ಮಂಡ್ಯ ತಾಲ್ಲೂಕಿನ ಬೂದನೂರು ಉತ್ಸವ 2026 ರ ಅಂಗವಾಗಿ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲು ಫೆ.20ರಿಂದ ಫೆ.22 ಸಾರ್ವಜನಿಕರಿಗೆ ತಾಲ್ಲೂಕಿನ ಚಿಕ್ಕಮಂಡ್ಯ ಗ್ರಾಮದ ಸಮೀಪವಿರುವ ಚಿಂದಗಿರಿದೊಡ್ಡಿ ಗ್ರಾಮದಲ್ಲಿ ಗುರುತಿಸಲಾಗಿರುವ ಸ್ಥಳದಲ್ಲಿ ಹೆಲಿಕಾಪ್ಟರ್ ಜಾಯ್ ರೈಡ್ಸ್ ಚಟುವಟಿಕೆ ಆಯೋಜಿಸಲಾಗಿದೆ.
ಈ ಮೂರು ದಿನಗಳಲ್ಲಿ ಪ್ರತಿ ದಿನ ಬೆಳಿಗ್ಗೆ 10 ರಿಂದ ಸಂಜೆ:5.30 ರವರೆಗೆ ತಲಾ ಒಬ್ಬರು 3,800/ ಹೆಲಿಕಾಪ್ಟರ್ ನಲ್ಲಿ 7 ನಿಮಿಷಗಳ ಪ್ರಯಾಣ ಮಾಡಬಹುದು.
ನೋಂದಾಯಿಸಿಕೊಳ್ಳುವುದು ಹೇಗೆ ?
ಹೆಲಿಕಾಪ್ಟರ್ ಜಾಯ್ ರೈಡ್ ಗಾಗಿ ಆನ್ ಲೈನ್ ಹಾಗೂ ಆಫ್ ಲೈನ್ 2 ವಿಧಾನಗಳಲ್ಲಿಯೂ ಟಿಕೆಟ್ ಬುಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
https://highkraftaviation.com/ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಮುಂಗಡ ಟಿಕೆಟ್ ಬುಕಿಂಗ್ (Pre-Booking) ಮಾಡಬಹುದಾಗಿದೆ. ಹೆಚ್ಚಿನ ವಿವರಗಳಿಗೆ ರೆಹಮಾನ್, ದೂರವಾಣಿ ಸಂಖ್ಯೆ 9008516539 ಸಂಪರ್ಕಿಸಬಹುದು.
ಆಫ್ ಲೈನ್ ಬುಕಿಂಗ್ ವಿವರ
ಹೆಲಿಕಾಪ್ಟರ್ ಜಾಯ್ ರೈಡ್ ನಡೆಯುವ ಸ್ಥಳದಲ್ಲಿ ಸ್ಥಾಪಿಸಲಾಗುವ ಟಿಕೆಟ್ ಕೌಂಟರ್ ನಲ್ಲಿ ಅಗತ್ಯ ದಾಖಲೆ ಮತ್ತು ಶುಲ್ಕವನ್ನು ಪಾವತಿಸಿ ಬುಕಿಂಗ್ ಮಾಡಬಹುದು.
ಸ್ಥಳ ಪರಿಶೀಲನೆ
ಬೂದನೂರು ಉತ್ಸವದ ಪ್ರಯುಕ್ತ ಚಿಕ್ಕಮಂಡ್ಯದಲ್ಲಿ ಹೆಲಿ ಟೂರಿಸಂ ಆರಂಭಿಸುವ ಸಂಬಂಧ ಶಾಸಕ ರವಿಕುಮಾರ್ ಹಾಗೂ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಸ್ಥಳ ಪರಿಶೀಲನೆ ನಡೆಸಿದರು.
ಪರಿಶೀಲನೆ ಸಂದರ್ಭದಲ್ಲಿ ಹೆಲಿಪ್ಯಾಡ್ ವ್ಯವಸ್ಥೆಗೆ ಅಗತ್ಯವಿರುವ ಸ್ಥಳದ ಲಭ್ಯತೆ ಹಾಗೂ ಸೂಕ್ತತೆ, ಸುರಕ್ಷತಾ ಮಾನದಂಡಗಳ ಪಾಲನೆ, ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು, ವಾಹನ ನಿಲುಗಡೆ ವ್ಯವಸ್ಥೆ, ಸಂಚಾರ ನಿರ್ವಹಣೆ, ತುರ್ತು ವೈದ್ಯಕೀಯ ಸೇವೆಗಳ ಸಿದ್ಧತೆ ಹಾಗೂ ಅಗ್ನಿಶಾಮಕ ವ್ಯವಸ್ಥೆಗಳ ಸೌಲಭ್ಯತೆ ಕುರಿತು ಸಮಗ್ರವಾಗಿ ಪರಿಶೀಲನೆ ನಡೆಸಲಾಯಿತು.
ಸರ್ಕಾರದ ಮಾರ್ಗಸೂಚಿ ಹಾಗೂ ಸಂಬಂಧಿತ ಇಲಾಖೆಗಳ ನಿಯಮಾನುಸಾರ ಅಗತ್ಯ ಅನುಮತಿಗಳನ್ನು ಪಡೆದು ಮುಂದಿನ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.




