ಮಂಡ್ಯ ತಾಲ್ಲೂಕು ಬೇಲೂರು ಗ್ರಾಮದ ಶಿಲ್ಪ ಮತ್ತು ಮಹದೇವ ಅವರ ಮಗಳು ಶ್ರೀರಕ್ಷ ಬಿ.ಎಂ ಅವರು ತಮ್ಮ ಕೇಶವನ್ನು ಕ್ಯಾನ್ಸರ್ ರೋಗಿಗೆ ದಾನ ಮಾಡಿ ಮಾನವೀಯತೆ ಮೆರೆದು ಗಮನ ಸೆಳೆದಿದ್ದಾರೆ.
ಸರ್ಕಾರಿ ಪ್ರೌಢಶಾಲೆ ಬೇಲೂರಿನಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಶ್ರೀರಕ್ಷ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಅನೇಕ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವ ಅಸಾಧಾರಣ ಪ್ರತಿಭೆಯು ಆಗಿದ್ದಾರೆ.
ಸಮಾಜಕ್ಕೆ ಏನಾದರೂ ಸೇವೆ ಮಾಡಬೇಕು ಎಂದು ಆಲೋಚನೆಯಲ್ಲಿದ್ದಾಗಲೇ ನನ್ನ ಸೋದರತ್ತೆ ಕ್ಯಾನ್ಸರ್ ಕಾಯಿಲೆಯಿಂದ ಅಸುನೀಗಿದರು ಅವರು ಕಿಮೋಥೆರಪಿ ತೆಗೆದುಕೊಳ್ಳುವ ಸಂದರ್ಭದಲ್ಲಿ ಅವರ ತಲೆ ಕೂದಲು ಪೂರ್ಣ ಪ್ರಮಾಣದಲ್ಲಿ ಉದುರಿದ್ದನ್ನು ಗಮನಿಸಿದ್ದೆ.. ನಂತರ ಇದರ ಬಗ್ಗೆ ನಮ್ಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿಯಾದ ಉಷಾ ಮೇಡಂ ಅವರ ಬಳಿ ಹೇಳಿದಾಗ ಅವರು ಕೇಶ ದಾನ ಮಾಡಬಹುದು ಕ್ಯಾನ್ಸರ್ ರೋಗಿಗಳಿಗೆ ನಿಮ್ಮ ಕೇಶದಿಂದ ವಿಗ್ ಮಾಡಿ ಅವರಿಗೆ ಉಚಿತವಾಗಿ ನೀಡುತ್ತಾರೆ ಎಂದು ತಿಳಿಸಿದರು. ನಂತರ ಅವರ ಮಾರ್ಗದರ್ಶನದಲ್ಲಿ ನಾನು ನನ್ನ ಕೇಶವನ್ನು ಬಹಳ ಸಂತೋಷದಿಂದ ದಾನ ಮಾಡಿದ್ದೇನೆ ಎಂದು ಶ್ರೀರಕ್ಷ ತಿಳಿಸಿದ್ದಾರೆ.
ಪರಿಸರ ಸಂರಕ್ಷಣೆ, ಮತದಾನ ಜಾಗೃತಿ ಮೂಡಿಸುವ ಜಾಥಾ ಕಾರ್ಯಕ್ರಮ, ರಕ್ತದಾನ ಶಿಬಿರ, ಬಾಲ್ಯ ವಿವಾಹ ನಿಷೇಧ ಜಾಗೃತಿ ಕಾರ್ಯಕ್ರಮ, ಹೆಣ್ಣು ಭ್ರೂಣ ಹತ್ಯೆ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಮೂಲಕ ನಮ್ಮ ಶಾಲೆಯ ಮಕ್ಕಳನ್ನು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಉಷಾ ಮೇಡಂ ಕೊಡುಗೆ ಅಪಾರವಾಗಿದೆ.
ಶ್ರೀರಕ್ಷ.ಬಿ ಎಂ ಅವರು ರಾಜ್ಯ ಮಟ್ಟದ ಸ್ಕೇಟಿಂಗ್ ಕ್ರೀಡಾಪಟು ಕೂಡ ಆಗಿದ್ದಾರೆ, ರಾಜ್ಯ ಮಟ್ಟದಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ನಡೆಸುವ ರಾಜ್ಯ ಪುರಸ್ಕಾರವನ್ನು ಪಡೆದಿದ್ದಾರೆ.
ಮುಂದೆಯೂ ನನ್ನ ಕೇಶವನ್ನು ದಾನ ಮಾಡುವುದಾಗಿ ತಿಳಿಸಿರುವ ಶ್ರೀರಕ್ಷ,
ಹದಿನೆಂಟು ವರ್ಷ ತುಂಬಿದ ಮೇಲೆ ರಕ್ತದಾನ ಮಾಡುವ ಮಹದಾಸೆಯನ್ನು ಹೊಂದಿದ್ದಾರೆ.




