Friday, September 20, 2024

ಪ್ರಾಯೋಗಿಕ ಆವೃತ್ತಿ

ರೈತನಿಗೆ ಅವಮಾನ ಮಾಡಿದ ಜಿ.ಟಿ ಮಾಲ್‌ 7 ದಿನ ಬಂದ್: ಕ್ರಮಕ್ಕೆ ಮುಂದಾದ ಸಿಎಂ ಸಿದ್ದರಾಮಯ್ಯ

ರೈತರ ವಿಷಯದಲ್ಲಿ ಯಾರೇ ಅವಮಾನ ಮಾಡಿದರೂ ಸಹಿಸುವುದಿಲ್ಲ ಎಂದು ವಾರದ ಹಿಂದೆ ಎಚ್ಚರಿಕೆ ಕೊಟ್ಟಿದ್ದ ಸಿಎಂ ಸಿದ್ದರಾಮಯ್ಯ ಅವರು ಪರಿಣಾಮಕಾರಿಯಾಗಿ ತಮ್ಮ ಮಾತಿಗೆ ಬದ್ಧರಾಗಿ ನಡೆದುಕೊಂಡಿದ್ದಾರೆ.

ಪಂಚೆ ತೊಟ್ಟ ರೈತನಿಗೆ ಪ್ರವೇಶ ನಿರಾಕರಣೆ ಮಾಡಿ ಅವಮಾನ ಮಾಡಿದ ಜಿ ಟಿ ಮಾಲ್ ಅನ್ನು ಏಳು ದಿನಗಳ ಕಾಲ ಮುಚ್ಚಿಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ಸದನದಲ್ಲಿ ಬೆಂಗಳೂರಿನ ಜಿ ಟಿ ಮಾಲ್‌ನಲ್ಲಿ ರೈತನಿಗೆ ಅವಮಾನ ಆದ ವಿಚಾರ ಚರ್ಚೆಗೆ ಕಾರಣವಾಗಿದೆ. ಜಿಟಿ ಮಾಲ್ ಒಳಗೆ ಪಂಚೆ ಉಟ್ಟ ರೈತನನ್ನ ಬಿಡದೆ ಅವಮಾನಿಸಿದ ವಿಚಾರವಾಗಿ ಸಭಾಧ್ಯಕ್ಷ ಯು ಟಿ ಖಾದರ್ ಕೋಪಗೊಂಡರು. “ರೈತನಿಗೆ ಅವಮಾನ ಮಾಡಿದವನು ಎಷ್ಟೇ ದೊಡ್ಡವನು ಇರಲಿ, ಅವಮಾನ ಮಾಡಿದ್ದನ್ನು ಖಂಡಿಸಬೇಕು. ಸರ್ಕಾರ ಕಠಿಣ ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದರು.

ಸ್ಪೀಕರ್ ಮಾತಿಗೆ ಧ್ವನಿಗೂಡಿಸಿದ ಶಾಸಕ ಲಕ್ಷಣ ಸವದಿ, “ಎಲ್ಲ ಮಾಲ್‌ಗಳಿಗೂ ಒಂದೇ ರೂಲ್ಸ್ ಮಾಡಬೇಕು. ಪಂಚೆ ನಮ್ಮ ಸಂಸ್ಕೃತಿ. ಸರ್ಕಾರದಿಂದ ಒಂದು ಆದೇಶ ಹೊರಡಿಸಲಿ, ಆ ಮಾಲ್ ಗೆ ವಾರಗಳ ಕಾಲ ಪವರ್ ಕಟ್ ಮಾಡಲಿ” ಎಂದು ಒತ್ತಾಯಿಸಿದರು.

ಶಾಸಕ ಪ್ರಕಾಶ್ ಕೋಳಿವಾಡ ಕೂಡ ಎದ್ದು ನಿಂತು, “ರೈತನಿಗೆ ಅವಮಾನ ಮಾಡಿದ ಆ ಮಾಲ್ ಅನ್ನು ಮುಚ್ಚಬೇಕು” ಎಂದು ಆಗ್ರಹಿಸಿದರು.

ಸಚಿವ ಬೈರತಿ ಸುರೇಶ್ ಧ್ವನಿಗೂಡಿಸಿ, “ದೇವೇಗೌಡರು, ಸಿದ್ದರಾಮಯ್ಯ ಅವರು ಪಂಚೆ ಉಡುತ್ತಾರೆ. ಅವರು ಕ್ಲಬ್ ಗಳಿಗೆ ಏನಾದ್ರೂ ಹೋದರೆ ಬಿಡುತ್ತಾರೆ. ಆದರೆ, ಬೇರೆಯವರಿಗೆ ಆ ರೂಲ್ಸ್ ಇಲ್ವಾ ಎಂದು ಪ್ರಶ್ನಿಸಿದರು.

“ಏಳು ದಿನಗಳ ಕಾಲ‌ ಮಾಲ್ ಮುಚ್ಚಿಸುತ್ತೇವೆ. ಈಗಾಗಲೇ ಬಿಬಿಎಂಪಿ ಆಯುಕ್ತರ ಹತ್ತಿರ ಮಾತಾಡಿದ್ದೇವೆ. ಕಾನೂನಿನಲ್ಲಿ ಅವಕಾಶ ಇದೆ, ಸರ್ಕಾರದ ಕ್ರಮ ಕೈಗೊಳ್ಳಬಹುದು” ಎಂದು ಬೈರತಿ ಹೇಳಿದರು.

ಕಾಂಗ್ರೆಸ್ ಸದಸ್ಯ ಅಶೋಕ್ ಪಟ್ಟಣ ಮಾತನಾಡಿ, ರಾಜ್ಯದ ಎಲ್ಲ ಕ್ಲಬ್ ಗಳು, ಮಾಲ್ ಗಳಲ್ಲಿ ಒಂದೇ ರೂಲ್ಸ್ ತರಬೇಕು. ಪಂಚೆ ಸೇರಿದಂತೆ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸುವುದರಿಗೆ ಎಂಟ್ರಿ ಕೊಡಬೇಕು ಎಂದರು.

ಘಟನೆ ಹಿನ್ನೆಲೆ?

ಬೆಂಗಳೂರಿನ ಮಾಗಡಿ ಟೋಲ್ ಗೇಟ್ ಬಳಿಯಿರುವ ಜಿಟಿ ಮಾಲ್‌ನಲ್ಲಿ ಹಾವೇರಿ ಮೂಲದ ರೈತನೋರ್ವನಿಗೆ ಅಪಮಾನವಾದ ಘಟನೆ ಜುಲೈ 16 ರಂದು ನಡೆದಿದೆ. ವಿಜಯನಗರದ ನಿವಾಸಿ ನಾಗರಾಜ್‌ ತಂದೆ ಹಾವೇರಿಯವರಾಗಿದ್ದು, ಬೆಂಗಳೂರಿಗೆ ಬಂದಾಗ ಸಿನಿಮಾ ತೋರಿಸಲೆಂದು ಜಿಟಿ ಮಾಲ್‌ಗೆ ಕರೆದುಕೊಂಡು ಹೋಗಿದ್ದರು. ಸಿನಿಮಾ ಥಿಯೇಟರ್‌ ಒಳಗೆ ಪ್ರವೇಶಿಸುವ ಸಂದರ್ಭದಲ್ಲಿ ತಪಾಸಣೆ ನಡೆಸುವ ಸೆಕ್ಯುರಿಟಿ ಸಿಬ್ಬಂದಿ, ರೈತ ಪಂಚೆ ಉಟ್ಟಿರುವ ಕಾರಣಕ್ಕೆ ಥಿಯೇಟರ್ ಒಳಗೆ ಬಿಟ್ಟಿಲ್ಲ.

ಬೇಸತ್ತ ನಾಗರಾಜ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದಕ್ಕೆ ನೆಟ್ಟಿಗರು ಸೇರಿದಂತೆ, ರಾಜ್ಯದಾದ್ಯಂತ ಮಾಲ್‌ ಸಿಬ್ಬಂದಿಗಳ ನಡೆಗೆ ಆಕ್ರೋಶ ಹೊರಹಾಕಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!