Friday, May 17, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ‘ಕೈ’ ಅಭ್ಯರ್ಥಿ ಸ್ಟಾರ್ ಚಂದ್ರು ಗೆಲ್ಲಿಸಲು ಮಾನವ ಬಂಧುತ್ವ ವೇದಿಕೆ ಮನವಿ

ಸಂವಿಧಾನ ನಾಶ ಮಾಡುವ ಪಕ್ಷವನ್ನು ಮಣಿಸಬೇಕಾದರೆ ಅದರ ವಿರೋಧಿ ಪಕ್ಷವನ್ನು ಅಧಿಕಾರಕ್ಕೆ ತರುವುದು ಅನಿವಾರ್ಯ. ಆದ್ದರಿಂದ ಮಾನವ ಬಂಧುತ್ವ ವೇದಿಕೆ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸ್ಟಾರ್ ಚಂದ್ರು ಅವರನ್ನು ಬೆಂಬಲಿಸಲು ನಿರ್ಧರಿಸಿದ್ದು, ಜಿಲ್ಲೆಯ ಮತದಾರರು ಕೂಡ ಕಾಂಗ್ರೆಸ್ ಬೆಂಬಲಿಸಬೇಕೆಂದು ವೇದಿಕೆ ಜಿಲ್ಲಾಧ್ಯಕ್ಷ ದೇವರಾಜ್ ಕೊಪ್ಪ ಮನವಿ ಮಾಡಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮತದಾರರು ಕೂಡ ಇದೊಂದು ಕಾಲಾವಕಾಶವನ್ನು ಬಳಸಿಕೊಂಡು ಪ್ರಜಾಪ್ರಭುತ್ವ ರಕ್ಷಣೆಗೆ ನಿಲ್ಲಬೇಕು. ಸಂವಿಧಾನ ವಿರೋಧಿ ಪಕ್ಷವನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕೆಂದದರು.

ಮಾನವ ಬಂಧುತ್ವ ವೇದಿಕೆ ಒಂದು ವೈಜ್ಞಾನಿಕ ಜನಪರ ಸಂಘನೆಯಾಗಿದ್ದು, ಸಮಾಜದಲ್ಲಿ ಮೂಢನಂಬಿಕೆ ತೊಲಗಿಸಿ, ವೈಜ್ಞಾನಿಕ ದೃಷ್ಟಿಕೋನ ಬೆಳೆಸುವ ಕೆಲಸ ಮಾಡುತ್ತಾ ಬಂದಿದೆ. ಸಚಿವರಾದ ಸತೀಶ್ ಜಾರಕಿಹೊಳಿರವರು ಈ ಸಂಘಟನೆಯನ್ನು ಹುಟ್ಟುಹಾಕಿದ್ದು, ಬುದ್ಧ, ಬಸವ, ಅಂಬೇಡ್ಕರ್, ಕುವೆಂಪುರವರ ಚಿಂತನೆಯ ತಳಹದಿಯಲ್ಲಿ ಸಂಘಟನೆಯನ್ನು ಮುನ್ನಡೆಸುತ್ತಾ ಬಂದಿದ್ದಾರೆ. ಇದೊಂದು ರಾಜಕೀಯೇತರ ಸಂಘಟನೆಯಾಗಿದ್ದರು ಈ ಸಂದರ್ಭದಲ್ಲಿ ಅನಿವಾರ್ಯವಾಗಿ ರಾಜಕೀಯವಾಗಿ ತನ್ನ ನಿಲುವನ್ನು ಪ್ರಕಟಿಸಬೇಕಾದ ಸ್ಥಿತಿ ಬಂದಿದೆ ಎಂದು ವಿವರಿಸಿದರು.

“ಭಾರತ” ಎಂದರೆ ಅದೊಂದು ಜಾತ್ಯತೀತ ರಾಷ್ಟ್ರ, ಸಾವಿರಾರು ಜಾತಿ, ಭಾಷೆ, ಸಂಸ್ಕೃತಿಗಳು ಇದ್ದರೂ ಐಕ್ಯತೆ ಮತ್ತು ಸಾಮರಸ್ಯದೊಂದಿಗೆ ಬದುಕುವ ಸರ್ವಜನಾಂಗದ ಶಾಂತಿಯ ತೋಟ ಎಂದೇ ವಿಶ್ವಮಾನ್ಯವಾಗಿದೆ. ಇಂತಹ ರಾಷ್ಟ್ರದಲ್ಲಿ ಇತ್ತೀಚಿಗೆ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಘಟನೆಗಳು ನಡೆಯುತ್ತಾ ಬಂದಿವೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಅಪಾಯ ಉಂಟು ಮಾಡುವ ಬೆಳವಣಿಗೆಗಳು ನಿರಂತರವಾಗಿ ನಡೆಯುತ್ತಲೇ ಇವೆ, ಇಂತಹ ಶಕ್ತಿಗಳನ್ನು ಹಿಮ್ಮೆಟ್ಟಿಸಬೇಕೆಂದ ಅವರು ಹೇಳಿದರು.

ಸಂವಿಧಾನ ಪಾಲಿಸಬೇಕಾದ ಮತ್ತು ರಕ್ಷಿಸಬೇಕಾದ ಪ್ರಜಾಪ್ರತಿನಿಧಿಗಳು ಸಂವಿಧಾನವನ್ನೇ ಬದಲಿಸುವ ಮಾತನಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಜನವಿರೋಧಿ, ರೈತವಿರೋಧಿ ಕಾನೂನುಗಳನ್ನು ಜಾರಿಗೆ ತರುವ ಕೆಲಸವು ಅವರಿಂದ ನಡೆಯುತ್ತಿದೆ. ಇಂತಹ ಬೆಳವಣಿಗೆಗಳು ಪ್ರಜಾಪ್ರಭುತ್ವವನ್ನು ನಾಶ ಮಾಡುವ ಮುನ್ಸೂಚನೆಯಾಗಿದೆ. ಆದ್ದರಿಂದ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಈಗ ರಕ್ಷಣೆ ಬೇಕಾಗಿದೆ ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದು ಕೋರಿದರು.

ಗೋಷ್ಠಿಯಲ್ಲಿ ವೇದಿಕೆಯ ಪದಾಧಿಕಾರಿಗಳಾದ ಎನ್.ಶೇಖರ್ ಹನಿಯಂಬಾಡಿ, ಬಸವರಾಜು, ರವಿ, ಮರಿಸ್ವಾಮಿ, ವಿಜಯ ಕುಮಾರ್ ಹಾಗೂ ಲೋಕೇಶ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!