ಮಂಡ್ಯ ನಗರದ ಕೆ.ಹೆಚ್.ಬಿ ಕಾಲೋನಿಯಲ್ಲಿರುವ ಬ್ಯಾಂಕ್ ಆಫ್ ಬರೋಡ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಗೆ ಮುಂಬೈಯಲ್ಲಿರುವ ನಬಾರ್ಡ್ ಕೇಂದ್ರ ಕಚೇರಿಯ ಅಧಿಕಾರಿಗಳಾದ ಸಾಯಿಕಿರಣ್ ರಿಜ್ವಾನ್ ಹಾಗೂ ಬೆಂಗಳೂರಿನ ನಬಾರ್ಡ್ನ ಪ್ರಾದೇಶಿಕ ಕಚೇರಿಯ ರಾಘವೇಂದ್ರ, ರುಡ್ ಸೆಟ್ / ಆರ್ ಸಿ ಟಿ ಸಂಸ್ಥೆಗಳ ರಾಷ್ಟ್ರೀಯ ನಿರ್ದೇಶಕ ಬಿ.ಸಿ. ಸಹಾ ಹಾಗೂ ರಾಜ್ಯ ನಿರ್ದೇಶಕ ಮಂಜುನಾಥ್ ಭೇಟಿ ನೀಡಿ ಸಂಸ್ಥೆಯಲ್ಲಿ ನಡೆಯುತ್ತಿರುವ ತರಬೇತಿಗಳ ಪರಿಶೀಲನೆ ನಡೆಸಿ ಮಾಹಿತಿ ಪಡೆದರು.
ಅಧಿಕಾರಿಗಳು ಭೇಟಿಯ ಸಮಯದಲ್ಲಿ ತರಬೇತಿಯ ವಿದ್ಯಾರ್ಥಿಗಳೊಂದಿಗೆ ಸಂವಹನ ಮಾಡಿ ತರಬೇತಿ ಅವಧಿಯಲ್ಲಿ ಹಾಗೂ ತರಬೇತಿಯ ನಂತರದಲ್ಲಿ ವಿದ್ಯಾರ್ಥಿಗಳು ಕೈಗೊಳ್ಳುವ ಕಾರ್ಯ ಚಟುವಟಿಕೆಗಳ ಕುರಿತಾಗಿ ಸಂವಾದ ನಡೆಸಿದರು.

ರುಡ್ ಸೆಟ್ / ಆರ್ ಸಿಟಿ ಸಂಸ್ಥೆಗಳ ರಾಷ್ಟ್ರೀಯ ನಿರ್ದೇಶಕರಾದ ಬಿ.ಸಿ. ಸಹಾ ಮಾತನಾಡಿ, ತರಬೇತಿಯ ಕಲಿಕೆಯನ್ನು ವೃತ್ತಿಯನ್ನಾಗಿ ಆರಂಭಿಸಿ ಸ್ವಉದ್ಯೋಗವನ್ನಾಗಿ ರೂಪಿಸಿಕೊಳ್ಳಬೇಕು. ಸಂಸ್ಥೆಯ ತರಬೇತಿಗಳಲ್ಲಿ ಕೌಶಲ್ಯವರ್ಧನೆ ಜೊತೆಗೆ ಜಯಶೀಲತಾ ಅಭಿವೃದ್ಧಿ ಕಾರ್ಯಕ್ರಮವು ಪಠ್ಯದ ಭಾಗವಾಗಿರುವುದರಿಂದ ವಿದ್ಯಾರ್ಥಿಗಳನ್ನು ಉದ್ಯಮಶೀಲರನ್ನಾಗಿಸಲು ಸಹಕಾರಿಯಾಗಿದೆ. ಅವುಗಳನ್ನೆಲ್ಲ ವಿದ್ಯಾರ್ಥಿಗಳು ಜೀವನದಲ್ಲಿ ಹಾಗೂ ಉದ್ಯಮದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ರಾಘವೇಂದ್ರ, ಸಹಾಯಕ ಮುಖ್ಯ ವ್ಯವಸ್ಥಾಪಕರು, ನಬಾರ್ಡ್ ಪ್ರಾದೇಶಿಕ ಕಚೇರಿ ಬೆಂಗಳೂರು, ಅವರು ಸಂಸ್ಥೆಯು ಶಿಬಿರಾರ್ಥಿಗಳಿಗೆ ಒದಗಿಸುತ್ತಿರುವ ಸವಲತ್ತುಗಳು ಹಾಗೂ ಸಂಸ್ಥೆಯಲ್ಲಿ ಕಾಪಾಡಿಕೊಂಡಿರುವ ಸ್ವಚ್ಛತೆ, ಸಂಯಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಮುಂದಿನ ದಿನಗಳಲ್ಲಿ ಸಂಸ್ಥೆಗೆ ಅಗತ್ಯವಿರುವ ಸವಲತ್ತುಗಳನ್ನು ಒದಗಿಸಿಕೊಡಲು ಸಂಸ್ಥೆಗೆ ನಬಾರ್ಡ್ ನೆರವಾಗುತ್ತದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯಲ್ಲಿ ಕಳೆದ ಒಂದು ತಿಂಗಳಿನಿಂದ ನಡೆದ ತರಬೇತಿಗಳಾದ ಹೊಲಿಗೆ ತರಬೇತಿ ,ವಸ್ತ್ರ,ಚಿತ್ರಕಲಾ ಉದ್ಯಮ ತರಬೇತಿಯ ಸಮಾರೋಪ ಸಮಾರಂಭ ಕಾರ್ಯಕ್ರಮದ ಜೊತೆಗೆ ಕಂಪ್ಯೂಟರ್ ತರಬೇತಿಯ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ವಿವೇಕ್ ವಿ, ಉಪನ್ಯಾಸಕರಾದ ಶಶ್ಮಿತಾ ಜೆ. ಆರ್, ಪುರಂದರ್ ಚಿತ್ರಪುರ, ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.




