ಬಸವಣ್ಣ ಅವರ ತತ್ವಗಳು ಮತ್ತು ಸಂದೇಶಗಳು ಜಗದ್ವಿಖ್ಯಾತಗೊಂಡಿದ್ದು, ಅವರ ವಚನಗಳೇ ನಮಗೆ ಮಾರ್ಗದರ್ಶನ ನೀಡುತ್ತವೆ ಎಂದು ಕಾಂಗ್ರೆಸ್ ಮುಖಂಡ ಡಾ.ಕೃಷ್ಣ ತಿಳಿಸಿದರು.
ಕೆರೆಯಂಗಳದಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ ಘಟಕ-2 ರಲ್ಲಿ ಬದುಕು ಬೆಳಕು, ಸೇವಾ ಸಮಿತಿ, ಅಖಿಲ ಕರ್ನಾಟಕ ಸಿರಿಗನ್ನಡ ಪ್ರತಿಷ್ಠಾನ ಜಿಲ್ಲಾ ಘಟಕ, ಅಮೃತ ಲಯನ್ಸ್ ಸಂಸ್ಥೆ ಆಯೋಜಿಸಿದ್ದ ಬಸವೇಶ್ವರ ಜಯಂತಿ-ಕಾರ್ಮಿಕರ ದಿನಾಚರಣೆ ಪ್ರಯುಕ್ತ ಪೌರಕಾರ್ಮಿಕರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
12 ನೇ ಶತಮಾನಕ್ಕೂ ಮುನ್ನವೇ ಸಮಾಜದಲ್ಲಿ ಜಾತಿ-ಅಸ್ಪೃಶ್ಯತೆ ಇತ್ತು. ಇದರ ವಿರುದ್ದ ದನಿ, ಎತ್ತಿದವರು ಅನೇಕರು. ಅದರಲ್ಲಿ ವಚನ ಚಳುವಳಿಕಾರರನ್ನು ಮರೆಯಲು ಸಾಧ್ಯವಿಲ್ಲ, ಬಸವಣ್ಣ ಅವರ ನಾಯಕತ್ವದಲ್ಲಿ ಸಮ ಸಮಾಜದ ನಿರ್ಮಾಣಕ್ಕೆ ಹೊಸ ಇತಿಹಾಸ ನಿರ್ಮಿಸಿದ್ದು ಜಗತ್ತೇ ಮೆಚ್ಚುವಂತಹುದು ಎಂದರು.
ಇಂದಿನ ದಿನಗಳಲ್ಲಿ ಹಲವು ಸಂಘಟನೆಗಳು ಸಮುದಾಯಗಳನ್ನು ಒಡೆದು, ಧರ್ಮಗಳ ವಿರುದ್ದ ಎತ್ತಿಕಟ್ಟುವ ಹುನ್ನಾರಗಳು ನಡೆಸುತ್ತಾ ಬಂದಿವೆ. ಜನತೆ ಈ ಬಗ್ಗೆ ಎಚ್ಚರದಿಂದ ಇರಬೇಕು ಎಂದು ತಿಳಿಸಿದರು.
ಬಿಜೆಪಿ ಮುಖಂಡ ಅರವಿಂದ್ ಮಾತನಾಡಿ, ಸಮಾಜ ಇರುವರರೆಗೂ ವಿಶ್ವಗುರು ಬಸವಣ್ಣ ಮತ್ತು ಅವರ ವಚನಗಳು, ವಚನ ಚಳುವಳಿಗಾರರು ಜನರ ಮನಸಿನಲ್ಲಿ ಜೀವಂತವಾಗಿರುತ್ತಾರೆ. ಸಮ ಸಮಾಜ ನಿರ್ಮಾಣವಾಗುವವರೆಗೂ ಅಜರಾಮರಾಗಿರುತ್ತಾರೆ ಎಂದು ಸ್ಮರಿಸಿದರು
ಪ್ರತಿ ದಿನದ ಕಾಯಕದಲ್ಲಿ ಪೌರಕಾರ್ಮಿಕರ ಸೇವೆ ಅನನ್ಯ, ಇಂತಹವನ್ನು ಗುರುತಿಸಿ ಗೌರವಿಸುವುದು ಬಸವಣ್ಣ ಅವರ ತತ್ವ ಮತ್ತು ಆದರ್ಶಗಳನ್ನು ಪಾಲಿಸುವ ನಿಟ್ಟಿನಲ್ಲಿ ನಾವು ಸಾಗುತ್ತಿದೇವೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಪೌರಕಾರ್ಮಿಕರನ್ನು ಅಭಿನಂದಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ನಗರಾಧ್ಯಕ್ಷೆ ಸುಜಾತಾಕೃಷ್ಣ, ಅಮೃತ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಎಂ.ಲೋಕೇಶ್, ಬಸವ ಅನುಯಾಯಿ ರಾಮೇಗೌಡ, ವಿಚಾರವಾದಿ ಎಲ್.ಸಂದೇಶ್, ನಿಲಯಪಾಲಕ ಎಂ.ಟಿ. ಶ್ರೀನಿವಾಸ್, ಶರಣ ಚುಂಚಯ್ಯ, ಮುಸ್ಲಿಂ ಮುಖಂಡ ಅಮಜಾದ್ ಪಾಷಾ ಮತ್ತಿತರರಿದ್ದರು.