ಜೆಡಿಎಸ್‌ನ ಕುಟುಂಬ ರಾಜಕಾರಣ ವಿರೋಧಿಸಿ, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಿರುವುದಾಗಿ ಮನ್‌ಮುಲ್ ಮಾಜಿ ಅಧ್ಯಕ್ಷ, ಕೆಎಂಎಫ್ ಮಾಜಿ ನಿರ್ದೇಶಕ ಹಾಗೂ ನಾಗಮಂಗಲ ತಾಲೂಕು ಜೆಡಿಎಸ್ ಮಾಜಿ ಅಧ್ಯಕ್ಷ ಜವರೇಗೌಡ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಟಿ ನೆಸಿ ಮಾತನಾಡಿದ ಅವರು,
ಜೆಡಿಎಸ್ ಪಕ್ಷ ತತ್ವ,ಸಿದ್ಧಾಂತಗಳಿಗೆ ಎಳ್ಳುನೀರು ಬಿಟ್ಟಿದೆ. ಒಮ್ಮೆ ಬಿಜೆಪಿ, ಮತ್ತೊಮ್ಮೆ ಕಾಂಗ್ರೆಸ್‌ನೊಂದಿಗೆ ಮೈತ್ರಿ ಎಂಬ ದ್ವಂದ್ವ ನಮ್ಮಂತಹವರಿಗೆ ಬೇಸರ ತರಿಸಿದೆ. ಕಾರ್ಯಕರ್ತರು ಚುನಾವಣೆಗೆ ಮಾತ್ರ ಸೀಮಿತ ಎಂಬ ಸಿದ್ದಾಂತವನ್ನು ಜೆಡಿಎಸ್ ಅನುಸರಿಸುತ್ತಿದೆ. ಹೀಗಾಗಿ ಸ್ನೇಹಕ್ಕೆ ಬೆಲೆ ನೀಡಿ, ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್ ಸೇರಲಿದ್ದೇವೆ ಎಂದು ತಿಳಿಸಿದರು.
ಮಾಜಿ ಸಚಿವ ದಿವಂಗತ ಎಸ್.ಡಿ.ಜಯರಾಮ್ ಅವರ ನೇತೃತ್ವದಲ್ಲಿ ನಾನು ಜನತಾ ಪಕ್ಷ ಸೇರಿದ್ದೆ.ಸುಮಾರು 45 ವರ್ಷಗಳ ಕಾಲ ನಾನು ಜೆಡಿಎಸ್ ಪಕ್ಷದಲ್ಲಿದ್ದೆ. ದೇವೇಗೌಡರ ಪಕ್ಷಕ್ಕೆ ನಿಷ್ಠೆಯಿದ ಕೆಲಸ ಮಾಡಿದ್ದೇನೆ. ಪಕ್ಷದ ನಿಲುವುಗಳನ್ನು ವಿರೋಧಿಸಿ ಹಲವು ಬಾರಿ ನಾನು ಮುನಿಸಿಕೊಂಡಾಗ ಸ್ವತಃ ದೇವೇಗೌಡರೇ ನನ್ನನ್ನು ಸಂಪರ್ಕಿಸಿ ಮನವೊಲಿಸಿದ್ದರು. ಆದರೀಗ ಪರಿಸ್ಥಿತಿ ಬದಲಾಗಿದೆ. ಮತ್ತೆ ಜೆಡಿಎಸ್‌ಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕಳೆದ ಚುನಾವಣೆಯಲ್ಲಿ ದೇವೇಗೌಡರು, ಕುಮಾರಸ್ವಾಮಿ ಅವರ ಮಾತಿಗೆ ಬೆಲೆ ಕೊಟ್ಟು ನಾಗಮಂಗಲ ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಿಸಿ, ಕಾಂಗ್ರೆಸ್ ಅಭ್ಯರ್ಥಿ ಎನ್.ಚಲುವರಾಯಸ್ವಾಮಿ ಅವರನ್ನು ಸೋಲಿಸಿದ್ದೆವು. ಇದರೊಂದಿಗೆ ಜಿಲ್ಲೆಯ ಎಲ್ಲ 7 ಕ್ಷೇತ್ರಗಳಲ್ಲೂ ಜೆಡಿಎಸ್ ಗೆದ್ದು, ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಹುದ್ದೆಗೇರಿದರು. ಆದರೆ, ನಾಗಮಂಗಲಕ್ಕಾಗಲಿ ಅಥವಾ ಮಂಡ್ಯ ಜಿಲ್ಲೆಗಾಗಲಿ ಯಾವುದೇ ಕೊಡುಗೆ ನೀಡಲಿಲ್ಲ. ಬದಲಿಗೆ ಎಲ್ಲವೂ ಹಾಸನದ ಪಾಲಾಯಿತು. ಅವರ ಮನೆಯವರೆಲ್ಲರೂ ಅಧಿಕಾರ ಅನುಭವಿಸಿದರು.ಆದರೆ ಪಕ್ಷದ ಕಾರ್ಯಕರ್ತರಿಗೆ ನಿಗಮ-ಮಂಡಳಿಗಳಲ್ಲೂ ಅವಕಾಶ ಕೊಡಲಿಲ್ಲ. ಜೆಡಿಎಸ್ ವರಿಷ್ಠರು ಕಾರ್ಯಕರ್ತರನ್ನು ದುಡಿಸಿಕೊಳ್ಳುತ್ತಾರೆ. ಆದರೆ, ಉಳಿಸಿಕೊಳ್ಳುವುದಿಲ್ಲ ಎಂದು ಆರೋಪಿಸಿದರು.
ಮಾಜಿ ಪ್ರಧಾನಿ ದೇವೇಗೌಡ ಮತ್ತವರ ಮಕ್ಕಳು, ಮೊಮ್ಮಕ್ಕಳ ಜೀತ ಮಾಡಲು ಆಗದ ಕಾರಣ ನಾನು ಕಾಂಗ್ರೆಸ್ ಸೇರುತ್ತಿದ್ದೇನೆ.
ಚಲುವರಾಯಸ್ವಾಮಿ ಅವರಿಗೂ ನನಗೂ ವೈಯಕ್ತಿಕವಾಗಿ ವಿರೋಧವಿದ್ದದ್ದು ಸತ್ಯ. ಒಂದು ಕುಟುಂಬ ಎಂದ ಮೇಲೆ ಅಸಮಾಧಾನ, ಭಿನ್ನಮತ ಇದ್ದದ್ದೆ. ಆದರೀಗ ಜಿಲ್ಲೆಯಲ್ಲಿ ಚಲುವರಾಯಸ್ವಾಮಿಗೆ ಅವರಿಗೆ ಕಾಂಗ್ರೆಸ್‌ನ ನಾಯಕತ್ವ ದೊರೆತಿದೆ.ಮಂಡ್ಯ ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರು ಮಾಡಿಸಿ,ಆಧುನಿಕ ನಾಗಮಂಗಲ ಶಿಲ್ಪಿ ಎಂದು ಹೆಸರಾಗಿರುವ ಚಲುವರಾಯಸ್ವಾಮಿ ನಾಯಕತ್ವದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದೇವೆ ಎಂದರು.
ನನ್ನೊಂದಿಗೆ ರಾಜ್ಯ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಡಿ.ಎನ್.ಬೆಟ್ಟೇಗೌಡ, ನಾಗಮಂಗಲ ತಾ.ಪಂ. ಮಾಜಿ ಅಧ್ಯಕ್ಷ ದಾಸೇಗೌಡ ಸೇರಿದಂತೆ ಜಿ.ಪಂ.ತಾ.ಪಂ.ನ ಕೆಲವು ಮಾಜಿ ಸದಸ್ಯರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂದು ಪ್ರಕಟಿಸಿದರು.
ಗೋಷ್ಠಿಯಲ್ಲಿ ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ರಾಜೇಗೌಡ, ರಾಜ್ಯ ಒಕ್ಕಲಿಗರ ಮಾಜಿ ಉಪಾಧ್ಯಕ್ಷ ಎಚ್.ಟಿ.ಕೃಷ್ಣೇಗೌಡ, ಕಾಂಗ್ರೆಸ್ ಮುಖಂಡರಾದ ಬಾಲಕೃಷ್ಣ, ಕರಡಹಳ್ಳಿ ಆನಂದ್, ಜಯಣ್ಣ, ಸತ್ಯ ದೇವಲಾಪುರ ಹಾಜರಿದ್ದರು.




