Friday, September 20, 2024

ಪ್ರಾಯೋಗಿಕ ಆವೃತ್ತಿ

ಅತ್ಯಾಚಾರಿ ಗುರ್ಮೀತ್‌ ಸಿಂಗ್‌ಗೆ ಮತ್ತೇ ಪೆರೋಲ್‌: 4 ವರ್ಷಗಳಲ್ಲಿ 9 ಬಾರಿ ಬಿಡುಗಡೆ ಭಾಗ್ಯ!

ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಹರ್ಯಾಣದ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌ಗೆ ಮತ್ತೆ ಪೆರೋಲ್‌ ಮಂಜೂರಾಗಿದೆ.

ಈ ಬಾರಿ ಗುರ್ಮೀತ್ ಸಿಂಗ್‌ಗೆ 50 ದಿನಗಳ ಪೆರೋಲ್ ನೀಡಲಾಗಿದೆ. ಅತ್ಯಾಚಾರ ಪ್ರಕರಣದ ಅಪರಾಧಿ ಯಾಗಿರುವ ಈತ, ಕಳೆದ 24 ತಿಂಗಳಲ್ಲಿ ಏಳನೇ ಬಾರಿ ಮತ್ತು ಕಳೆದ ನಾಲ್ಕು ವರ್ಷಗಳಲ್ಲಿ ಒಂಬತ್ತನೇ ಬಾರಿ ಪೆರೋಲ್ ಪಡೆದಿದ್ದಾನೆ.

ಹರ್ಯಾಣದ ರೋಹ್ಟಕ್ ಜಿಲ್ಲೆಯ ಸುನಾರಿಯಾ ಜೈಲಿನಲ್ಲಿರುವ ಗುರ್ಮೀತ್ ಸಿಂಗ್‌ಗೆ ಕಳೆದ ವರ್ಷ ನವೆಂಬರ್‌ನಲ್ಲಿ 21 ದಿನ, ಜುಲೈನಲ್ಲಿ 30 ದಿನ ಮತ್ತು ಜನವರಿಯಲ್ಲಿ ಡೇರಾ ಸಚ್ಚಾ ಸೌಧದ ಮಾಜಿ ಮುಖ್ಯಸ್ಥ ಶಾ ಸತ್ನಾಮ್ ಅವರ ಜನ್ಮ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲು 40 ದಿನ ಸೇರಿ, ಒಟ್ಟು 91 ದಿನಗಳ ಪೆರೋಲ್ ನೀಡಲಾಗಿತ್ತು.

ಕಳೆದ ವರ್ಷ ಪೆರೋಲ್‌ ಮೇಲೆ ಜೈಲಿನಿಂದ ಹೊರಗಿದ್ದಾಗಲೇ ಗುರ್ಮೀತ್ ಸಿಂಗ್ ತಲವಾರಿನಿಂದ ತನ್ನ ಹುಟ್ಟು ಹಬ್ಬದ ಕೇಕ್ ಕತ್ತರಿಸಿದ್ದ. ಈ ಕುರಿತ ಫೋಟೋ, ವಿಡಿಯೋ ವೈರಲ್ ಆಗಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಆ ವೇಳೆ ” ನಾನು ಐದು ವರ್ಷಗಳ ಬಳಿಕ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸುತ್ತಿದ್ದೇನೆ. ಒಟ್ಟು ಐದು ಕೇಕ್ ಕತ್ತರಿಸಬೇಕಿದೆ. ಇದು ಮೊದಲನೆಯದ್ದು” ಎಂದು ಗುರ್ಮೀತ್ ಸಿಂಗ್ ಹೇಳಿದ್ದ ವಿಡಿಯೋ ವೈರಲ್ ಆಗಿತ್ತು.

ಆಯುಧಗಳ ಸಾರ್ವಜನಿಕ ಪ್ರದರ್ಶನವನ್ನು (ಕತ್ತಿಯಿಂದ ಕೇಕ್ ಕತ್ತರಿಸುವುದು ಆ ವರ್ಗಕ್ಕೆ ಸೇರುತ್ತದೆ) ಶಸ್ತ್ರಾಸ್ತ್ರ ಕಾಯಿದೆಯಡಿಯಲ್ಲಿ ನಿಷೇಧಿಸಲಾಗಿದೆ. ಆದರೆ, ಗುರ್ಮೀತ್ ಮೇಲೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಗುರ್ಮೀತ್ ಸಿಂಗ್‌ಗೆ ಜನವರಿ 2023ರಲ್ಲಿ ಲಭಿಸಿದ್ದ ಪೆರೋಲ್, ವಿಶೇಷವಾಗಿ ಹರ್ಯಾಣದ ಮುಖ್ಯಮಂತ್ರಿ ಮನೋಹರಲಾಲ್‌ ಖಟ್ಟರ್ ಅದನ್ನು ಸಮರ್ಥಿಸಿಕೊಂಡ ಬಳಿಕ ವಿವಾದವನ್ನು ಸೃಷ್ಟಿಸಿತ್ತು.

“ರಾಮ್‌ ರಹೀಮ್ ಗೆ ಪೆರೋಲ್ ಸಿಕ್ಕಿರುವುದು ನನಗೆ ಗೊತ್ತಿಲ್ಲ. ಆದರೆ, ಪೆರೋಲ್ ಸಿಕ್ಕಿದ್ದು ಹೌದಾದರೆ ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಪೂರೈಸಿದ ಬಳಿಕವೇ ಅದು ಮಂಜೂರಾಗಿರಬೇಕು ಮತ್ತು ಅದು ಆತನ ಹಕ್ಕು ಆಗಿದೆ. ಅದರಲ್ಲಿ ನಾನು ಮಧ್ಯಪ್ರವೇಶ ಮಾಡುವುದಿಲ್ಲ” ಎಂದು ಖಟ್ಟರ್ ಹೇಳಿದ್ದರು.

2022ರಲ್ಲಿಯೂ ಹರಿಯಾಣದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ, ಗುರ್ಮೀತ್‌ಗೆ ಮೂರು ಸಲ ಪೆರೋಲ್ ನೀಡಿತ್ತು. ತನ್ನ ತಾಯಿಯನ್ನು ಭೇಟಿಯಾಗಲು 2021 ಮತ್ತು 2020ರಲ್ಲೂ ಆತನಿಗೆ ತಲಾ ಒಂದು ಬಾರಿ ಪೆರೋಲ್ ಲಭಿಸಿತ್ತು.

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಹರ್ಯಾಣದಲ್ಲಿ ಪಂಚಾಯತ್ ಚುನಾವಣೆಗೆ ಮುನ್ನ ಸಿಂಗ್‌ಗೆ ಪೆರೋಲ್ ಲಭಿಸಿದ್ದಾಗ ಆತ ನಡೆಸಿದ್ದ ‘ವರ್ಚುವಲ್ ಸತ್ಸಂಗ’ ದಲ್ಲಿ ಹಲವು ಬಿಜೆಪಿ ನಾಯಕರು ಭಾಗವಹಿಸಿದ್ದರು. ಇದರ ವಿರುದ್ದ ಪ್ರತಿಪಕ್ಷಗಳು ಕಿಡಿಕಾರಿದ್ದವು.

ಹರ್ಯಾಣದ ಪಂಚಕುಲಾದ ವಿಶೇಷ ಸಿಬಿಐ ನ್ಯಾಯಾಲಯವು ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಆಗಸ್ಟ್ 2017ರಲ್ಲಿ ಗುರ್ಮೀತ್‌ನನ್ನು ಅಪರಾಧಿ ಎಂದು ಘೋಷಿಸಿತ್ತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!