Friday, September 20, 2024

ಪ್ರಾಯೋಗಿಕ ಆವೃತ್ತಿ

ಹೇ ರಾಮ್..!!!

✍️ ದಿವಾಕರ್ ಡಿ. ಮಂಡ್ಯ

ಹೇ ರಾಮ್ ಏನು ನಿನ್ನ ಲೀಲೆ..!!
ಭಕ್ತಿಯಿಂದ ಪೂಜಿಸುವವರಿಗೆ ದೇವರಾದೆ,
ಸೀತೆಯಂತೆ ಇಷ್ಟಪಡುವವರಿಗೆ ಏಕಪತ್ನಿವೃತಸ್ಥನಾದೆ,
ನಿನ್ನ ಗುಣಗಳನು ಮೆಚ್ಚಿ ಹೊಗಳುವವರಿಗೆ ಮೃಷ್ಟನ್ನಭೋಜನವಾದೆ,
ಧರ್ಮಾಂಧತೆಯಲಿ ಬೆಂದು
ತೆಗಳುವವರಿಗೆ ಆಹಾರವಾದೆ..!!

ಹೇ ರಾಮ್
ನಾನೆಂದು ಮೆರೆವ ಬಿಸಿರಕ್ತದ
ಯುವಜನತೆಗೆ ಕಿಚ್ಚಾದೆ,
ಧರ್ಮಾಂಧತೆಯ ಮೋಹದಲಿ
ಬೆಯುತ್ತಿರುವವರಿಗೆ ದುರುಳನಾದೆ,
ಕೋಮುವಾದದ ಕಿರುಕುಳದ
ಕೀಚಕರಿಗೆ ಗುರುವಾದೆ,
ನಿನ್ನ ಹೆಸರಿನಲಿ ದೇಶ ಲೂಟಿ
ಹೊಡೆದು ಮೋಸದಿ
ಮೆರೆಯುವವರಿಗೆ ಶಕ್ತಿಯಾದೆ..!!

ಹೇ ರಾಮ್
ಗುಡಿಸಲಿನಲಿ ಭಕ್ತಿಯಿಂದ
ಪೂಜಿಸುವವರಿಗೆ ಕಲ್ಲಿನದೇವರಾದೆ,
ವೈಭೋಗದ ಸಿರಿವಂತರಿಗೆ ಮೆಚ್ಚುಗೆಯ
ಆಯೋದ್ಯಾ ಪುರುಷನಾದೆ,
ನೀ ಮೆರೆದ ಸಾಮ್ರಾಜ್ಯದ ಗುಡಿಯ
ಭರತ ಭೂಮಿಗೆ ಗಡಿಯಾದೆ,
ನಿನ್ನ ಹೆಸರಿನಲಿ ಮೆರೆದು ಕುಣಿದು
ಕುಪ್ಪಳಿಸುವವರಿಗೆ ಸ್ಪೂರ್ತಿಯಾದೆ.!!

ಹೇ ರಾಮ್
ನಾನು ನಾನೆಂದು ಮೆರೆಯುವವರ
ನಡುವೆ ನಾವೆಂಬ ಒಗ್ಗಟ್ಟು ನೀ ತಾರಲಿಲ್ಲ,
ಮೇಲು ಕೀಳೆಂದು ಜರಿದವರಿಗೆ
ನಾವೆಲ್ಲರೂ ಒಂದೇ ಎಂಬ
ಮನೋಭಾವ ನೀ ಬೆಳಸಲಿಲ್ಲ,
ಸರ್ವಜನ ಸುಖಿನೋಭವಂತು
ನಾಮವ ಜಪಿಸಿದವರ ನಡುವೆ
ಸಂಹಾರ ಮಾಡಿಸುವ ರಕ್ಕಸನು ನೀನಾದೆ,
ನಿನ್ನದೇ ನಾಮವ ಹೇಳುತಾ ರಾಜಕೀಯ ಚದುರಂಗದ ಚೋರರಿಗೆ ಬಳಸುವ ದಾಳವು ನೀನಾದೆ..!!

ಹೇ ರಾಮ್
ಮೌಡ್ಯತೆಯ ಹೆಸರಿನಲಿ ಮೆರವ
ಅಂಧಭಕ್ತಿಯನು ಕಳಚಿಬಿಡು,
ತೋರಿಕೆಯ ಸುಪ್ಪತ್ತಿಗೆಗೆ
ಒಲಿಯುವವನೆಂಬ ಆಪಾಧನೆಯು ಅಳಿಸಿಬಿಡು,
ವಿಶ್ವದ ಮನುಜರೆಲ್ಲರ ನಡುವೆ
ವಿಶ್ವಮಾನವತೆಯ ಸಾರಿಬಿಡು,
ಸಿಟ್ಟು ದ್ವೇಷ ಅಹಂಕಾರವ ಅಳಿಸಿ
ಪ್ರೀತಿ ಸಹೋದರತೆಯ ಬೆಸೆದುಬಿಡು..!!

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!