೌಡ ಬೂದನೂರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!