ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ನೌಕರರ ಪತ್ತಿನ ಸಹಕಾರ ಸಂಘದ ಅಭಿವೃದ್ಧಿಗೆ ಸದಸ್ಯರು ಸಹಕಾರ ನೀಡಬೇಕೆಂದು ಸಂಘದ ಅಧ್ಯಕ್ಷ, ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಜಿ.ಶಿವರಾಮು ಮನವಿ ಮಾಡಿದರು.
ನಾಗಮಂಗಲ ತಾಲ್ಲೂಕಿನ ಬೆಳ್ಳೂರಿನಲ್ಲಿ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ನೌಕರರ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಪತ್ತಿನ ಸಹಕಾರ ಸಂಘ ನೌಕರರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚು ನೌಕರರಿಗೆ ಸಾಲ ಕೊಡಲಾಗುವುದು. ಜೊತೆಗೆ ಸಾಲದ ಮೊತ್ತವನ್ನು 50,000 ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಹೇಳಿದರು.
ಪತ್ತಿನ ಸಹಕಾರ ಸಂಘದಲ್ಲಿನ ಆಡಳಿತ ಪಾರದರ್ಶಕವಾಗಿದೆ. ಸಂಘದ ಅಭಿವೃದ್ಧಿಗೆ ಸರ್ವ ಸದಸ್ಯರುಗಳು ಸಹಕಾರ ನೀಡಬೇಕು ಮತ್ತು ಸಾಲದ ಹಣದ ನಿರ್ವಹಣೆಯನ್ನು ಸರಿಯಾದ ರೀತಿಯಲ್ಲಿ ಮಾಡಬೇಕು ಎಂದು ಹೇಳಿದರು.
ನಿರ್ದೇಶಕರಾದ ಬಿ.ಕೆ. ಉಮೇಶ ಅವರು ಉಪಸ್ಥಿತರಿದ್ದರು. ಉಮೇಶ್ ಅವರು ನಡೆಸಿಕೊಟ್ಟರು. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಜಿ.ಡಿ. ನಾರಾಯಣ ಗೌಡ ಸ್ವಾಗತಿಸಿದರು. ವಿಭಾಗದ ಎಚ್.ಜಿ. ಕುಮಾರಸ್ವಾಮಿ ಅವರು ಪತ್ತಿನ ನೌಕರರ ಸಂಘದ ಜವಾಬ್ದಾರಿಗಳ ಬಗ್ಗೆ ವಿವರಿಸಿದರು.
ನಿರ್ದೇಶಕರುಗಳಾದ ವೈ.ಪಿ.ಶಿವಕುಮಾರ್, ಅನಿತಾ ಎಚ್, ಮಮತ, ಪ್ರಮೀಳಮ್ಮ, ಭಾರ್ಗವಿ, ಸಮುದಾಯ ವೈದ್ಯ ಶಾಸ್ತ್ರ ವಿಭಾಗದ ಡಾ.ಎಂ.ಸಿ. ಪ್ರಭುದೇವ ವಂದಿಸಿದರು. ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಸುಮಾರು 200ಕ್ಕೂ ಹೆಚ್ಚು ನೌಕರರು ವಾರ್ಷಿಕ ಸಭೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.




