ದಕ್ಷಿಣ ಪದವೀಧರ ಮತ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಜೂನ್ 13 ರಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆವರೆಗೆ ನಿಗದಿ ಪಡಿಸಲಾಗಿದ್ದ ಮತದಾನದ ವೇಳೆಯನ್ನು ಬೆಳಿಗ್ಗೆ 8 ರಿಂದ ಸಂಜೆ 5 ವರೆಗೆ ವಿಸ್ತರಿಸಿದೆ ಎಂದು ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಯೂ ಆಗಿರುವ ಎಸ್. ಅಶ್ವತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರ್ಯಾಯ ಗುರುತಿನ ಚೀಟಿ
ದಕ್ಷಿಣ ಪದವೀಧರ ಮತ ಕ್ಷೇತ್ರದ ಅರ್ಹ ಮತದಾರರು ತಮ್ಮ ಮತದಾರರ ಗುರುತಿನ ಚೀಟಿ ಹಾಜರುಪಡಿಸಿ ಮತದಾನ ಮಾಡುವುದು. ಮತದಾರರ ಗುರುತಿನ ಚೀಟಿ ಇಲ್ಲದ ಮತದಾರರು ತಮ್ಮ ಭಾವಚಿತ್ರದೊಂದಿಗೆ ಹೆಸರು ಇರುವ ಮೂಲ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್,ಭಾರತೀಯ ಪಾಸ್ ಪೋರ್ಟ್, ರಾಜ್ಯ/ಕೇಂದ್ರ ಸರ್ಕಾರ, ಪಬ್ಲಿಕ್ ಸೆಕ್ಟಾರ್ ಅಂಡರ್‌ಟೇಕಿಂಗ್, ಸ್ಥಳೀಯ ಸಂಸ್ಥೆಗಳು ತನ್ನ ಉದ್ಯೋಗಿಗಳಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ, ಎಂಪಿ/ಎಂಎಲ್‌ಎ/ಎಂಎಲ್.ಸಿ ಅವರಿಗೆ ನೀಡಲಾಗಿರುವ ಅಧಿಕೃತ ಗುರುತಿನ ಚೀಟಿಗಳು, ಸಂಬಂಧಪಟ್ಟ ಶಿಕ್ಷಕರ/ಪದವೀಧರರ ಕ್ಷೇತ್ರದ ಮತದಾರರನ್ನು ನೇಮಿಸಿಕೊಳ್ಳಬಹುದಾದ ಶಿಕ್ಷಣ ಸಂಸ್ಥೆಗಳಿಂದ ನೀಡಲಾದ ಸೇವಾ ಗುರುತಿನ ಚೀಟಿ,ವಿಶ್ವವಿದ್ಯಾಲಯವು ನೀಡಿದ ಪದವಿ/ಡಿಪ್ಲೊಮಾ ಪ್ರಮಾಣಪತ್ರದ ಮೂಲಪ್ರತಿ, ಸಕ್ಷಮ ಪ್ರಾಧಿಕಾರದಿಂದ ನೀಡಿದ ದೈಹಿಕ ನ್ಯೂನತೆಯ ಪ್ರಮಾಣಪತ್ರ, ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಿಂದ ನೀಡಲಾಗಿರುವ ವಿಶಿಷ್ಟ ಅಂಗವೈಕಲ್ಯ ಕಾರ್ಡ್ ಅನ್ನು ಮತದಾರರು ಪರ್ಯಾಯವಾಗಿ ಹಾಜರು ಪಡಿಸಿ ಮತದಾನ ಮಾಡಬಹುದು.
ವಿಶೇಷ ಸಾಂದರ್ಭಿಕ ರಜೆ
ಕರ್ನಾಟಕ ವಿಧಾನ ಪರಿಷತ್ತಿನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಿಗೆ ಜೂನ್.13 ರಂದು ಚುನಾವಣೆ ನಡೆಯಲಿದ್ದು, ಅರ್ಹ ಮತದಾರರಿಗೆ ಅಂದು ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲಾಗಿದೆ.
ದಕ್ಷಿಣ ಪದವೀಧರ ಕ್ಷೇತ್ರದ ವ್ಯಾಪ್ತಿ ಜಿಲ್ಲೆಗಳಾದ ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಹಾಸನ, ವಿಧಾನ ಪರಿಷತ್ ಮತ ಕ್ಷೇತ್ರಗಳಲ್ಲಿನ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು, ಅನುದಾನಿತ ಹಾಗೂ ಅನುದಾನ ರಹಿತ ವಿದ್ಯಾ ಸಂಸ್ಥೆಗಳು, ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಛೇರಿಗಳು, ರಾಷ್ಟ್ರೀಕೃತ ಹಾಗೂ ಇತರ ಬ್ಯಾಂಕುಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಖಾನೆಗಳು, ಉಳಿದ ಕೈಗಾರಿಕೆ ಸಂಸ್ಥೆಗಳು ಹಾಗೂ ಸಹಕಾರಿ ರಂಗದ ಸಂಘ ಸಂಸ್ಥೆಗಳಲ್ಲಿ, ಎಲ್ಲಾ ವ್ಯವಹಾರಿಕ ಸಂಸ್ಥೆಗಳಲ್ಲಿ, ಔದ್ಯಮಿಕ ಸಂಸ್ಥೆಗಳಲ್ಲಿ ಮತ್ತು ಇತರ ಸಂಸ್ಥೆಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುವ ಪದವೀಧರರು ಹಾಗೂ ಶಿಕ್ಷಕರು ಮತದಾನ ಮಾಡಲು ಅನುಕೂಲವಾಗುವಂತೆ ಅಂತಹ ಅರ್ಹ ಮತದಾರರಿಗೆ ಮತ ಚಲಾಯಿಸಲಿರುವ ಮತದಾರರಿಗೆ ಜೂ.13 ರಂದು ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.