Thursday, September 19, 2024

ಪ್ರಾಯೋಗಿಕ ಆವೃತ್ತಿ

ಆರೋಗ್ಯಕರ ಕಣ್ಣಿಗೆ “ಎ”ಅನ್ನಾಂಗ ಅವಶ್ಯಕ:ಡಾ.ಬೆನ್ನೂರ

ಮಕ್ಕಳ ಕಣ್ಣು, ಚರ್ಮ ಮತ್ತು ಮೂಳೆಗಳ ಬೆಳವಣಿಗೆಗೆ “ಎ”ಅನ್ನಾಂಗ ಅವಶ್ಯಕ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಡಾ.ಎಸ್.ಡಿ.ಬೆನ್ನೂರ ಹೇಳಿದರು.

ಶ್ರೀರಂಗಪಟ್ಟಣ ತಾಲ್ಲೂಕಿನ ಅಲ್ಲಾಪಟ್ಟಣ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಟಿ.ಎಂ. ಹೊಸೂರ ಆರೋಗ್ಯ ಕೇಂದ್ರ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ ವತಿಯಿಂದ ಮಕ್ಕಳಿಗೆ “ಎ”ಅನ್ನಾಂಗ ದ್ರಾವಣ ವಿತರಿಸುವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಹಗಲಿನಲ್ಲಿ ಕಣ್ಣು ಕಾಣಿಸುತ್ತಿದ್ದು, ರಾತ್ರಿ ವೇಳೆ ಕಣ್ಣು ಕಾಣಿಸದಿರುವದು “ಎ” ಅನ್ನಾಂಗ ಕೊರತೆಯ ಮುಖ್ಯವಾದ ಚಿಹ್ನೆ ಆಗಿದ್ದು ಮುಂದೆ ಆಗಬಹುದಾದ ತೊಂದರೆಗೆ ಇದೊಂದು ಮುಖ್ಯವಾದ ಎಚ್ಚರಿಕೆಯಾಗಿದೆ. ಇದು ಮಕ್ಕಳಲ್ಲಿ ಅಧಿಕವಾಗಿ ಕಂಡುಬರುತ್ತಿದ್ದು, ಮಕ್ಕಳಿಗೆ “ಎ”ಅನ್ನಾಂಗ ದ್ರಾವಣ ಕುಡಿಸುವುದರಿಂದ ಅಂಧತ್ವ ನಿವಾರಣೆ ಜೊತೆಗೆ ಅತಿಸಾರಬೇಧಿ, ನ್ಯೂಮೋನಿಯಾದಂತಹ ಆರೋಗ್ಯ ತೊಂದರೆಗಳ ಕೂಡ ತಡೆಯಬಹುದಾಗಿದೆ.ಆದ್ದರಿಂದ ತಪ್ಪದೆ “ಎ” ಅನ್ನಾಂಗ ದ್ರಾವಣ ಕುಡಿಸಿ ಇರುಳುಗಣ್ಣು ತಪ್ಪಿಸಿ ಎಂದು ತಾಯಂದಿರಿಗೆ ಸಲಹೆ ನೀಡಿದರು.

ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಕಾವ್ಯಾ ಕೆ.ಎಸ್. ಮಾತನಾಡಿ, 15 ತಿಂಗಳುಗಳಿಂದ 5 ವರ್ಷದ ವರೆಗಿನ ಮಕ್ಕಳಿಗೆ ಪ್ರತಿ 6 ತಿಂಗಳಿಗೊಮ್ಮೆ “ಎ ” ಅನ್ನಾಂಗ ದ್ರಾವಣ ಕುಡಿಸುತ್ತಿದ್ದು, ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಹಾಗೂ ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಹಾಕಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ರಾಜೇಶ್ವರಿ, ಮಕ್ಕಳ ತಾಯಂದಿರಾದ ಅನುಷಾ, ಜಯಲಕ್ಷ್ಮಿ, ಭಾಗ್ಯಮ್ಮ, ಭೂಮಿಕಾ, ಆಶಾ ಕಾರ್ಯಕರ್ತೆ ಸುಕನ್ಯಾ ಮತ್ತಿತರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!