ಯುವ ಜನತೆಗೆ ಸಮ ಸಮಾಜದ ನಿರ್ಮಾಣ ಮಾಡುವತ್ತ ಅವರ ಮತಿಯನ್ನು ಕೇಂದ್ರೀಕರಿಸಿ ಅವರ ನಡವಳಿಕೆಗಳನ್ನು ರೂಪಿಸಿಕೊಳ್ಳಬೇಕು ಮತ್ತು ಜವಾಬ್ದಾರಿಗಳನ್ನು ಅರ್ಥ ಮಾಡಿಕೊಂಡು ಮಹಿಳಾ ಸಂವೇದನೆಗಳನ್ನು ಬೆಳೆಸಿಕೊಳ್ಳಬೇಕೆಂದು ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ.ಪುಷ್ಪಾ ಎಂ ತಿಳಿಸಿದರು.
ಮಂಡ್ಯನಗರದ ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ ಮಾಡಿದ ಅವರು, ಮಹಿಳಾ ಸಾಮರ್ಥ್ಯ ಗುರುತಿಸುವಿಕೆ ಮತ್ತು ಹೂಡಿಕೆ ಮಾಡುವಿಕೆ’ ಎಂಬ ವಿಷಯದ ಮೇಲೆ ವಿಧ್ವತ್ಪೂರ್ಣವಾದ ಉಪನ್ಯಾಸ ನೀಡಿದರು.
ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ಮಾನವ ಸಂಪನ್ಮೂಲದ ಬಹುತೇಕ ಅರ್ಧ ಭಾಗವನ್ನು ಪ್ರತಿನಿಧಿಸುವ ಮಹಿಳೆಯರಿಗೆ ಯಾವ ರೀತಿಯ ಸವಲತ್ತುಗಳನ್ನು ಕೊಡಲಾಗುತ್ತಿದೆ ಎಂಬುದನ್ನು ಅಂಕಿ ಅಂಶಗಳ ಸಹಿತ ಮನ ಮುಟ್ಟುವಂತೆ ವಿವರಿಸುತ್ತಾ ಉತ್ತಮ ಶಿಕ್ಷಣ ಕೊಡುವುದರ ಮೂಲಕ ಮಾತ್ರ ಇದು ಸಾಧ್ಯ ಎಂಬುದನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ ಸುವರ್ಣ ವಿ ಡಿ ಮಾತನಾಡಿ, ಮಹಿಳೆ ತನ್ನ ನಂಬಿಕೆಗಳಿಂದ ಮುಂದಡಿ ಇಡಲು ಹೇಗೆ ಸಾಧ್ಯವೋ ಹಾಗೆಯೇ ಹಿಂದಡಿ ಇಡುವುದು ಕೂಡ ಸಾಧ್ಯ’ ಸಾಧಕಿ ಓಮ್ರ ವಿನ್ ಪ್ರೈ ಅವರ ಹೇಳಿಕೆಯನ್ನು ಉಚ್ಛರಿಸುತ್ತ ಮಹಿಳೆಯರು ಇಂದು ಏನಾಗಿದ್ದರೋ ಅದಕ್ಕೆ ಕಾರಣ ಸಮಾಜಕ್ಕೆ ಎದುರಾಗಿ ನಿಂತಿರುವುದರಿಂದ ಮತ್ತು ತನ್ನನ್ನು ತಾನು ರೂಪಿಸಿಕೊಳ್ಳಲು ಪೂರಕವಾಗಿ ಪ್ರಯತ್ನ ಮಾಡುತ್ತಿರುವುದಾಗಿದೆ ಎಂದರು.
ಅಂಗನವಾಡಿ ಮಕ್ಕಳಿಗೆ ಮೂರು ಬಾವಿ ತೋಡಿದ ಶಿರಸಿಯ ಗೌರಿ ಯಾವ ಸಾಧಿಕಿಗಿಂತ ಕಡಿಮೆ ಇಲ್ಲ. ತನ್ನಿಚ್ಛೆಯಂತೆ ಮನೆ ಬಿಟ್ಟು ಹೋಗಿ ಪತ್ರಿಕೋದ್ಯಮ ಅಧ್ಯಯನ ಮಾಡಿದ ಓಡಿಸ್ಸಾದ ಜಯಂತಿ ಇಂದು ಅಲ್ಲಿನ ಸಮುದಾಯದ ಹೆಣ್ಣು ಮಕ್ಕಳ ಕಣ್ಮಣಿಯಾಗಿರುವುದು ಇತಿಹಾಸ. ‘ಸ್ತ್ರೀ ಮತವನುತ್ತರಿಸಲಾಗದೆ ಧರ್ಮ ಶಾಸ್ತ್ರದೊಳು?’ ಎಂದು ತುಂಬಿದ ಸಭೆಯಲ್ಲಿ ದ್ರೌಪದಿ ಕೇಳುವ ಪ್ರಶ್ನೆ ಬೆಳಗಾವಿಯ ವಂಟೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿದ ದೌರ್ಜನ್ಯ ಕ್ಕೆ ಹಿಡಿದ ಕನ್ನಡಿ. ಇದು ಮತ್ತೆ ಮತ್ತೆ ನಡೆಯುತ್ತಿರುವುದು ನಾಗರೀಕ ಸಮಾಜದ ವಿಕೃತ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸಹಾಯಕ ಪ್ರಾಧ್ಯಾಪಕರಾದ ವಿಕ್ಟೋರಿಯಾ ರೋಚ್ ಮಾತನಾಡಿ, ಮಹಿಳಾ ದೌರ್ಜನ್ಯ ತಡೆ ಕೋಶದ ಸಂಚಾಕರು ಕಾರ್ಯಕ್ರಮದ ಆಶಯವನ್ನು ಬಹಳ ಸಮರ್ಪಕವಾಗಿ ವಿವರಿಸಿದರು. ನಮ್ಮ ದೇಶದಲ್ಲಿ ಮಹಿಳೆಯರು ಎಂದು ಸ್ವತಂತ್ರವಾಗಿ ಅವರ ವಿವೇಚನೆಯಿಂದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ ಆಗುತ್ತದೋ ಅಂದೇ ಸಮ ಸಮಾಜದ ನಿರ್ಮಾಣ ಆಗುತ್ತದೆ ಎಂದು ಧೃಡವಾಗಿ ಹೇಳುತ್ತಾ ಎಲ್ಲರನ್ನೂ ಆದರಪೂರ್ವಕವಾಗಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಬೋಧಕ ಮತ್ತು ಬೋಧಕೇತರ ವರ್ಗದವರು ಹಾಜರಿದ್ದರು.




