Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಲೈಂಗಿಕ ಕಿರುಕುಳದಿಂದ ಅಪ್ರಾಪ್ತ ಬಾಲಕಿ ಆತ್ಮಹತ್ಯೆ: ಪ್ರಕರಣ ದಾಖಲು

ವ್ಯಕ್ತಿಯೊಬ್ಬನ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಅಪ್ರಾಪ್ತ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯನಗರದಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿದೆ.

ಶೇಖ್‌ ಅಕೀಬ್‌ ಎಂಬಾತನ ಕಿರುಕುಳದಿಂದ ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಆಕೆಯ ತಾಯಿ ದೂರು ನೀಡಿದ್ದಾರೆ.

ಆರೋಪಿ ಶೇಖ್‌ ಅಕೀಬ್‌

ಮಂಡ್ಯದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ‘ನಾನು ಮತ್ತು ನನ್ನ ಗಂಡ ಆಶ್ರಫ್‌ ಖಾನ್‌ ಅವರಿಗೆ ಒಟ್ಟು 3 ಮಂದಿ ಮಕ್ಕಳಿದ್ದು, ಅವರಲ್ಲಿ ಮೊದಲಿಬ್ಬರು ಗಂಡು ಮಕ್ಕಳಾಗಿದ್ದು, ಕೊನೆಯವಳೇ ನನ್ನ ಮಗಳು. ಈಗ ಅವಳು ಮಂಡ್ಯ ಶುಗರ್‌ ಫ್ಯಾಕ್ಟರಿ ಸರ್ಕಲ್‌ ಬಳಿ ಇರುವ ಸೇಂಟ್‌ ಜೋಸೆಫ್‌ ಪ್ರೌಢಶಾಲೆಯಲ್ಲಿ 9 ನೇ ತರಗತಿಯಲ್ಲಿ ಓದುತ್ತಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

“ನಮ್ಮ ಮನೆಯಿಂದ ಶಾಲೆಗೆ ಸುಮಾರು ಒಂದೂವರೆ ಕಿಮೀ ಅಂತರ ಇರುವುದರಿಂದ ಶಾಲೆಗೆ ಹೋಗಿ ಬರಲು ಸೈಕಲ್‌ ತೆಗೆದು ಕೊಟ್ಟಿದ್ದೇವೆ. ಹಾಗಾಗಿ ನನ್ನ ಮಗಳು ಸೈಕಲ್‌ನಲ್ಲಿ ಶಾಲೆಗೆ ಓಡಾಡುತ್ತಿಳು. ಈ ವೇಳೆ ಶೇಖ್‌ ಅಕಿಬ್‌ ಎಂಬಾತ ಮಂಡ್ಯನಗರದ ನಿವಾಸಿಯಾಗಿದ್ದು, ಸುಮಾರು 9 ತಿಂಗಳುಗಳಿಂದ ನನ್ನ ಮಗಳ ಸ್ಕೂಲ್‌ ಬಳಿ ಹೋಗಿ ನನ್ನ ಮಗಳನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ನೀನು ನನ್ನನ್ನು ಪ್ರೀತಿಸದೇ ಹೋದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೆದರಿಸಿ, 14 ವರ್ಷದ ನನ್ನ ಮಗಳನ್ನು ತನ್ನ ಕಾರಿನಲ್ಲಿ ಕೂರಿಸಿಕೊಂಡು ಓಡಾಡುತ್ತಿದ್ದ ಎಂದು ಆರೋಪಿಸಿದ್ದಾರೆ.

“ನನ್ನ ಮಗಳನ್ನು ಕರೆದುಕೊಂಡು ಓಡಾಡುತ್ತಿರುವುದನ್ನು ನಾನೇ ನನ್ನ ಕಣ್ಣಾರೆ ಕಂಡಿದ್ದೇನೆ. ಬಳಿಕ ಅವರ ಮನೆಯವರನ್ನು ಪತ್ತೆ ಹಚ್ಚಿ ಅವರ ತಾಯಿ ಮತ್ತು ಅಕ್ಕನನ್ನು ಕರೆಸಿ ಈ ರೀತಿ ಮಾಡದಂತೆ ಬುದ್ದಿವಾದ ಹೇಳಿದ್ದೇನೆ. ಆದರೂ ಶೇಖ್‌ ಅಕಿಬ್‌ ತನ್ನ ದುರ್ವರ್ತನೆ ಬದಲಾಯಿಸಿಕೊಳ್ಳದೆ ನನ್ನ ಅಪ್ರಾಪ್ತ ಮಗಳನ್ನು ಪೀಡಿಸುವುದು, ಛೇಡಿಸುವುದು, ಹಲವು ಫೋನ್‌ ನಂಬರ್‌ಗಳಿಂದ ಫೋನ್‌ ಮಾಡಿ ಪ್ರೀತಿಸುವಂತೆ ಪೀಡಿಸುತ್ತಿದ್ದ, ಇದರಿಂದ ಬೇಸತ್ತು ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದ್ದರಿಂದ ಆರೋಪಿ ಶೇಖ್‌ ಅಕಿಬ್‌ ನನ್ನು ಬಂಧಿಸಿ ಆತನ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ಧಾರೆ.

ಈ ಬಗ್ಗೆ ಮಂಡ್ಯ ಮಹಿಳಾ ಪೊಲೀಸ್ ಠಾಣೆಯಲ್ಲಿ, ಆರೋಪಿಯ ವಿರುದ್ದ ಪೋಕ್ಸೊ ಪ್ರಕರಣ ದಾಖಲಾಗಿದೆ.

ಆರೋಪಿಯನ್ನು ಬಂಧಿಸದ ಪೊಲೀಸರು

ಶೇಖ್‌ ಅಕೀಬ್ ನ ಕಿರುಕುಳದಿಂದ ಬೇಸತ್ತು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದರೂ, ಆರೋಪಿ ವಿರುದ್ದ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರೂ ಇದುವರೆಗೆ ಆತನನ್ನು ಬಂಧಿಸಿಲ್ಲ, ಈ ಹಿಂದೆಯೇ ಆರೋಪಿಯು ತಮ್ಮ ಮಗಳಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ದೂರು ನೀಡಿದ್ದರೂ ಕ್ರಮ ಕೈಗೊಳ್ಳದ ಕಾರಣ ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣದಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ಆರೋಪಿಯನ್ನು ಬಂಧಿಸಿ ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಅವರು ಒತ್ತಾಯಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!