ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ 4ನೇ ಗ್ಯಾರಂಟಿಯಾದ ಮನೆಯೊಡತಿಗೆ 2000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸಿಎಂ ಸಿದ್ದರಾಮಯ್ಯ ಅವರು ಇಂದು ಸಂಜೆ ವಿಧಾನಸೌಧದಲ್ಲಿ ಚಾಲನೆ ನೀಡಿದರು.
ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ನೊಂದಿರುವ ನಾಡಿನ ನನ್ನ ತಾಯಂದಿರ, ಅಕ್ಕ ತಂಗಿಯರ ಆರ್ಥಿಕ ಹೊರೆಯನ್ನು ತುಸು ತಗ್ಗಿಸಿ, ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ನೆರವಾಗುವ ದೃಷ್ಟಿಯಿಂದ ನಾವು ಘೋಷಣೆ ಮಾಡಿರುವ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಇಂದು ಚಾಲನೆ ನೀಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಅರ್ಹ ಫಲಾನುಭವಿಗಳು ತಪ್ಪದೇ ಅರ್ಜಿ ಸಲ್ಲಿಸುವ ಮೂಲಕ ಯೋಜನೆಯ ಸದುಪಯೋಗ ಪಡೆದುಕೊಳ್ಳಿ. ಪ್ರಜೆಗಳ ಹಿತ ಕಾಯುವುದು ರಾಜಕೀಯ ಧರ್ಮ. ಎಷ್ಟೇ ವಿರೋಧ, ಟೀಕೆಗಳು ಬಂದರೂ ಈ ನಮ್ಮ ನಿಲುವಿನಲ್ಲಿ ಎಳ್ಳಷ್ಟು ಬದಲಾಗದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಆಹಾರ ಮತ್ತು ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಉಪಸ್ಥಿತರಿದ್ದರು.