Thursday, September 19, 2024

ಪ್ರಾಯೋಗಿಕ ಆವೃತ್ತಿ

ಜೇನು ಮಾರಲು ಕುಳಿತ ಹುಡುಗಿಗೆ ಸಾವಿರ ವರ್ಷಗಳ ಹಸಿವು

✍️ಗಾಳೀಕೆನಿ
ಚಿದಂಬರ ನರೇಂದ್ರ


ಬೋಳು ಮರದ ಕೆಳಗಿನ
ಗೂಡಿನಂಗಡಿಯಲ್ಲಿ
ಆಗತಾನೆ ಕಾಡಿನಿಂದ ಇಳಿಸಿ ತಂದಿದ್ದ
ಜೇನು ಮಾರಲು ಕುಳಿತ ಹುಡುಗಿಗೆ
ಸಾವಿರ ವರ್ಷಗಳ ಹಸಿವು.

ತಾಜಾ ಜೇನಿನ ನಶೆಗೆ
ಹುಡುಗಿ ಎಷ್ಟು ಮತ್ತಳಾಗಿದ್ದಳೆಂದರೆ
ಚೌಕಾಶಿಗಿಳಿದವರ ಮಾತು ಕತ್ತರಿಸಿದಳು,
ಕೆಕ್ಕರಿಸಿದವರ ಸೊಕ್ಕು ನುಂಗಿದಳು,
ಗದ್ದಲದಿಂದ ದೂರ ನಿಂತು
ಬೆರಗುಗಣ್ಣಿನಿಂದ ವ್ಯಾಪಾರ ನೋಡುತ್ತಿದ್ದ
ಇಬ್ಬರು ಪರದೇಶಿ ಹುಡುಗರ ಬಾಯಿಗೆ
ಜೇನಿನ ಬೆಟ್ಟು ನೆಕ್ಕಿಸಿ ರುಚಿ ಮಾಡಿದಳು.

ಸೂರ್ಯ ನೆತ್ತಿಗೇರುವ ಹೊತ್ತಿಗೆ
ಹುತ್ತದಿಂದ ಹೊರಬಂದ ಕೆಂಪಿರುವೆಗಳ
ಶಿಸ್ತಿನ ಸಾಲಿನ ಮುಂದೆ ಎರಡು ಹನಿ ಚಿಮುಕಿಸಿ
ಹುರುಪು ಹೊತ್ತಿಸಿದಳು,
ಸಂಜೆ ಹೊಲದಿಂದ ವಾಪಸ್ಸು ಹೊರಟ
ಅಜ್ಜ,ಮೊಮ್ಮಗಳ ದಾರಿಗೆ ಒಂದು ಶೀಷೆ ಕಟ್ಟಿಕೊಟ್ಟಳು.

ಉಂಡವರು, ಹರಸಿದವರು ಬೇಕಾದಷ್ಟು
ಇಲ್ಲ ಕೊಂಡವರೊಬ್ಬರೂ.

ರಾತ್ರಿ ಹಸಿವಿಗೆ ಉಳಿದ ಜೇನು ಗುಟಕರಿಸಿ
ಜೇನಾದಳು
ಕನಸಲ್ಲಿ ಸುತ್ತ ಠಳಾಯಿಸಿದವರ ಕುಕ್ಕಿ
ದೈವವಾದಳು..
ಗಾಯಗೊಂಡವರು ವಿಷವಾದರು
ಪರಿಮಳವಾದರು.

ಹೊಸ ಮುಂಜಾನೆ ಮತ್ತೆ ಹೆಣ್ಣಾದಳು
ಜೇನಿನಂಗಡಿ ಹಾದಿ, ಜಗದ ಕಣ್ಣಾಯಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!