ಮೂಲ- ಮೌಮಿತಾ ಆಲಂ
ಅನು: ಶಿವಸುಂದರ್
ಹೆಣ್ಣೆಂದರೆ ಎಲ್ಲರಂತೆ ಮನುಷ್ಯಳು.
ದಾಸಿಯೂ ಅಲ್ಲ. ದೇವತೆಯೂ ಅಲ್ಲ.
ಎಷ್ಟೇ ಅನ್ಯಾಯಕ್ಕೆ ಗುರಿಯಾದರೂ ಪ್ರೀತಿ ತ್ಯಾಗವನ್ನು ಮೊಗೆಮೊಗೆದು ಕೊಡುವ ATM ಅಲ್ಲ.
ಸಮಾನ ಹಕ್ಕು ಬಾಧ್ಯತೆಗಳುಳ್ಳ ನಾಗರಿಕಳು . ..
ಆದರೆ ಕುಟುಂಬ, ಸಮಾಜ ಮತ್ತು ಪ್ರಭುತ್ವ ಅದನ್ನು ನಿರಾಕರಿಸುವುದರಿಂದ ..
ಹೆಣ್ಣೆಂದರೆ ಪ್ರತಿರೋಧ ಕೂಡ …
ದ್ವೇಷದ ನಂಜಿನಿಂದ ಜಗವನ್ನು ಮುಕ್ತಮಾಡುವ ಪ್ರತಿರೋಧ ..
ತಾರತಮ್ಯ, ಅಸಮಾನತೆಯ ವಿರುದ್ಧ ಪ್ರತಿರೋಧ..
ಮಾರ್ಚ್ 8ರ ಅಂತರರಾಷ್ಟ್ರೀಯ ದಿನದಂದು , ಈ ಹಿಂದೆ ಅನುವಾದ ಮಾಡಿದ್ದ ಬಂಗಾಳದ ಶಕ್ತಿಶಾಲಿ ಯುವ ಕವಯತ್ರಿ..
(ಮೌಮಿತಾ ಆಲಂ ಅವರ ನಾನೊಂದು ಪ್ರತಿರೋಧ ” ಕವನವನ್ನು ಮತ್ತೊಮ್ಮೆ ಹಂಚಿಕೊಳ್ಳಬೇಕೆನಿಸಿತು)
ನಾನೊಂದು ಪ್ರತಿರೋಧ
ನಾನು ಓದುವೆ
ನಾನು ಬರೆವೆ..
ನಾನೇನು ಉಡಬೇಕೆಂದು
ನಾನೇ ತೀರ್ಮಾನಿಸುವೆ..
ನಿಮ್ಮ ಕಪಿಚೇಷ್ಟೆಗಳು
ಕಿರುಚಾಟಗಳು
ಬೆದರುಬೊಂಬೆಗಳ
ಬೆರಸಾಟಗಳು..
ಅಲುಗಾಡಿಸಲಾಗದ
ಆಲದಮರ ನಾನು.
ಶಾಲೆಯ ಗಂಟೆ ಬಾರಿಸುತಿದೆ
ಕೇಳಿಸಿತೇನು?
ನೀವು ದ್ವೇಷವನ್ನು ಉಗುಳುತ್ತೀರ..
ನಾನು ಶಕ್ತಿಯನ್ನು ಬಿತ್ತುತ್ತೇನೆ..
ನೀವು ಗೇಟುಗಳನ್ನು ಮುಚ್ಚುವಿರಿ..
ನನ್ನ ಹಕ್ಕುಗಳನ್ನು ಕಸಿಯುವಿರಿ…
ಗೆಳೆಯರೇ ನಿಮಗೊಂದು ಗೊತ್ತಿಲ್ಲ…
ಬೆಳಕು ನಾನು
ಗಾಯಗೊಂಡರೂ ಉರಿಉರಿದು ಬೆಳಗುವೆನು
ನಾನು ಸತ್ತ ನಂತರ
ಬೂದಿಯಿಂದೇಳುವ ಫೀನಿಕ್ಸ್ ಅಲ್ಲ
ಸತ್ತನಂತರ ಯಾರೂ ಮೇಲೆಳುವುದಿಲ್ಲ
ಚರಿತ್ರೆ ನಾನು
ಭವಿಷ್ಯ ನಾನು
ವರ್ತಮಾನ ನಾನು
ನಿತ್ಯ ನಿರಂತರ ನಾನು
ನೀವೆಂದೂ ಗೆಲ್ಲಲಾಗದ
ಯುದ್ಧ ನಾನು..
ನನ್ನ ಹೆಸರ ಬರೆದಿಟ್ಟುಕೊಳ್ಳಿ..
ನಾನು ಪ್ರೀತಿ
ನಾನು ಹಿಜಾಬಿನ ಹುಡುಗಿ..
ಜನಪದರಲ್ಲಿ ನನ್ನ ಹೆಸರು
“ಪ್ರತಿರೋಧ”