Wednesday, November 18, 2026

ಪ್ರಾಯೋಗಿಕ ಆವೃತ್ತಿ

5 ವರ್ಷ ನಿಖಿಲ್ ಯಾವುದೇ ಚುನಾವಣೆಗೆ ಸ್ಪರ್ಧೆ ಮಾಡಲ್ಲ; HDK

ಮುಂದಿನ ಐದು ವರ್ಷ ನಿಖಿಲ್ ಯಾವುದೇ ಚುನಾವಣೆಗೆ ಸ್ಪರ್ಧೆ ಮಾಡಲ್ಲ. ನಿಖಿಲ್‌ಗೆ ಸಲಹೆ ನೀಡಿದ್ದೇನೆ ರಾಜಕೀಯದ ಸಹವಾಸ ಹೋಗಬೇಡ. ನಿನಗೆ ಭಗವಂತ ಕೊಟ್ಟಿರೋ ಕಲೆ ಸಿನಿಮಾ ಇದೆ ಅದರಲ್ಲಿ ಬದುಕು ಕಟ್ಟಿಕೋ ಎಂದು ಹೇಳಿದ್ದೇನೆ ಎಂದು ಮಾಜಿ ಸಿಎಂ‌ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಜಂಗುಳಿ ಬಿಟ್ಟು ಕಲಾವಿದನಾಗಿ ಬದುಕು ರೂಪಿಸಿಕೊಳ್ಳಲು ಹೇಳಿದ್ದೇನೆ. ನಿಖಿಲ್ ಚುನಾವಣೆಗೆ ನಿಲ್ಲುವ ಪ್ರಶ್ನೆ ಇಲ್ಲ. ಹೀಗಾಗಲೇ ಮೂರು ಚಿತ್ರಗಳನ್ನು ನಿರ್ಮಾಣ ಮಾಡಲು ಕೆಲವರು ಮುಂದೆ ಬಂದಿದ್ದಾರೆ. ಸಿನಿಮಾ ಮಾಡಲು ನಿಖಿಲ್ ಮುಖ ಮಾಡಿದ್ದಾರೆ.
ಹೀಗಾಗಲೇ ಎರಡು ಬಾರಿ‌ ನಿಖಿಲ್ ಸೋತಿದ್ದಾನೆ. ಮಂಡ್ಯ ಎಂಪಿಗೆ ನಿಲ್ಲೂವಾಗಲೂ ಬೇಡಾ ಅಂದಿದ್ದೆ.
ನಿಖಿಲ್ ಮಂಡ್ಯದಲ್ಲಿ ನಿಲ್ಲಲು ತಯಾರು ಇರಲಿಲ್ಲ. ಶಾಸಕರು ಹಾಗೂ ಕಾರ್ಯಕರ್ತರ ಒತ್ತಡದಿಂದ ಚುನಾವಣೆಗೆ ತಲೆ ಕೊಟ್ಟ. ಸೋಲು ಗೆಲುವು ಇರುತ್ತೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ ಎಂದರು.

ದೇವೇಗೌಡರು, ನಾನು ಎಲ್ಲರೂ ಸೋತಿದ್ದೇವೆ. ಜನಾಭಿಪ್ರಾಯ ಏನು ಇದೆ ಅದಕ್ಕೆ ತಲೆಬಾಗಬೇಕು.
ನಾನು ಒತ್ತಡಗಳ ಮೇಲೆ ಚುನಾವಣೆ ಮಾಡಲ್ಲ. ಸದ್ಯಕ್ಕೆ ನಿಖಿಲ್‌ಗೆ ರಾಜಕೀಯ ಬೇಡಾ ಅಂತಾ ಹೇಳಿದ್ದೇನೆ.
ಮುಂದೆ ನೋಡೋಣಾ, ಅವನ ಹಣೆಯಲ್ಲಿ ಬರೆದಿದ್ರೆ ನಾನು ತಪ್ಪಿಸೋಕೆ‌ ಆಗಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನಿನ್ನ ಜೀವನ ರೂಪಿಸಿಕೋ ಎಂದು ನಿಖಿಲ್‌ಗೆ ಹೇಳಿದ್ದೇನೆ. ಆ ಕಲೆಯಲ್ಲಿ‌ ಮುಂದುವರೆಯಪ್ಪಾ ಅಂತಾ ಹೇಳಿದ್ದೇನೆ.
ಯಾವುದೇ ಕಾರಣಕ್ಕೂ ಮುಂದಿನ ಐದು ವರ್ಷ ಚುನಾವಣೆಗೆ ತರಲ್ಲ. ನಿಖಿಲ್ ಕುತಂತ್ರಕ್ಕೆ ಬಲಿಯಾಗಿದ್ದಾನೆ. ಇದೀಗ ಅದೇ ಜನ ಪಶ್ಚಾತ್ತಾಪ ಪಡುವಂತೆ ಆಗಿದೆ, ಇದೇ ರಾಮನಗರದ ಜನರು ಎಲ್ಲಾ ನೋಡ್ತಾ ಇದ್ದಾರೆ.
ರಾಮನಗರವನ್ನು ಹೇಗೆ ಉದ್ಧಾರ ಮಾಡ್ತಾ ಇದಾರೆ ಅಂತಾ ನೋಡ್ತಾ ಇದೀನಿ ಎಂದು ತಿರುಗೇಟು ನೀಡಿದರು.

ಎಂಪಿ ಚುನಾವಣೆಗೆ 28 ಕ್ಷೇತ್ರದಲ್ಲೂ ಅಭ್ಯರ್ಥಿ ಹಾಕಬೇಕು ಎಂಬ ಅಭಿಪ್ರಾಯ ಇದೆ. ನಾನು ಮೈತ್ರಿ ಮಾಡಿಕೊಂಡರೆ, ಮೈತ್ರಿ ಮಾಡಿಕೊಳ್ಳದ ಕ್ಷೇತ್ರದಲ್ಲಿ ಕಾರ್ಯಕರ್ತರು ಏನು ಮಾಡ್ತಾರೆ. ಕಳೆದ ಬಾರಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಏನು ಅನುಕೂಲ ಆಯ್ತು ? ಕಾಂಗ್ರೆಸ್‌ನಿಂದ ಕುತ್ತಿಗೆ ಕುಯ್ಯುವ ಕೆಲಸ ಆಯ್ತು.
ಮೈತ್ರಿಯಿಂದ ನನ್ನ ಕಾರ್ಯಕರ್ತರು ಬಲಿಪಶುಗಳು ಆಗಬಾರದು. ಮೈತ್ರಿ ಆಗದೇ ಇದ್ದಿದ್ರೆ ಮಂಡ್ಯದಲ್ಲಿ ಸೋಲುವ ಪ್ರಶ್ನೆ ಇರ್ತಾ ಇರಲಿಲ್ಲ. ಸ್ವತಂತ್ರವಾಗಿ ಚುನಾವಣೆ ಎದುರಿಸಬೇಕು ಎಂದುಕೊಂಡಿದ್ದೇವೆ ಎಂದರು.

28 ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಅಂತಾ ನಾನು ಹೇಳಲ್ಲ. ನಾಲ್ಕೈದು ಕ್ಷೇತ್ರಗಳಲ್ಲಿ ನಾವು ಗೆಲ್ಲುವ ವಿಶ್ವಾಸ ಇದೆ.
28 ಕ್ಷೇತ್ರಗಳಲ್ಲಿ ಕಾರ್ಯಕರ್ತರನ್ನು ಉಳಿಸಿಕೊಳ್ಳಲು ಕೆಲಸ ಮಾಡ್ತೀವಿ ಎಂದು ಹೇಳಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ