ಇಂದು ಕನ್ನಡ ಭಾಷೆ ಬೆಳೆಯಬೇಕಾದರೆ ಉಳಿಯಬೇಕಾದರೆ ಯುವಜನಾಂಗ ಓದುವ ಗೀಳು ಬೆಳೆಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಯುವಜನಾಂಗಕ್ಕೆ ಸಾಹಿತ್ಯದ ಪರಿಚಯ ಮಾಡಿಕೊಡಬೇಕು ಎಂದು ಖ್ಯಾತ ವಕೀಲ ಹೆಚ್. ಬಸವಯ್ಯ ಸಲಹೆ ನೀಡಿದರು.
ಮಂಡ್ಯದ ಎಸ್ಪಿ ಕಚೇರಿ ಬಳಿ ಇರುವ ತಾಲ್ಲೂಕು ಸಾಹಿತ್ಯ ಪರಿಷತ್ ಆವರಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ 107 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅಭಿನಂದನೆ ಸ್ವೀಕರಿಸಿ ಶುಕ್ರವಾರ ಸಂಜೆ ಅವರು ಮಾತನಾಡಿದರು. ಭಾಷೆಯ ಮೇಲೆ ಪ್ರೇಮ ಬರಬೇಕಾದರೆ ಆ ಭಾಷೆಯ ಸಾರವನ್ನು ಉಣಬಡಿಸಬೇಕು.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪಂಪ,ರನ್ನ,ಪೊನ್ನ,ಜನ್ನ ಲಕ್ಷ್ಮೀಶ, ಕುಮಾರವ್ಯಾಸಅವರೆಲ್ಲ ಕಷ್ಟಪಟ್ಟು ಸಾಹಿತ್ಯ ಬರೆದಿದ್ದಾರೆ. ಅದನ್ನ ಓದುವ ಗೀಳು ನಮಗೆ ಬಂದಿಲ್ಲ. ಹಣ ಕೊಟ್ಟು ಸಿನಿಮಾ ನೋಡುತ್ತೇವೆ, ಹಣ ಕೊಟ್ಟು ಬೇರೆ ವ್ಯವಹಾರ ಮಾಡುತ್ತೇವೆ. ಮೊದಲು ಓದುವ ಗೀಳನ್ನು ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಎಲ್ಲಾದರೂ ಇರಿ. ಬೇಕೋ- ಬೇಡವೋ,ಅನುಕೂಲವೋ-ಅನಾನುಕೂಲವೋ, ಒಳ್ಳೆಯದ್ದೋ-ಕೆಟ್ಟದ್ದೋ ಓದಬೇಕು. ಅಕ್ಷರಜ್ಞಾನದಿಂದ ಸಂದರ್ಭದ ಪರಿಚಯವಾಗುತ್ತದೆ, ಸಂದರ್ಭವನ್ನು ಎದುರಿಸುವ ಸಾಮರ್ಥ್ಯ ಬರುತ್ತದೆ,ಇದರಿಂದ ಯಶಸ್ಸು ಕೂಡ ಸಿಗುತ್ತದೆ ಎಂದರು.
ನನ್ನದು ಬಸರಾಳು ಕಡೆಯ ಗ್ರಾಮ. ನಮ್ಮ ತಾಯಿ ರಾಗಿ ಬೀಸುತ್ತಿದ್ದಾಗ ಹೇಳುತ್ತಿದ್ದ ಪದಗಳು ನನ್ನನ್ನು ಬಹಳವಾಗಿ ಆಕರ್ಷಿಸಿತ್ತು. ನಾನು ತಪ್ಪು ಉಚ್ಚಾರ ಮಾಡಿದರೆ, ಸ್ವಲ್ಪ ಅಕ್ಷರಜ್ಞಾನ ಇದ್ದ ನಮ್ಮ ತಂದೆ ಆ ಗಳಿಗೆಯಲ್ಲೇ ಅದನ್ನು ತಿದ್ದುತ್ತಿದ್ದರು. ನಾವು ಡಾ.ಚೌಡಯ್ಯನವರನ್ನು ನೆನಪು ಮಾಡಿಕೊಳ್ಳಬೇಕು. ಅವರು ಬೆಂಗಾಡಿನಂತಿದ್ದ ನಮ್ಮ ಭಾಗಕ್ಕೆ ಶಾಲೆ, ಹೈಸ್ಕೂಲ್ ತಂದದ್ದರಿಂದ ನಮಗೂ ಉತ್ತಮ ವಿದ್ಯಾಭ್ಯಾಸ ಸಿಕ್ಕಿ ವಿದ್ಯಾವಂತರಾಗುವಂತಾಯಿತು ಎಂದರು.
ಇಂದಿನ ಯುವ ಜನಾಂಗಕ್ಕೆ ನಾಡು-ನುಡಿಯ ಮಾತು ಬಂದಾಗ, ನಾಡು ಅಂದರೆ ಏನು? ನುಡಿ ಎಂದರೆ ಏನು? ಎಂಬುದೇ ಗೊತ್ತಿಲ್ಲ. ಅಮ್ಮ, ಅಪ್ಪ, ಅಣ್ಣ ಅಂತ ಕರೆಯುವ ಸಂದರ್ಭದಲ್ಲಿ ಯೋ ಯೋ ಓ ಅಂತೆಲ್ಲ ಕರೆಯುತ್ತಾರೆ. ನಾವು ಮಕ್ಕಳನ್ನು ಬೆಳೆಸಲು ಬಹಳ ಕಷ್ಟ ಪಡುತ್ತೇವೆ. ಆದರೆ ಯಾರಾದರೂ ನಮ್ಮ ಮಗ ಏನು ಮಾಡುತ್ತಿದ್ದಾನೆ, ಶಾಲೆಗೆ ಹೋಗಿ ಏನಾದರೂ ಬರೆದ್ನಾ, ಓದಿದ್ನಾ, ಕಾಲೇಜಿಗೆ ಬಂದಿದ್ನಾ ಅಂತ ಕೇಳೋದಿಲ್ಲ. ಕೇಳಿದರೆ ಲಕ್ಷ ಫೀಸು ಕಟ್ಟಿಲ್ವಾ ಅಂತ ಹೇಳುತ್ತೇವೆ. ನಮ್ಮ ಮಕ್ಕಳ ಬಗ್ಗೆ ಜವಾಬ್ದಾರಿ ಇರಬೇಕು ಎಂದರು.
ಇಂದು ಪ್ರಪಂಚ ಬಹಳ ಹತ್ತಿರವಾಗಿದೆ. ಆದರೆ ಮನಸುಗಳು ದೂರವಾಗಿವೆ. ನಮ್ಮ ಮನೆಗಳು ಇಂದು ವೃದ್ಧಾಶ್ರಮವಾಗಿವೆ. ನಮ್ಮ ಮಕ್ಕಳು ಓದಿ ತುಂಬಾ ದೂರ ಇದ್ದಾರೆ. ನಮ್ಮ ಕರ್ತವ್ಯ ಏನೆಂದರೆ, ಮಕ್ಕಳಲ್ಲಿ ಧರ್ಮ-ಸಂಸ್ಕೃತಿ ಬಿತ್ತರಿಸಿದಾಗ ಅದರ ಆಧಾರದ ಮೇಲೆ ಅವರಿಗೆ ಸಂಸ್ಕಾರ ಬೆಳೆಯುತ್ತದೆ ಎಂದರು.
ಅನೇಕ ವ್ಯಕ್ತಿಗಳು ಅಪಭ್ರಂಶ ನುಡಿಯುತ್ತಾರೆ.ಡಾ.ರಾಜಕುಮಾರ್ ಅವರು ಬಹಳ ಮೇಧಾವಿಯಾಗಿದ್ದರು. ಅವರ ಮಾತಿನಲ್ಲಿ ಎಂದೂ ಅಪಭ್ರಂಶ ಬರುತ್ತಿರಲಿಲ್ಲ. ಆಳವಾಗಿ ಕೃಷಿ ಮಾಡಿದಾಗ, ಮನಸ್ಸಿಟ್ಟು ಅಭ್ಯಾಸ ಮಾಡಿದಾಗ ಯುವಜನಾಂಗದ ಮನೋಭಾವನೆ ಬೇರೆ ರೀತಿ ಸಾಗುತ್ತದೆ. ಕವಿಗಳು ಬರೆದಿದ್ದನ್ನು ಮನನ ಮಾಡಿಕೊಳ್ಳಬೇಕು, ನಂತರ ಮಂಥನ ಮಾಡಬೇಕು, ಮಂಥನ ಮಾಡಿದಾಗ ಅದು ಅನುಷ್ಠಾನಕ್ಕೆ ಬರುತ್ತೆ,ಕನ್ನಡ ಭಾಷೆಯೂ ಬೆಳೆಯುತ್ತದೆ ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಯುವಜನಾಂಗಕ್ಕೆ ಕಾರ್ಯಕ್ರಮ ರೂಪಿಸಲಿ ಎಂದರು.
ನಾನೇನು ಅಂತಹ ದೊಡ್ಡ ಸಾಧನೆ ಮಾಡಿಲ್ಲ. 1975 ರಲ್ಲಿ ನಾನು ವಕೀಲ ನಾಗಪ್ಪ ಅವರ ಬಳಿ ವೃತ್ತಿ ಮಾಡುತ್ತಿದ್ದೆ. ನನಗೆ ಕನ್ನಡ ಮೇಷ್ಟ್ರು ಆಗಬೇಕು ಎಂಬ ಬಹಳ ಆಸೆ ಇತ್ತು. ಆದರೆ ಪದವಿಯಲ್ಲಿ ಶೇಕಡ 52 ಅಂಕಗಳು ಬಂದಿದ್ದರಿಂದ ಮೈಸೂರಿನ ಮಾನಸಗಂಗೋತ್ರಿ ಸೇರಲು ಆಗಲಿಲ್ಲ. ಆಗ ಮಂಗಳೂರು ಗಂಗೋತ್ರಿಗೆ ಹೋಗಿ ಎಂದರು. ಆದರೆ ವಕೀಲ ನಾಗಪ್ಪನವರು ಮಂಗಳೂರಿನಲ್ಲಿ ನೀನು ಓದಲು ಆಗುವುದಿಲ್ಲ. ಇಲ್ಲೇ ಎಲ್ಎಲ್ಬಿ ಸೇರಿಕೋ ಎಂದು ಹೇಳಿದರು. ಅವರ ಮಾರ್ಗದರ್ಶನದಲ್ಲಿ ನಾನು ಎಲ್ಎಲ್ಬಿ ಪರೀಕ್ಷೆಯಲ್ಲಿ ನಾಲ್ಕನೇ ರಾಂಕ್ ಬಂದೆ. ಪರಿಶ್ರಮ,ಚಲ, ಅಧ್ಯಯನಶೀಲತೆ ಇದ್ದಾಗ ಬದುಕಲು ಸಾಧ್ಯ. ಏಕಲವ್ಯನಿಗೆ ಗುರು ಇರಲಿಲ್ಲ, ಆದರೆ ಗುರಿ ತಲುಪಿದ. ಜೀವನದಲ್ಲಿ ದೃಢ ನಿರ್ಧಾರ ಬಹಳ ಮುಖ್ಯ ಎಂದರು.
ಸಾಹಿತಿ ತೈಲೂರು ವೆಂಕಟಕೃಷ್ಣ ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿ ಪ್ರದೀಪ್ ಕುಮಾರ್ ಹೆಬ್ರಿ,ಮಾಜಿ ಸಚಿವ ಆತ್ಮಾನಂದ, ಹರ್ಷ, ಅಪ್ಪಾಜಪ್ಪ, ಕಸಾಪ ಅಧ್ಯಕ್ಷ ರವಿಕುಮಾರ್, ರಮೇಶ್ ಸೇರಿದಂತೆ ಹಲವರಿದ್ದರು.