Wednesday, September 18, 2024

ಪ್ರಾಯೋಗಿಕ ಆವೃತ್ತಿ

ಇಲ್ಲಿ ಯಾರಿಗಿಂತ ಯಾರೂ ದೊಡ್ಡವರಲ್ಲ….ಮೊದಲು ಕ್ಷಮೆ ಕೇಳಿ….

ರೈತರ ಕತ್ತಿನ ಪಟ್ಟಿಗೆ ಕೈ ಹಾಕಲು ಎಷ್ಟು ಧೈರ್ಯ? ಮಿಸ್ಟರ್ ಸಂತೋಷ್ ಇಲ್ಲಿ ಯಾರಿಗಿಂತ ಯಾರು ದೊಡ್ಡವರಲ್ಲ, ಮೊದಲು ರೈತರ ಕ್ಷಮಾಪಣೆ ಕೇಳಿ ಎಂದು ರೈತ ನಾಯಕ ಮಧುಚಂದನ್ ಸಿಪಿಐ ಸಂತೋಷ್ ಅವರಿಗೆ ಎಚ್ಚರಿಕೆ ನೀಡಿದರು.

ಟನ್ ಕಬ್ಬಿಗೆ 4,500 ರೂ.ಹಣ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತ ಸಂಘ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಇಂದು ಮಧ್ಯಾಹ್ನ ಗೃಹಮಂತ್ರಿ ಅರಗ ಜ್ಞಾನೇಂದ್ರರವರು ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ರೈತ ಮುಖಂಡರು ಅವರ ಕಾರನ್ನು ಅಡ್ಡ ಹಾಕಿ ರೈತರ ಬೇಡಿಕೆಗಳ ಬಗ್ಗೆ ಗಮನ ಸೆಳೆಯಲು ಮುಂದಾದರು.

ಈ ಸಂದರ್ಭದಲ್ಲಿ ಸಿಪಿಐ ಸಂತೋಷ್ ಅವರು ರೈತ ನಾಯಕ ಲಿಂಗಪ್ಪಾಜಿ ಅವರ ಕತ್ತಿನ ಪಟ್ಟಿ ಹಿಡಿದು ಪಕ್ಕಕ್ಕೆ ಬಿಸಾಕಿದರು ಎಂದು ಆಕ್ರೋಶ ವ್ಯಕ್ತಪಡಿಸಿದ ರೈತ ನಾಯಕರು ಸಂತೋಷ್ ಅವರ ವಿರುದ್ಧ ಕಿಡಿಕಾರಿ ಕ್ಷಮಾಪಣೆಗೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೈತನಾಯಕ ಮಧುಚಂದನ್ ವರು ಸಿಪಿಐ ಸಂತೋಷ್ ಅವರು ಹಲವು ಪ್ರಕರಣಗಳಲ್ಲಿ ಇದೇ ರೀತಿ ರೈತ ನಾಯಕರ ವಿರುದ್ಧ ಉದ್ಧಟತನದಿಂದ ನಡೆದುಕೊಂಡಿದ್ದಾರೆ. ಮೊದಲು ಅವರನ್ನು ಅಮಾನತು ಮಾಡಿ ಎಂದು ನಾವು ಪ್ರತಿಭಟನೆ ಮಾಡಬೇಕಿತ್ತು. ಅವರು ಕೂಡಲೇ ರೈತರ ಕ್ಷಮೆ ಕೇಳಬೇಕು ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ನೀವು ಗೃಹ ಮಂತ್ರಿ ಬರುವ ಐದು ನಿಮಿಷಗಳ ಮೊದಲು ನಮ್ಮ ಗಮನಕ್ಕೆ ತಂದಿದ್ದರೆ ನಾವು ಗೃಹ ಸಚಿವರ ಭೇಟಿ ಮಾಡಿಸುತ್ತಿದ್ದೆ. ನೀವು ಯಾವ ಅನುಮತಿ ಪಡೆಯದೆ ಹಾಗೆ ಏಕಾಏಕಿ ಮಾಡಿದ್ದರಿಂದ ನಮ್ಮ ಸಿಬ್ಬಂದಿಗಳು ಹಾಗೆ ನಡೆದುಕೊಂಡಿದ್ದಾರೆ. ನಾವು ನಿಮಗೆ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಾ ಬಂದಿದ್ದೇವೆ. ರೈತಸಂಘ ಹಾಗೂ ನಮ್ಮ ಇಲಾಖೆ ನಡುವೆ ಉತ್ತಮ ಸಂಬಂಧವಿದೆ. ಹೊಂದಾಣಿಕೆಯ ಕೊರತೆಯಿಂದ ಹೀಗಾಗಿದೆ, ಅನ್ಯಥಾ ಭಾವಿಸಬೇಡಿ ಎಂದು ಮನವಿ ಮಾಡಿಕೊಂಡರು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ರವರು ಮಾತನಾಡಿ, ನಿಮಗೆ ಸಾಕಷ್ಟು ಕೃಷಿ ಕೆಲಸಗಳಿವೆ. ನಿಮ್ಮ ಬೇಡಿಕೆಗಳ ಪ್ರಸ್ತಾವನೆಯನ್ನು ನಾನು ಸರ್ಕಾರಕ್ಕೆ ರವಾನಿಸುವ ಕೆಲಸ ಮಾಡುತ್ತೇನೆ.ನಿಮ್ಮ ಪ್ರತಿಭಟನೆಯಿಂದ ಕೃಷಿ ಕೆಲಸಗಳು ನಿಲ್ಲಬಾರದು. ದಯವಿಟ್ಟು ಪ್ರತಿಭಟನೆ ನಿಲ್ಲಿಸಿ ಎಂದು ವಿನಂತಿ ಮಾಡಿದರು.

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!