Thursday, September 19, 2024

ಪ್ರಾಯೋಗಿಕ ಆವೃತ್ತಿ

HDK-BSY ಜಂಟಿ ಡಿನೋಟಿಫಿಕೇಷನ್ ಹಗರಣ | ನಾಳೆ ನ್ಯಾಯಾಧೀಶರ ಮುಂದೆ ಅಧಿಕಾರಿಗಳ ಹೇಳಿಕೆ ದಾಖಲು

ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಬಿ.ಎಸ್.ಯಡಿಯೂರಪ್ಪನವರು ಜಂಟಿಯಾಗಿ ನಡೆಸಿದ ಡಿನೋಟಿಫಿಕೇಷನ್ ಹಗರಣದ ಸಂಪೂರ್ಣ ದಾಖಲೆಗಳ ಸಮೇತ ಈದಿನ.ಕಾಮ್ 2024ರ ಸೆಪ್ಟೆಂಬರ್ 16ರಂದು ತನಿಖಾ ವರದಿಯನ್ನು ಪ್ರಕಟಿಸಿತ್ತು.

ಇದೀಗ ಲೋಕಾಯುಕ್ತ ಅಧಿಕಾರಿಗಳು ಅಕ್ರಮ ಡಿನೋಟಿಫಿಕೇಷನ್ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಹಲವು ಅಧಿಕಾರಿಗಳ ಹೇಳಿಕೆಯನ್ನು ನ್ಯಾಯಾಧೀಶರ ಎದುರು ದಾಖಲು ಮಾಡಲು ಮುಂದಾಗಿದ್ದಾರೆ. ನಾಳೆ ಸೆಪ್ಟೆಂಬರ್ 19ರಂದು ಲೋಕಾಯುಕ್ತ ನ್ಯಾಯಾಲಯದಲ್ಲಿ ಹಲವು ಅಧಿಕಾರಿಗಳ ಹೇಳಿಕೆಯನ್ನು ದಾಖಲಿಸಲು ಮೂಹೂರ್ತ ನಿಗದಿಯಾಗಿದೆ.

ವಿಚಾರಣೆಯ ಹಂತದಲ್ಲಿ ತಪ್ಪೊಪ್ಪಿಗೆ ಅಥವಾ ಸಾಕ್ಷ್ಯಗಳನ್ನು ನಿಯಮ 164ಅಡಿಯಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ದಾಖಲೆ ಮಾಡಲಾಗುತ್ತದೆ. ಹೀಗೆ ಮಾಡುವುದರಿಂದ ವಿಚಾರಣೆಯ ಪ್ರಕ್ರಿಯೆಯಲ್ಲಿ ಸಾಕ್ಷಿದಾರರು ಪ್ರತಿಕೂಲ ಹೇಳಿಕೆ ಕೊಡುವುದನ್ನು ತಪ್ಪಿಸಬಹುದು. ಈ ರೀತಿಯ ಹೇಳಿಕೆಯನ್ನು ಆಧರಿಸಿ ತನಿಖಾಧಿಕಾರಿಗಳು ತನಿಖೆಯನ್ನು ತ್ವರಿತವಾಗಿ ಪುರ್ಣಗೊಳಿಸಲು ನೆರವಾಗುತ್ತದೆ.

ಬೆಂಗಳೂರು ಮಹಾನಗರದ ಗಂಗಾನಗರ (ಗಂಗೇನಹಳ್ಳಿ) ಪ್ರದೇಶದಲ್ಲಿ 1 ಎಕರೆ 11 ಗುಂಟೆ ಭೂಮಿಯನ್ನು ಸತ್ತವರ ಹೆಸರಿನಲ್ಲಿ ಹಾಲಿ ಕೇಂದ್ರ ಸಚಿವ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಜಂಟಿಯಾಗ ಡಿನೋಟಿಫೈ ಮಾಡಿಸಿದ್ದರು. ಡಿನೋಟಿಫೈ ಆದ ಭೂಮಿಯನ್ನು ಅಂತಿಮವಾಗಿ ಕುಮಾರಸ್ವಾಮಿ ಅವರ ಬಾಮೈದ ಡಾ. ಚನ್ನಪ್ಪ ಎಂಬಾತನ ಹೆಸರಿಗೆ ನೋಂದಣಿ ಮಾಡಿಕೊಡಲಾಗಿತ್ತು. ಈ ಬಗ್ಗೆ 2015ರಲ್ಲಿ ಲೋಕಾಯುಕ್ತಕ್ಕೆ ದೂರನ್ನೂ ನೀಡಲಾಗಿತ್ತು. ಆದರೆ, ದೂರು ದಾಖಲಾಗಿ 9 ವರ್ಷಗಳು ಕಳೆದರೂ ಲೋಕಾಯುಕ್ತ ತನಿಖೆಯನ್ನು ಪೂರ್ಣಗೊಳಿಸದೆ, ನಿರ್ಲಕ್ಷ್ಯ ಧೋರಣೆ ತಳೆದಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಮುಖ ಬೆಳವಣಿಗೆಯೊಂದು ನಡೆದಿದ್ದು, ಡಿನೋಟಿಫೈ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಅಂದಿನ ಅಧಿಕಾರಿಗಳಾದ ರಾಕೇಶ್ ಸಿಂಗ್, ಜ್ಯೋತಿ ರಾಮಲಿಂಗಂ, ನಂದಕುಮಾರ್ ಮತ್ತಿತರ ಅಧಿಕಾರಿಗಳ ಹೇಳಿಕೆಗಳನ್ನು ಲೋಕಾಯುಕ್ತ ದಾಖಲಿಸಿಕೊಳ್ಳಲಿದೆ.

ಕೃಪೆ: ಈ ದಿನ.ಕಾಂ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!