Friday, November 20, 2026

ಪ್ರಾಯೋಗಿಕ ಆವೃತ್ತಿ

ಮಣ್ಣಿಲ್ಲದೇ ಜೀವರಾಶಿ ಬದುಕಲು ಸಾಧ್ಯವಿಲ್ಲ : ಶಾಂತಾ ಎಲ್.ಹುಲ್ಮನಿ

ಕೃಷಿ, ಮಣ್ಣು ಹಾಗೂ ಮನುಷ್ಯನಿಗೂ ಅವಿನಾಭವ ಸಂಬಂಧವಿದೆ, ಮಣ್ಣು ಇಲ್ಲದೇ ಜೀವರಾಶಿ ಬದುಕಲು ಸಾಧ್ಯವಿಲ್ಲ. ಆಹಾರ ಎಲ್ಲಿಂದ ಬರುತ್ತದೆ ಎಂದು ಮೂಲ ಪ್ರಶ್ನೆಯನ್ನು ಹುಡಿಕಿದಾಗ ಅದರ ಮೂಲ ಮಣ್ಣು ಎಂಬುದು ತಿಳಿಯುತ್ತದೆ ಎಂದು ಜಿ.ಪಂ. ಮುಖ್ಯ ಕಾರ್ಯ ನಿರ್ವಹಕಾಧಿಕಾರಿ ಶಾಂತಾ ಎಲ್.ಹುಲ್ಮನಿ ತಿಳಿಸಿದರು.

ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಈಶಾ ಫೌಂಡೇಷನ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಣ್ಣು ಉಳಿಸಿ ಅಭಿಯಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಣ್ಣನ್ನು ನಾವು ಉಳಿಸದೆ ಹೋದರೆ, ಮುಂದಿನ ಜನಾಂಗಕ್ಕೆ ಶುದ್ಧ ಆಹಾರದ ಸಮಸ್ಯೆ ಉಂಟಾಗುತ್ತದೆ. ಮಣ್ಣು ಇತ್ತೀಚೆಗೆ ಹಲವಾರು ವಿಷಯಗಳಿಂದ ಕಲುಷಿತವಾಗುತ್ತಿದೆ. ಮಣ್ಣನ್ನು ಉಳಿಸುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಸಂಕಲ್ಪ ಪಡಬೇಕಾಗಿದೆ. ಮುಂದಿನ ಜನಾಂಗದ ಹಿತದೃಷ್ಟಿಯಿಂದ ಮಣ್ಣಿನ ಫಲವತ್ತತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಆದ್ದರಿಂದ ಈ ಅಭಿಯಾನದಲ್ಲಿ ಎಲ್ಲರೂ ಕೈ ಜೋಡಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ

ಸಾವಯವ ಕೃಷಿ ಅಳವಡಿಸಿಕೊಂಡು ಮಣ್ಣಿನ ಫಲವತ್ತತೆ ಹೆಚ್ಚಿಸಿ ಎಂದು ಮಂಡ್ಯ ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜ್ ಅಭಿಪ್ರಾಯಪಟ್ಟರು.

ವಿಶ್ವದಲ್ಲಿ ಮಣ್ಣು ಸಂರಕ್ಷಣೆಗಾಗಿ ವಿಶೇಷ ಜಾಗೃತಿ ಮೂಡಿಸಬೇಕೆಂಬ ಉದ್ದೇಶದಿಂದ ಮಣ್ಣು ಉಳಿಸಿ ಅಭಿ ಯಾನವನ್ನು ಆರಂಭ ಮಾಡುತ್ತಿದ್ದೇವೆ. ಯುವ ಜನಾಂಗ ಹಾಗೂ ರೈತಾಪಿ ಬಂಧುಗಳಿಗೆ ಮಣ್ಣಿನ ಫಲವತ್ತತೆ ಹಾಗೂ ಅದರ ಮಹತ್ವವನ್ನು ತಿಳಿಸಿಕೊಡಬೇಕಿದೆ ಎಂದು ತಿಳಿಸಿದರು.

ಇತ್ತೀಚೆಗೆ ರಾಸಾಯನಿಕ ಅಂಶಗಳನ್ನು ಹೆಚ್ಚು ಬಳಸುತ್ತಿರುವುದರಿಂದ ಮಣ್ಣಿನ ಫಲವತ್ತತೆ ಕುಸಿಯುತ್ತಿರುವುದರ ಜೊತೆಗೆ ಮನುಷ್ಯನ ಆರೋಗ್ಯದ ಮೇಲೆ ಸಾಕಷ್ಟು ದುಷ್ಪಾರಿಣಾಮಗಳು ಬೀರುತ್ತಿವೆ. ಇದು ಆತಂಕಕಾರಿ ಬೆಳವಣಿಗೆ ಎಂದು ವಿಷಾದ ವ್ಯಕ್ತಪಡಿಸಿದರು.

ಆಹಾರ ಪದಾರ್ಥವನ್ನು ಹೆಚ್ಚು ಪ್ರಮಾಣದಲ್ಲಿ ಉತ್ಪಾದನೆ ಮಾಡಬೇಕೆಂಬ ದೃಷ್ಟಿಯಿಂದ ರಾಸಾಯನಿಕ ಅಂಶಗಳನ್ನು ಹೆಚ್ಚು ಹೆಚ್ಚು ಬಳಸುತ್ತಿದ್ದೇವೆ. ಇದರಿಂದ ಮಣ್ಣಿನ ಫಲವತ್ತತೆಯನ್ನು ಕಲುಷಿತಗೊಳಿಸುತ್ತಿದ್ದೇವೆ. ನಾವು ಹಿಂದಿನ ಕೃಷಿ ಪದ್ಧತಿಗೆ ತೆರಳಬೇಕಾದ ಅನಿವಾರ್ಯ ಪರಿಸ್ಥಿತಿಗೆ ಬಂದು ನಿಂತಿದ್ದೇವೆ ಎಂದರು.

ಮಣ್ಣು ಎನ್ನುವುದು ಒಂದು ಸರಕು ಅಲ್ಲ. ಮಣ್ಣಿಗೆ ಅದರದೇ ಆದ ಮಹತ್ವವಿದೆ. ಮಣ್ಣಿಗೆ ಎಂತಹದೇ ಬೀಜ ಹಾಕಿದರೂ ಮೊಳಕೆ ಹೊಡೆದು ಫಲ ಕೊಡುವ ಶಕ್ತಿ ಇದೆ. ಹಾಗಾಗಿ ಮಣ್ಣಿಗೆ ಒಂದು ಅಗೋಚರ ಶಕ್ತಿ ಇದೆ‌ ಎಂದರು.

ಇಂತಹ ಮಹತ್ವವಿರುವ ಮಣ್ಣನ್ನು ನಾವು ಉಳಿಸದೆ ಇದ್ದರೆ, ಮುಂದಿನ ದಿನಗಳಲ್ಲಿ ಎಷ್ಟೇ ರಾಸಾಯನಿಕ‌ ಗೊಬ್ಬರ ಹಾಕಿದರೂ ಯಾವುದೇ ರೀತಿಯ ಹೊಸ ಹೊಸ ತಳಿಗಳನ್ನು ಹಾಕಿದರೂ, ವೈಜ್ಞಾನಿಕ ಕೃಷಿ ಸಂಶೋಧನೆ ನಡೆಸಿದರೂ ಆಹಾರ ಉತ್ಪಾದನೆ ಕುಸಿಯಬಹುದು ಎಂದು ಎಚ್ಚರಿಸಿದರು.

ಮಣ್ಣಿನ ಫಲವತ್ತತೆ ಕುಸಿಯುತ್ತಿರುವ ಸಂಬಂಧ ಈಗಾಗಲೇ ವಿಜ್ಞಾನಿಗಳು ವಿಶೇಷವಾಗಿ ಮಣ್ಣಿನ ತಜ್ಞರು ವಿಶೇಷ ತಿಳಿವಳಿಕೆ ನೀಡುತ್ತಿದ್ದಾರೆ. ಈ ಸಂಬಂಧ ಸಾಕಷ್ಟು ಸಂಶೋಧನೆಗಳು ಸಹ ನಡೆಯುತ್ತಿವೆ. ಯಾವುದೇ ಅಘಾತಕಾರಿ ಬೆಳವಣಿಗಳಿಗೆ ಅಸ್ಪದ ನೀಡದೆ ಮಣ್ಣಿನ ಸಂರಕ್ಷಣೆಗೆ ಮುಂದಾಗಬೇಕೆಂದರು.

ಕೃಷಿ ಬೆಳೆಗಳಿಗೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಬಳಕೆಯಿಂದ ಉತ್ಪಾದನೆಯಾಗುತ್ತಿರುವ ಆಹಾರ ಪದಾರ್ಥಗಳಿಂದ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. 250ಕ್ಕೂ ಹೆಚ್ಚು ಆಹಾರ ಉತ್ಪನ್ನ ವನ್ನು ನಾವು ಬೆಳೆಯುತ್ತಿದ್ದೇವೆ. ಎಲ್ಲಾ ಕಡೆ ರಾಸಾಯನಿಕ ಗೊಬ್ಬರ ಬಳಸುತ್ತಿದ್ದೇವೆ. ಭತ್ತ, ರಾಗಿ ಮೂಲಂಗಿ, ಕ್ಯಾರೇಟ್, ಹಣ್ಣು ಹೂವು ಬೆಳೆಯುವುದಕ್ಕೆ ರಾಸಾಯನಿಕ ಅಂಶಗಳನ್ನು ಹೆಚ್ಚಾಗಿ ಬಳಸುತ್ತಿದ್ದು, ಭೂಮಿ ತಾಯಿಯನ್ನು ಬಂಜರು ಭೂಮಿಯಾಗಿ ಮಾಡುತ್ತಿದ್ದೇವೆ. ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಆಘಾತಕಾರಿ ಬೆಳವಣಿಗೆಗಳನ್ನು ನೋಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮಣ್ಣು ಅಭಿಯಾನದಲ್ಲಿ ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್, ಉಪ ಕೃಷಿ ನಿರ್ದೇಶಕ ಮಾಲತಿ ಕೆ, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕಿ ಸೌಮ್ಯಶ್ರೀ, ಮಣ್ಣು ವಿಜ್ಞಾನಿ ಅಶೋಕ್, ಇಶಾ ಫೌಂಡೇಷನ್‌ನ ಸುಜಾತ ಕೃಷ್ಣ, ಗೌತಮ್, ವಿಕಶನ ಸಂಸ್ಥೆಯ ಮಹೇಶ್ ಚಂದ್ರಗುರು ಹಾಗೂ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು. ಬಳಿಕ ಜಿಲ್ಲಾಧಿಕಾರಿ ಕಚೇರಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಮಣ್ಣು ಅಭಿಯಾನ ಜಾಗೃತಿ ಜಾಥಾ ನಡಯಿತು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ