ಅಪೌಷ್ಟಿಕತೆ ನಿರ್ಮೂಲನೆ ಮತ್ತು ಆರೋಗ್ಯ ವರ್ಧನೆಗಾಗಿ ಪೌಷ್ಟಿಕ ಕೈ ತೋಟ ನಿರ್ಮಿಸಿಕೊಳ್ಳಿ ಎಂದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ.ಎನ್.ಟಿ.ನರೇಶ್ ಸಲಹೆ ನೀಡಿದರು.
ಮಂಡ್ಯ ತಾಲ್ಲೂಕಿನ ದುದ್ದ ಹೋಬಳಿಯ ಕನ್ನಹಟ್ಟಿ ಗ್ರಾಮದಲ್ಲಿ ಕೃಷಿ ವಿಜ್ಞಾನ ಕೇಂದ್ರ, ವಿಸಿ ಫಾರಂ, ಮಂಡ್ಯದ ವತಿಯಿಂದ “ಆಹಾರ ಭದ್ರತೆಗಾಗಿ ಪೌಷ್ಟಿಕ ಕೈ ತೋಟ” ಮುಂಚೂಣಿ ಪ್ರಾತ್ಯಕ್ಷಿಕೆಯ ಕ್ಷೇತ್ರೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಕಮಲಾಬಾಯಿ ಕೊಡಗಿರವರು ಮಾತನಾಡಿ, “ಆಹಾರ ಭದ್ರತೆಗಾಗಿ ಪೌಷ್ಟಿಕ ಕೈತೋಟ” ಮುಂಚೂಣಿ ಪ್ರಾತ್ಯಕ್ಷಿಕೆಯ ಪ್ರಾಮುಖ್ಯತೆ ಕುರಿತು ಮಾಹಿತಿ ನೀಡುತ್ತಾ ಸಾವಯವ ಪದ್ಧತಿಯಲ್ಲಿ ಗೃಹ ತ್ಯಾಜ್ಯಗಳ ಹಾಗೂ ಸ್ಥಳೀಯ ಸಂಪನ್ಮೂಲಗಳನ್ನು ಬಳಕೆಮಾಡಿ, ಕಡಿಮೆ ಖರ್ಚು ಹಾಗೂ ಕಡಿಮೆ ಅವಧಿಯಲ್ಲಿ ಅತ್ಯಂತ ಪೋಷಕಾಂಶ ಭರಿತವಾದ ತಾಜಾ ಸೊಪ್ಪು ತರಕಾರಿಗಳನ್ನು ಬೆಳೆದು ಬಳಕೆ ಮಾಡಿದಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸಿ ಮನೆ ಮಂದಿಯ ಆರೋಗ್ಯವನ್ನು ವೃದ್ಧಿಸಿಕೊಳ್ಳುವ ಏಕೈಕ ಮಾರ್ಗ ಎಂದು ಕ್ಷೇತ್ರೋತ್ಸವದಲ್ಲಿ ಭಾಗವಹಿಸಿದ್ದ ರೈತ ಮಹಿಳೆಯರಿಗೆ ತಿಳಿಸಿದರು.
ವೇದಿಕೆಯಲ್ಲಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ತಾಂತ್ರಿಕ ಅಧಿಕಾರಿ ಶ್ರೀ ಮಹೇಶ್, ಹೆಚ್.ಎಂ. ರವರು ಕಾರ್ಯಕ್ರಮವನ್ನು ನಿರೂಪಿಸಿ ನಡೆಸಿಕೊಟ್ಟರು. ಮನೆಯ ಮುಂದೆ ರಾಸಾಯನಿಕ ಮುಕ್ತ ಸೊಪ್ಪು, ತರಕಾರಿಗಳನ್ನು ಬೆಳೆಯುವ ಮೂಲಕ ಆರೋಗ್ಯವಾದ ಜೀವನ ನಡೆಸಬಹುದು ಎಂದರು.




