ಕೆ.ವಿ.ಶಂಕರಗೌಡರ ಮೊಮ್ಮಗ, ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ಅವರ ನಿವಾಸಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ಮಾತೃ ಪಕ್ಷಕ್ಕೆ ಮರಳಿ ಬರುವಂತೆ ಆಹ್ವಾನಿಸಿದರು.
ಮಂಡ್ಯನಗರದ ಬಂದೀಗೌಡ ಬಡಾವಣೆಯಲ್ಲಿರುವ ವಿಜಯ್ ಆನಂದ್ ನಿವಾಸಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಸಾ.ರಾ.ಮಹೇಶ್ ಹಾಗೂ ಮಾಜಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ ಕೆ.ಸುರೇಶ್ ಗೌಡ, ಅನ್ನದಾನಿ ಹಾಗೂ ಉಭಯ ಪಕ್ಷಗಳ ಹಲವು ಮುಖಂಡರು ಸೌಜನ್ಯದ ಭೇಟಿ ನೀಡಿದರು.
ಹಿಂದಿನ ಕಹಿ ಘಟನೆಗಳನ್ನು ಮರೆತು ಮಾತೃ ಪಕ್ಷಕ್ಕೆ ಮರಳಿ ಪಕ್ಷದ ಬಲವರ್ಧನೆಯಲ್ಲಿ ತೊಡಗಬೇಕು ಹಾಗೂ ಮೈತ್ರಿ ಅಭ್ಯರ್ಥಿಯಾಗಲಿರುವ ನನ್ನ ಗೆಲುವಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದ ಕುಮಾರಸ್ವಾಮಿ ಅವರ ಆಹ್ವಾನಕ್ಕೆ ಮನಸೋತ ವಿಜಯ್ ಆನಂದ್ ಅವರು ನಾಳೆಯಿಂದಲೇ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಸುಮಾರು 5 ನಿಮಿಷಗಳ ಕಾಲ ವಿಜಯ್ ಆನಂದ್ ಜೊತೆ ಕುಮಾರಸ್ವಾಮಿ ಗೌಪ್ಯ ಮಾತುಕತೆ ನಡೆಸಿದರು.
ಭೇಟಿ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಬಿ.ಆರ್.ರಾಮಚಂದ್ರು, ಬಿಜೆಪಿ ಮುಖಂಡ ಅಶೋಕ್ ಜಯರಾಂ ಇತರರು ಭಾಗಿಯಾಗಿದ್ದರು.




