Friday, September 20, 2024

ಪ್ರಾಯೋಗಿಕ ಆವೃತ್ತಿ

ನಿಷ್ಕ್ರಿಯ ಹಣ ಮತ್ತು ಅನಾಥ ಹೆಣ…..

✍️ ವಿವೇಕಾನಂದ ಎಚ್.ಕೆ

₹62,224 ಕೋಟಿ ಹಣ ವಾರಸುದಾರರಿಲ್ಲದ ಮತ್ತು ಕಳೆದ ಹತ್ತು ವರ್ಷಗಳಲ್ಲಿ ನಿಷ್ಕ್ರಿಯವಾದ ಖಾತೆಗಳಲ್ಲಿ ಉಳಿದಿರುವ ಹಣ………

ಒಂದು ಕಡೆ ಇಡೀ ಸಮಾಜ ಹಣದ ಹಿಂದೆ ಬಿದ್ದು ಸಕ್ರಿಯವಾಗಿರುವಾಗ ಇನ್ನೊಂದು ಕಡೆ ಇಷ್ಟೊಂದು ದೊಡ್ಡ ಮೊತ್ತದ ಹಣ ನಿಷ್ಕ್ರಿಯ ಖಾತೆಗಳಲ್ಲಿ. ಎಂತಹ ವಿಪರ್ಯಾಸ……

ಮನುಷ್ಯರ ನಡುವಿನ ನಂಬಿಕೆಗಳು ಮತ್ತು ಸಂಬಂಧಗಳು ಶಿಥಿಲವಾಗುತ್ತಿರುವ ವ್ಯವಸ್ಥೆಗೆ ಬಹುದೊಡ್ಡ ಸಾಕ್ಷಿಯನ್ನು ಒದಗಿಸಿದೆ ಈ ವಾರಸುದಾರರಿಲ್ಲದ ಹಣ……

ಭಾರತೀಯ ಸಮಾಜದ ತಳಪಾಯವೇ ಮನುಷ್ಯ ಸಂಬಂಧಗಳ ಸಾಂಸ್ಕೃತಿಕ ವ್ಯಕ್ತಿತ್ವ. ಎಂತಹ ಅನಾಥರಿಗೂ ಒಂದಲ್ಲ ಒಂದು ದೂರದ ಸಂಬಂಧ ಇದ್ದೇ ಇರುತ್ತದೆ. ಕನಿಷ್ಠ ಅವರ ಊರಿನ ಪರಿಚಯದವರಾದರು ಇದ್ದೇ ಇರುತ್ತಾರೆ. ಬದುಕಿನ ಕೊನೆಗಾಲದಲ್ಲಿ ಯಾರೋ ಒಬ್ಬರು ರಕ್ಷಕರು ನಮಗೆ ಸಿಕ್ಕೇ ಸಿಗುವ ಸಂಸ್ಕೃತಿ ಸಂಪ್ರದಾಯ ನಮ್ಮದಾಗಿತ್ತು. ಆದರೆ ಈ ಹಣ ಕೇಂದ್ರೀಕೃತ ಸಮಾಜ ನಿರ್ಮಾಣವಾದ ನಂತರ ದೊಡ್ಡ ದೊಡ್ಡ ಶ್ರೀಮಂತರು ಸಹ ಬೀದಿಯ ಅನಾಥ ಹೆಣವಾಗುವ ಅಥವಾ ಸತ್ತು ವಾಸನೆ ಬಂದ ನಂತರ ಹೆಣದ ಬಗ್ಗೆ ಮಾಹಿತಿ ಸಿಗುವ ಘಟನೆಗಳು ಹೆಚ್ಚಾಗುತ್ತಿವೆ……

ಹಣ ಮಾಡುವ ಭರದಲ್ಲಿ ಸಂಬಂಧಗಳನ್ನು ಮರೆಯುತ್ತಾರೆ. ಯಾರನ್ನೂ ನಂಬುವುದಿಲ್ಲ, ಬಹುತೇಕ ಜನ ನಂಬಿಕೆಗೆ ಅರ್ಹರು ಅಲ್ಲ, ರಕ್ತ ಸಂಬಂಧಿಗಳೊಂದಿಗೆ ಏನೋ ವಿವಾದ, ಹಣ ಇರುವ ಕಾರಣದಿಂದ ಸ್ವತಂತ್ರ ಬದುಕಿನ ಹಠಮಾರಿತನ, ಕೊನೆಗೆ ದಿಢೀರ್ ಸಾವು, ಬಡವರಾದರೆ ಸಾವಿನೊಂದಿಗೆ ಕೊನೆ, ಶ್ರೀಮಂತರಾಗಿದ್ದರೆ ಪಾಪಿಯ ಹಣ ಪರರ ಪಾಲು. ಇದು ಭಾರತೀಯ ಸಮಾಜ ಮುನ್ನಡೆಯುತ್ತಿರುವ ವಿಧಾನ……..

ಹಾಗೆಂದು ತುಂಬಾ ಆತಂಕ ಪಡುವ ಅವಶ್ಯಕತೆ ಇಲ್ಲ. ಈಗಲೂ ಬಹುತೇಕ ಕುಟುಂಬಗಳ ಸಂಬಂಧದ ಕೊಂಡಿ ಇನ್ನೂ ಗಟ್ಟಿಯಾಗಿ ಬೆಸೆದುಕೊಂಡಿದೆ. ನಮ್ಮವರು ಅನ್ನುವ ಮಮಕಾರ ಉಳಿದುಕೊಂಡಿದೆ. ಆದರೆ ಅದು ಇನ್ನೂ ಹೆಚ್ಚು ಶಿಥಿಲವಾಗುವ ಮುನ್ನ ಎಚ್ಚರಿಕೆ ವಹಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಮತ್ತು ಈಗಿನ ಆದ್ಯತೆಯಾಗಬೇಕು…..

ಈ ಸುಧಾರಣೆ ವೈಯಕ್ತಿಕ ಮಟ್ಟದಲ್ಲಿ ಮತ್ತು ಸಾಮೂಹಿಕ ಸಂಸ್ಕೃತಿಯಾಗಿ ಬೆಳೆಯಬೇಕು. ಒಂದು ಹಂತದ ನಂತರ ರಕ್ತ ಸಂಬಂಧಿಗಳು, ಇತರ ಸಂಬಂಧಿಸಿದವರು, ಪರಿಚಿತರು ಅಥವಾ ವಾರಸುದಾರರಿಲ್ಲದ ಅಪರಿಚಿತ ಸ್ಥಳದಲ್ಲಿ ವಾಸಿಸಬೇಕಾದ ಸಂದರ್ಭದಲ್ಲಿ ನಾವುಗಳು ಈ ಬಗ್ಗೆ ಜಾಗೃತರಾಗಬೇಕು. ವಾಸ್ತವ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಸಾಧ್ಯವಾದಷ್ಟು ಮಟ್ಟಿಗೆ ಸುರಕ್ಷತೆಯ ತೀರ್ಮಾನ ಕೈಗೊಳ್ಳಬೇಕು. ಹಣವನ್ನು ಮೀರಿದ ಯೋಚನೆ ಮಾಡಬೇಕು…..

ಹೌದು, ಈಗಿನ ಪರಿಸ್ಥಿತಿಯಲ್ಲಿ ಯಾರನ್ನಾದರೂ ನಂಬುವುದು ಕಷ್ಟ. ಈ ಸಮಾಜದಲ್ಲಿ ವಯಸ್ಸಾದ ಅಸಹಾಯಕರನ್ನು ದುರುಪಯೋಗ ಪಡಿಸಿಕೊಳ್ಳುವವರೇ ಹೆಚ್ಚು. ಹಣದ ಮಹತ್ವ ಒಳ್ಳೆಯತನವನ್ನು ನಾಶಪಡಿಸಿದೆ. ಹಾಗೆಯೇ ಹಿರಿಯರು ಸಹ ಹಣದ ಮೋಹವನ್ನು ಕಡಿಮೆ ಮಾಡಿಕೊಂಡು ತ್ಯಾಗದ ಮನೋಭಾವ ಹೆಚ್ಚು ಮಾಡಿಕೊಳ್ಳಬೇಕು…..

ಕಾರಣವೇನೋ ತಿಳಿಯಲಿಲ್ಲ. ಆದರೆ ಭಾರತದ ಒಂದು ಕಾಲದ ಆಗರ್ಭ ಶ್ರೀಮಂತ ಸಹರಾ ಸಂಸ್ಥೆಯ ಸ್ಥಾಪಕ ಸುಬ್ರತೋ ರಾಯ್ ಅಂತ್ಯ ಸಂಸ್ಕಾರಕ್ಕೆ ಆತನ ಮಕ್ಕಳೇ ಬರಲಿಲ್ಲ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. ಅದೇ ರೀತಿಯ ಸಾಕಷ್ಟು ಸುದ್ದಿಗಳು ನಮ್ಮ ಸುತ್ತ ನಡೆಯುತ್ತಲೇ ಇದೆ. ಆಸ್ತಿಗಾಗಿ ತಂದೆ ತಾಯಿಯನ್ನೇ ಕೊಲ್ಲುವ ಘಟನೆಗಳು ಸಹಜವಾಗುತ್ತಿವೆ. ಇದೀಗ ವಾರಸುದಾರರಿಲ್ಲದ ಕೋಟ್ಯಾಂತರ ಹಣ ಕೊಳೆಯುತ್ತಿರುವ ಸುದ್ದಿ…….

ಎಚ್ಚರಿಕೆ ವಹಿಸಲು ಇದು ಉತ್ತಮ ಸಂದರ್ಭ.‌ ಇದಕ್ಕೆ ಯಾವುದೇ ಸಿದ್ದ ಸೂತ್ರವಿಲ್ಲ. ದಿಢೀರನೆ ಕೈಗೊಳ್ಳುವ ಯಾವ ಕ್ರಮಗಳು ಇಲ್ಲ. ಇಡೀ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಪುನರ್ ಸ್ಥಾಪಿಸುವ ಕೆಲಸ ತಕ್ಷಣದಿಂದಲೇ ಪ್ರಾರಂಭಿಸಬೇಕು. ಮಕ್ಕಳು – ಯುವಕರಿಗೆ ಮನುಷ್ಯ ಸಂಬಂಧಗಳ ಬಗ್ಗೆ ಗಾಢವಾಗಿ ಅರ್ಥಮಾಡಿಸಬೇಕು. ಹಿರಿಯರಿಗೆ ಸಹ ಬದಲಾದ ಸಾಮಾಜಿಕ ವ್ಯವಸ್ಥೆಯಲ್ಲಿ ಯುವಕರನ್ನು ಪ್ರೀತಿಸುವ ಮತ್ತು ಅವರ ಬದಲಾವಣೆಗಳನ್ನು ಒಪ್ಪಿಕೊಳ್ಳುವ ಮನಸ್ಥಿತಿಯನ್ನು ತಿಳಿಸಿಕೊಡಬೇಕು. ಆಗ ಪರಿಸ್ಥಿತಿ ಸ್ವಲ್ಪ ಸುಧಾರಿಸಬಹುದು. ಇಲ್ಲದಿದ್ದರೆ ಇದು ಒಂದು ಸಾಮಾಜಿಕ ಪಿಡುಗಾಗಬಹುದು ಎಚ್ಚರ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!