Sunday, September 8, 2024

ಪ್ರಾಯೋಗಿಕ ಆವೃತ್ತಿ

ಆಹಾರದಲ್ಲಿ ಸಿರಿಧಾನ್ಯ ಬಳಕೆಯಿಂದ ಆರೋಗ್ಯಕರ ಜೀವನ: ಚಲುವರಾಯಸ್ವಾಮಿ

ಮಂಡ್ಯ ಜಿಲ್ಲೆಯಲ್ಲಿ ಇಂದು ಆಯೋಜಿಸಲಾಗಿರುವ ಕೃಷಿಕರ ಜಾಗೃತಿ ಸಮಾವೇಶದಲ್ಲಿ ಕೃಷಿ ಬಗ್ಗೆ ಅನೇಕ ಮಾಹಿತಿಯನ್ನು ನೀಡಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚಲುವರಾಯಸ್ವಾಮಿ ತಿಳಿಸಿದರು.

ಮಂಡ್ಯ ಪಿ.ಇ.ಎಸ್ ವಿದ್ಯಾ ಸಂಸ್ಥೆಯ ವಿವೇಕಾನಂದ ರಂಗಮಂದಿರದಲ್ಲಿ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನ ಕೃಷಿ ಬೆಳೆಗಾರರ ಸಂಘ, ಸಂಪೂರ್ಣ ಸಾವಯವ ಕೃಷಿಕರ ಸಂಘ ಹಾಗೂ ಆರಿಗ್ರಾಫ್ ಇವರ ಸಹಭಾಗಿತ್ವದಲ್ಲಿ ನಡೆದ ಕೃಷಿಕರ ಜಾಗೃತಿ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಿರಿಧಾನ್ಯಗಳನ್ನು ಆಹಾರದಲ್ಲಿ ಉಪಯೋಗಿಸುವುದರಿಂದ ಆರೋಗ್ಯಕರ ಜೀವನವನ್ನು ನಡೆಸಬಹುದು. ಸಾವಯವ ಕೃಷಿಯಾದ ಸಿರಿಧಾನ್ಯವನ್ನು ಬೆಳೆಯುವಂತಹ ಪದ್ಧತಿಯನ್ನು ಕಾರ್ಯಕ್ರಮದಲ್ಲಿ ತಿಳಿಸಲಾಗುತ್ತದೆ. ಬೆಳೆದಂತಹ ಸಿರಿಧಾನ್ಯವನ್ನು ಮಾರಾಟ ಮಾಡಲು ಮಾರ್ಕೆಟ್ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದರು.

ಸಿರಿಧಾನ್ಯವನ್ನು ಹೆಚ್ಚಿನ ಖರ್ಚಿಲ್ಲದೆ ಬೆಳೆಯಬಹುದಾಗಿದೆ. ಕೃಷಿಯಲ್ಲಿ ಬೆಳೆದ ಇನ್ನಿತರೆ ಬೆಳೆಗಳಿಗೆ ಬೆಲೆಯಲ್ಲಿ ಏರುಪೇರು ಸಾಮಾನ್ಯವಾಗಿದ್ದು, ಸಿರಿಧಾನ್ಯ ಬೆಳೆಗಾರರಿಗೆ ಅದರ ಸಮಸ್ಯೆ ಇರುವುದಿಲ್ಲ. ಸಿರಿಧಾನ್ಯವನ್ನು ಉತ್ತಮ ಬೆಲೆಗೆ ಮಾರಾಟ ಮಾಡಬಹುದು ಆದ್ದರಿಂದ ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಿ ಎಂದು ತಿಳಿಸಿದರು.

ಪರಿಸರದಲ್ಲಿನ ಹಸಿರು ಮನೆ ಅನಿಲಗಳ ಹೊರಸೂಸುವಿಕೆ ಹಾಗೂ ಜಾಗತಿಕ ತಾಪಮಾನದ ಏರಿಕೆಯಿಂದಾಗಿ ಹವಾಮಾನದ ಬದಲಾವಣೆಗೆ ಕಾರಣವಾಗುತ್ತಿದೆ. ಇದರ ಸಲುವಾಗಿ ನೈಸರ್ಗಿಕ ಅಸಮತೋಲನಕ್ಕೆ ಉಂಟಾಗುತ್ತಿದ್ದು ಕೃಷಿ ಉತ್ಪಾದನೆ ಮೇಲೆ ಪರಿಣಾಮ ಬೀರುತ್ತಿದೆ, ರೈತರಿಗೆ ಇದು ಕಳವಳಕಾರಿ ವಿಷಯವಾಗಿದೆ ಎಂದರು.

ಕಾರ್ಬನ್ ಕ್ರೆಡಿಟ್ ಯೋಜನೆಯು ಪರಿಸರದಲ್ಲಿನ ಮಾಲಿನ್ಯವನ್ನು ಸರಿದೂಗಿಸಲು ಇಂಗಾಲದ ಹೊರಸೂಸುವಿಕೆಯನ್ನು ತಡೆದು, ಪರಿಸರದಲ್ಲಿ ಇಂಗಾಲದ ಡೈಯಾಕ್ಸೈಡ್ ಅನ್ನು ಹಿಡಿದಿಡುವ ಪ್ರಮುಖ ತಂತ್ರವಾಗಿದೆ. ಈ ಮೂಲಕ ನೈಸರ್ಗಿಕ ಸಮತೋಲನವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘವು ರೈತರ ಬವಣೆಗಳನ್ನು ತಗ್ಗಿಸಲು ಅನೇಕ ರೀತಿಯಲ್ಲಿ ಪ್ರಯತ್ನ ಪಡುತ್ತಿದೆ. ಜಾಗತಿಕವಾಗಿ ಪ್ರಚಲಿತವಾಗಿರುವ ಕಾರ್ಬನ್ ಕ್ರೆಡಿಟ್ ಯೋಜನೆಯನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತಂದರೆ ನಾಡಿನ ಸಮಸ್ತ ರೈತರಿಗೂ ಪ್ರಯೋಜನ ದೊರೆತಂತಾಗುತ್ತದೆ. ಕಾರ್ಬನ್ ಕ್ರೆಡಿಟ್ ಯೋಜನೆಯನ್ನು ಮಂಡ್ಯ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಇಂದು ಉದ್ಘಾಟನೆ ಮಾಡುತ್ತಿರುವುದು ಅತ್ಯಂತ ಸಂತೋಷದ ವಿಚಾರವಾಗಿದೆ. ಇಡೀ ರಾಜ್ಯದ್ಯಂತ ಈ ಯೋಜನೆಯನ್ನು ಜಾರಿಗೆ ತರಲು ನಮ್ಮ ಸರ್ಕಾರ ಬದ್ಧವಾಗಿದೆ. ನೊಂದು ಬೆಂದ ರೈತರಿಗೆ ಈ ಯೋಜನೆಯು ಸಹಾಯವಾಗುತ್ತದೆ. ಇಂತಹ ಕಾರ್ಯಕ್ರಮವನ್ನು ಏರ್ಪಡಿಸಿದಂತಹ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನ ಕೃಷಿ ಬೆಳೆಗಾರರ ಸಂಘದ ಅಧ್ಯಕ್ಷರು ಹಾಗೂ ನಿವೃತ್ತ ಐಎಎಸ್ ಅಧಿಕಾರಿಯಾದ ಅಮರ್ ನಾರಾಯಣ ಅವರಿಗೆ ಅಭಿನಂದನೆಗಳನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಂಡ್ಯ ಶಾಸಕ ಪಿ ರವಿಕುಮಾರ್, ರೈತ ಹೋರಾಟಗಾರ್ತಿ ಸುನಂದ ಜಯರಾಂ, ಜಿಲ್ಲಾಧಿಕಾರಿ ಡಾ ಕುಮಾರ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಅಶೋಕ್, ವನಕೃಷಿ ಸಂಘದ ಜಿಲ್ಲಾಧ್ಯಕ್ಷ ನಾಗರಾಜು, ರೈತ ಮುಖಂಡರಾದ ಸುನಂದಾ ಸೇರಿದಂತೆ ಇನ್ನಿತರ ರೈತರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!