Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯದ ಜನರು ಅನ್ಯಾಯ ಮಾಡಲಿಲ್ಲ: ಹೆಚ್.ಡಿ ಕುಮಾರಸ್ವಾಮಿ

2019ರ ಲೋಕಸಭೆ ಮತ್ತು 2023ರ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಜನತೆ ನಮಗೆ ಅನ್ಯಾಯ ಮಾಡಲಿಲ್ಲ. ನಮ್ಮದೆ ಕೆಲವು ತಪ್ಪುಗಳಿಂದ ನಮ್ಮ ಪಕ್ಷಕ್ಕೆ ಹಿನ್ನೆಡೆಯಾಗಿದ್ದು,  ನಮ್ಮ ತಪ್ಪುಗಳನ್ನು ತಿದ್ದಿ ಕೊಳ್ಳಲು ಈ ಚುನಾವಣೆಯಲ್ಲಿ ಅವಕಾಶ ಮಾಡಿಕೊಡಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮನವಿ ಮಾಡಿದರು.

ಮಂಡ್ಯದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜೆಡಿಎಸ್ ಪಕ್ಷ ಹಮ್ಮಿಕೊಂಡಿದ್ದ ಲೋಕಸಭಾ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ಜನರು ದೇವೇಗೌಡರ ಬಗ್ಗೆ ಅಭಿಮಾನ ಇಟ್ಟುಕೊಂಡಿದ್ದಾರೆ.ಕಳೆದ ಚುನಾವಣೆಗಳಲ್ಲಿ ಆದ ತಪ್ಪುಗಳನ್ನು ಜಿಲ್ಲೆಯ ಜನರು ಕ್ಷಮಿಸಿ ಮುಂಬರುವ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳಿಗೆ ಆಶೀರ್ವದಿಸ ಬೇಕೆಂದರು.

ರಾಜ ವಂಶಸ್ಥರೇ

ಹೊಟ್ಟೆಪಾಡಿಗಾಗಿ ಬಿಜೆಪಿ ಜೊತೆ ಸೇರಿದ್ದಾರೆಂಬ ಚಲುವರಾಯಸ್ವಾಮಿ ಹೇಳಿಕೆಗೆ ವ್ಯಂಗ್ಯ ವಾಡಿದ ಕುಮಾರಸ್ವಾಮಿ ಅವರು ಹುಟ್ಟಿದಾಗಲೇ ಮಹಾರಾಜರ ವಂಶಸ್ಥರಿರಬೇಕು. ಅವರ ಬಗ್ಗೆ ನನಗಿಂತ ನಾಗಮಂಗಲದ ಜನತೆಗೆ ಗೊತ್ತಿದೆ.  1999ರ ಚುನಾವಣೆಯಲ್ಲಿ ಮೊದಲು ಅಭ್ಯರ್ಥಿಯಾಗಿ ಚಲುವರಾಯಸ್ವಾಮಿ ಆಯ್ಕೆ ಆಗಿದ್ದರು. ನಾವೆಲ್ಲರೂ ಸೋತಿದ್ದೆವು. 2004 ರ ಚುನಾವಣೆಯಲ್ಲಿ ಬೆಳ್ಳೂರಿನಲ್ಲಿ ಒಂದು ಕಾರ್ಯಕ್ರಮದಲ್ಲಿ ಅವರ ಜೊತೆ ಭಾಗಿಯಾಗಿದ್ದೆ. ಆಗ ಚಲುವರಾಯಸ್ವಾಮಿ ಮೇಲೆ ಅಭಿವೃದ್ಧಿ ಆಗಿಲ್ಲ ಎಂದು ಜನರು ಬೇಸರ ಮಾಡಿಕೊಂಡಿದ್ದರು.ಆಗ ನಾನೇ ಜನರಲ್ಲಿ ಬೇಸರ ಮಾಡಿ ಕೊಳ್ಳಲಾರದಂತೆ
ಮನವಿ ಮಾಡಿದ್ದೆ.ಅಂತವರು ಈಗ ನನ್ನ ಹೊಟ್ಟೆಪಾಡಿನ ಬಗ್ಗೆ ಮಾತಾಡ್ತಾರೆ ಎಂದು ವ್ಯಂಗ್ಯವಾಡಿದರು.

ನನ್ನ ಸ್ವಂತ ಅಕ್ಕ ಇದ್ದಂತೆ

ಮಂಡ್ಯ ಸಂಸದೆ ಸುಮಲತಾರವರು ನನ್ನ ಸ್ವಂತ ಅಕ್ಕ ಇದ್ದಂತೆ. ಇನ್ನು ಸಂಘರ್ಷ ಮುಂದುವರಿಸಿಕೊಂಡು ಹೋಗಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಗೋಳಾಡ್ತಿದ್ದ

ಚಲುವರಾಯಸ್ವಾಮಿ ಅವರು 2004 ರಲ್ಲಿ ಆರು ತಿಂಗಳು ನನ್ನ ಬಳಿ ಬೆಳಿಗ್ಗೆ-ರಾತ್ರಿ ಮಂತ್ರಿ ಮಾಡಿ ಎಂದು ಗೋಳಾಡ್ತಿದ್ರು. ಇವರನ್ನ ಮಂತ್ರಿ ಮಾಡೋಕೆ ಶಾಸಕರ ಸಭೆ ಸೇರಿದ್ದೆವು. ಮಂಡ್ಯದಿಂದ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡರನ್ನ ಮಂತ್ರಿ ಮಾಡಲು ನಿರ್ಧಾರ ಮಾಡಿದ್ದೆವು. ಆಗ ವಿಜಯಕ್ಕನನ್ನ ಹೆಸರು ಕೈ ಬಿಟ್ಟು ಚಲುವರಾಯಸ್ವಾಮಿ ಹೆಸರು ಸೇರಿಸಿದ್ದು ನಾನು. ಈಗ ನನ್ನ ಬಗ್ಗೆ ಮಾತನಾಡುತ್ತಿದ್ದಾರೆ ಎಂದು
ಸಚಿವ ಚಲುವರಾಯಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆ ಹತ್ತಿರ ಆಗ್ತಿದೆ. ಅಭ್ಯರ್ಥಿ ಘೋಷಣೆ ಮಾಡದ ಬಗ್ಗೆ ಕಾರ್ಯಕರ್ತರಲ್ಲಿ ಗೊಂದಲ ಇದೆ.
ಕ್ಷೇತ್ರ ನಿರ್ಲಕ್ಷ್ಯ ಮಾಡ್ತಿದ್ದಾರ ಅನ್ನೋ ಪ್ರಶ್ನೆ ಹಲವರಲ್ಲಿ ಇದೆ. ಇಂದಿನ ನಿಮ್ಮ ಉತ್ಸಾಹ, ಪ್ರೀತಿ, ವಿಶ್ವಾಸ ಕಾಳಜಿಯಿಂದ ಸಭೆ ತುಂಬಿದೆ. ಇಂದಿನ ಸಭೆಯಲ್ಲಿ ನಾವು ಸಂದೇಶ ಕೊಡೋದಕ್ಕಿಂತ, ನೀವು ಸಂದೇಶ ಕೊಟ್ಟಿದ್ದೀರಿ. ಹಾಸನದಲ್ಲಿ ಕೆಲವೊಂದು ಗೊಂದಲ ಇತ್ತು. ಹೀಗಾಗಿ ನಾನೇ ಹಾಸನಕ್ಕೆ ಹೋಗಿ ಅಪಪ್ರಚಾರಕ್ಕೆ ಅಂತ್ಯವಾಡಿದೆ. ಸಭೆ ನಂತರ ಎಲ್ಲವೂ ಸರಿ ಹೋಗಿದೆ. ಬಹಳಷ್ಟು ಜನ ಫೋನ್ ಮಾಡಿ ಹೇಳ್ತಿದ್ದಾರೆ.
ದೇವೇಗೌಡರಿಗೆ ರಾಜಕೀಯವಾಗಿ ಹಾಸನಕ್ಕಿಂತ ಹೆಚ್ಚು ಶಕ್ತಿ ನೀಡಿದ್ದು ಮಂಡ್ಯ. ನನ್ನ ಮಾತುಗಳು ನಾಟಕೀಯ ಮಾತಲ್ಲ. ನಾನು, ನನ್ನ ಕುಟುಂಬದ ಯಾರೂ ಯಾರಿಗೂ ದ್ರೋಹ ಮಾಡಿದವರಲ್ಲ. ಬೆಳೆಯುವವವರನ್ನ ಹಿಂದೆ ನಿಂತು ಶಕ್ತಿ ತುಂಬಿದ್ದೇವೆ ಎಂದರು.

ಬಡ್ಡಿ ಹಣದಿಂದ ಚುನಾವಣೆ

ನನ್ನ ಬಿಡದಿ ತೋಟ ಮಾರಿ ಚುನಾವಣೆ ಮಾಡಲು ಹೋಗಿದ್ದೆ. ಹಲವು ಬಡ್ಡಿ ವ್ಯವಹಾರ ಮಾಡೋರಿಂದ ಹಣ ತಂದು ಚುನಾವಣೆ ಮಾಡಿದ್ದೇವೆ. ನಾವು ಬೇರೆ ಹಾದಿಯಿಂದ ಹಣ ಸಂಪಾದಿಸಿಲ್ಲ.ಇವತ್ತು ಜಾತ್ಯತೀತ ಪದ ತೆಗೆದು ಬಿಡಿ ಅಂತಾರೆ. 2018ರಲ್ಲಿ ನಡೆದ ಘಟನೆಯೇ ದೇವೇಗೌಡರ ಈ ನಿರ್ಧಾರಕ್ಕೆ ಕಾರಣ. ಏಳಕ್ಕೆ ಏಳು ಕ್ಷೇತ್ರದಲ್ಲೂ ಬಹಳ ಅಂತರದಿಂದ ಗೆಲ್ಲಿಸಿ ಇತಿಹಾಸ ನಿರ್ಮಿಸಿದ್ದು ಮಂಡ್ಯದ ಜನರು. ಅಂದು ನಿಮ್ಮ ಆಶೀರ್ವಾದದಿಂದ ಕಾಂಗ್ರೆಸ್‌ ಜೊತೆ ಸರ್ಕಾರ ಮಾಡಿದೆ.ಮೊದಲ ಬಜೆಟ್ ಮಾಡಲು ಅವಕಾಶ ಕೊಡಲಿಲ್ಲ.
ನಮ್ಮ ಹಳೇ ಬಜೆಟ್ ಮುಂದುವರಿಸಿ ಅಂದ್ರು. ಸ್ವತಂತ್ರವಾಗಿ ಸರ್ಕಾರ ನಡೆಸಲು ಬಿಡಲಿಲ್ಲ ಎಂದರು.

ಇವತ್ತು ಎರಡೂ ಕಡೆಯೂ ಗ್ಯಾರಂಟಿ ಅಂತಾರೆ. ಕೇಂದ್ರದೊಂದು ಗ್ಯಾರಂಟಿ, ರಾಜ್ಯದ್ದು ಒಂದು ಗ್ಯಾರಂಟಿ.
ಫ್ರೀ ಕರೆಂಟ್ ಅಂತಾರೆ. ಅದರಲ್ಲಿ ದೊಡ್ಡ ಸಮಸ್ಯೆ ಇದೆ. ಗ್ಯಾರಂಟಿ ಯೋಜನೆ ಅನ್ನೋದು ಬೋಗಸ್. ಜನರಿಗೆ ಇದೆಲ್ಲ ಸರಿಯಾಗಿ ತಲುಪುತ್ತಿಲ್ಲ ಎಂದರು.

ಜಾಹೀರಾತಿನಲ್ಲಿ ಬರೀ ಸುಳ್ಳುಗಳನ್ನೇ ಹೇಳ್ತಿದ್ದಾರೆ. ನಿತ್ಯವೂ ಎದ್ದ ತಕ್ಷಣ ಪೇಪರ್ ನಲ್ಲಿ ಅವರ ಫೋಟೋ ನೋಡ್ಬೇಕು. ಒಂದು ವರ್ಷದಿಂದ ಕೋಟ್ಯಂತರ ರೂಪಾಯಿ ಜಾಹೀರಾತು ಕೊಟ್ಟಿದ್ದಾರೆ. ಜಾಹೀರಾತಿಗೆ ಕೊಟ್ಟ ಹಣದಿಂದ ಹಲವು ಗ್ರಾಮಗಳ ಅಭಿವೃದ್ಧಿ ಮಾಡಬಹುದಿತ್ತು. ಅಭಿವೃದ್ಧಿಗೆ ಬಳಕೆ ಆಗಬೇಕಿದ್ದ ಹಣವನ್ನ ಜಾಹೀರಾತಿಗೆ ಪೋಲು ಮಾಡ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಮಂಡ್ಯ ಜಿಲ್ಲೆಯ 200ಕ್ಕು ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡ್ರು. ಎಲ್ಲರ ಮನೆಗೆ ಹೋಗಿ ಬಂದೆ. ಇವರು ನನ್ನ ಕೇಳ್ತಾರೆ ಮಂಡ್ಯಕ್ಕೆ ಏನು ಕೊಡುಗೆ ಅಂತಾ. ಮಂಡ್ಯಕ್ಕೆ ಕೊಟ್ಟ ಅನುದಾನವನ್ನ ಮಂಡ್ಯ ಬಜೆಟ್ ಅಂತಾ ಹೀಯಾಳಿಸಿದ್ರು. ಇವಾಗ ನಾಟಿ ಸ್ಟೈಲ್ ನಲ್ಲಿ ಚುನಾವಣೆ ಮಾಡ್ತಾರಂತೆ.ನಾವೂ ನಾಟಿ ಸ್ಟೈಲ್ ನಲ್ಲಿಯೇ ಚುನಾವಣೆ ಮಾಡೋಣ ಎಂದರು.

ಮಾ.25ರಂದು ಘೋಷಣೆ

ಇದೇ ತಿಂಗಳ 21ಕ್ಕೆ ನನಗೆ ಹೃದಯದ ಆಪರೇಷನ್ ಇದೆ.ನನಗೆ 84 ವರ್ಷ ಆಯಸ್ಸು ಎಂದು ಜ್ಯೋತಿಷಿಗಳು ಹೇಳಿದ್ದಾರೆ. ದೇವೇಗೌಡರು ಜ್ಯೋತಿಷಿಗಳ ಮಾತು ಕೇಳಿ‌ ಬದುಕಿದ್ದಾರೆ. ಈ ಜೀವ ಭೂಮಿಗೆ ಇಷ್ಟು ಬೇಗ ಹೋಗಲ್ಲ. ಜನರು ಸರ್ಟಿಫಿಕೇಟ್ ನೀಡಿದ ಮೇಲೆ ಈ ಜೀವ ಭೂಮಿಗೆ ಹೋಗೋದು. ಜನರ ಋಣ ತೀರಿಸಿದ ಮೇಲೆ ನಾನು ಭೂಮಿಗೆ ಹೋಗೋದು. ಅಲ್ಲಿಯವರೆಗೆ ನಾನು ಭೂಮಿಗೆ ಹೋಗಲ್ಲ. ನಾನು ರಾಜಕೀಯಕ್ಕೆ ಬರಬೇಕು ಎಂದು ಕೊಂಡವನಲ್ಲ. ಸಿನಿಮಾ ಹಂಚಿಕೆದಾರನಾಗಿ ನಾನು ಕೆಲಸ ಮಾಡುತ್ತಿದ್ದೆ. ಆಕಸ್ಮಿಕವಾಗಿ ನಾನು ರಾಜಕೀಯಕ್ಕೆ ಬಂದಿದ್ದು. ಮಂಡ್ಯ ಜಿಲ್ಲೆಯ ಜನರ‌ ಜೊತೆ ಮೊದಲಿಂದಲೂ ನಾನು ಇದ್ದೇನೆ.
2019 ರಲ್ಲಿ ಹೊಂದಾಣಿಕೆ ಎಂದು ಕುತ್ತಿಗೆ ಕೂಯ್ದರು. ಅದಕ್ಕೆ ಉತ್ತರ ಕೊಡುವ ಶಕ್ತಿ ಮಂಡ್ಯ ಜನರ ಕೈಯಲ್ಲಿ ಇದೆ. ನನ್ನ‌ ಜನ್ಮ ಭೂಮಿ ಹಾಸನ, ರಾಜಕೀಯ ಭವಿಷ್ಯ ನೀಡಿದ್ದು ರಾಮನಗರ. ನನ್ನ ಜೀವ ಮಿಡಿಯುವುದು ಮಂಡ್ಯಗಾಗಿ ಎಂದರು.

ಅಮಿತ್ ಷಾ ಒತ್ತಡ

ಡಾ.ಮಂಜುನಾಥ್ ಅವರನ್ನು ಸ್ಪರ್ಧೆ ಮಾಡುವಂತೆ ನಾನು‌ ಹೇಳಿಲ್ಲ. ಅವರು‌ ಸಹ ಬಯಸಿರಲಿಲ್ಲ.ಅಮಿತ್ ಷಾ ಅವರು ಒತ್ತಡ ಹಾಕಿದರು. ಅಲ್ಲದೆ ಜನರ ಒತ್ತಾಯದ ಮೇರೆಗೆ ಅವರು ರಾಜಕೀಯಕ್ಕೆ ಬಂದಿದ್ದಾರೆ.
ನಾವು ರಾಮನಗರ ಜನರನ್ನು ಗುಲಾಮರನ್ನಾಗಿ ಮಾಡಿಕೊಂಡಿಲ್ಲ. ನಾವು ಅವರ ಸೇವಕರಾಗಿದ್ದೇವೆ.
ರಾಮನಗರ ಜನರನ್ನು ಗುಲಾಮರನ್ನಾಗಿ ಕಾಣೋದು ಕಾಂಗ್ರೆಸ್ ಅವರು. ಮಾವನನ್ನೇ ಯಾಮಾರಿಸಿದ ಚತುರ ಅಳಿಯ ಅಂತಾರೆ ಆ ಮಹಾನುಭಾವ. ಪಾಪ ಡಾ.ಮಂಜುನಾಥ್ ಎಷ್ಟೋ ಜನರ ಪ್ರಾಣ ಉಳಿಸಿದ್ದಾರೆ.
ಅಂತವರಿಗೆ ಲಘುವಾಗಿ ಇವರು ಮಾತಾಡುತ್ತಿದ್ದಾರೆ. ಇವರು ಕಮಿಷನ್ ಪಡೆದು ರಾಜಕೀಯ ಮಾಡ್ತಾ ಇದ್ದಾರೆ ಎಂದು ಕಿಡಿಕಾರಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ