Tuesday, September 17, 2024

ಪ್ರಾಯೋಗಿಕ ಆವೃತ್ತಿ

ನಾಗಮಂಗಲ| ಅಕ್ರಮ ಗಣಿಗಾರಿಕೆ ಸ್ಥಗಿತಕ್ಕೆ ಆಗ್ರಹಿಸಿ ಪಾದಯಾತ್ರೆ

ನಾಗಮಂಗಲ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ಹಾಗೂ ಕಲ್ಲುಗಣಿ ಗುತ್ತಿಗೆಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಒತ್ತಾಯಿಸಿ ಮೇ 31ರಂದು ನಾಗಮಂಗಲದಿಂದ ಬೆಂಗಳೂರಿನ ವಿಧಾನಸೌಧದಲ್ಲಿರುವ ಮುಖ್ಯಮಂತ್ರಿಗಳ ಕಚೇರಿಯವರೆಗೆ ಪಾದಯಾತ್ರೆ ನಡೆಸುವುದಾಗಿ ಅಖಿಲ ಕರ್ನಾಟಕ ಭೋವಿ ಯುವ ವೇದಿಕೆಯ ಮುಖಂಡ ಗೋವಿಂದರಾಜು ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗಮಂಗಲದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದ್ದು ಇದನ್ನು ಸ್ಥಗಿತಗೊಳಿಸುವಂತೆ ಮುಖ್ಯಮಂತ್ರಿಗಳ ಜನತಾದರ್ಶನ ಕಾರ್ಯಕ್ರಮದಲ್ಲಿ ದೂರು ನೀಡಲಾಗಿತ್ತು. ಆದರೆ ಈ ಸಂಬಂಧವಾಗಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಗಣಿಗಾರಿಕೆಯಲ್ಲಿ ನೀಡುತ್ತಿರುವ ಗುತ್ತಿಗೆ ವಿಚಾರದಲ್ಲಿ ವೆಂಕಟರಾಮು ಅವರಿಗೆ ಅನ್ಯಾಯವಾಗಿದ್ದು ಇದನ್ನು ಸರಿಪಡಿಸುವಂತೆ ಒತ್ತಾಯಿಸಿ ಸಂಬಂಧಪಟ್ಟವರಿಗೆ ಹಾಗೂ ಮುಖ್ಯಮಂತ್ರಿಗಳ ಜನತಾದರ್ಶನ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಿದ್ದು ,ಇದುವರೆಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಯಾವುದೇ ಕಾನೂನು ರೀತಿ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಮೇ.31ರಂದು ನಾಗಮಂಗಲದಿಂದ ಮಂಡ್ಯ ಮಾರ್ಗವಾಗಿ ಬೆಂಗಳೂರಿನ ವಿಧಾನ ಸೌಧದವರೆಗೆ ಪಾದಯಾತ್ರೆ ನಡೆಸುತ್ತಿರುವುದಾಗಿ ತಿಳಿಸಿದರು.

ನಾಗಮಂಗಲದ ವೆಂಕಟರಾಮು ಅವರಿಗೆ ಕಸಬಾ ಹೋಬಳಿಯ ಸಂಕನಹಳ್ಳಿ ಗ್ರಾಮದ ಸರ್ವೆ ನಂಬರ್ 54 ರಲ್ಲಿ ಟೆಂಡರ್ ಮೂಲಕ ಕಲ್ಲು ಗಣಿ ಗುತ್ತಿಗೆ ಮಾಡಲು ಜಾಗ ಮಂಜೂರಾಗಿದೆ. ತಹಶೀಲ್ದಾರರು ತಾಲೂಕು ಸರ್ವೆಯರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಜಂಟಿ ಸರ್ವೆ ನಡೆಸಿ ಸ್ಥಳವನ್ನು ಗುರುತು ಮಾಡಿದ್ದಾರೆ. ಈ ಬಗ್ಗೆ ಫೆಬ್ರವರಿ 19 20 24ರಂದು ವೆಂಕಟ ರಾಮು ಅವರಿಗೆ ಗುತ್ತಿಗೆ ಪುಸ್ತಕವನ್ನೂ ನೀಡಿದ್ದಾರೆ ಎಂದರು.

ಕಾನೂನು ಪ್ರಕಾರ ನೋಂದಣಿ ಮಾಡಿಸಲು ಹೋದ ಸಂದರ್ಭದಲ್ಲಿ ಸಂಕನಹಳ್ಳಿ ಗ್ರಾಮದ ಸರ್ವೆ ನಂಬರ್ 54 ಬ್ಲಾಕ್ ಆಗಿದ್ದು, ಇದರ ನಕಲನ್ನು ಪಡೆದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಅರ್ಜಿ ನೀಡಿ ಹಿಂಬರಹವನ್ನು ಪಡೆಯಲಾಗಿದೆ. ಆದರೆ ಈ ದೂರನ್ನು ಹಿಂಪಡೆಯುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಒತ್ತಡ ಹೇರಿ, ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಆದ ಕಾರಣ ನ್ಯಾಯ ಒದಗಿಸುವಂತೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿದ್ದು ಈ ಪಾದಯಾತ್ರೆಯಲ್ಲಿ ಅಖಿಲ ಕರ್ನಾಟಕ ಬೋವಿ ಯುವ ವೇದಿಕೆ ಹಾಗೂ ಅಖಿಲ ಕರ್ನಾಟಕ ಭೋವಿ, ಕಲ್ಲು, ಬಂಡೆ, ಮಣ್ಣು ಮತ್ತು ಕಟ್ಟಡ ಕಾರ್ಮಿಕರ ವೇದಿಕೆಯ 40ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದರು.

ಗೋಷ್ಠಿಯಲ್ಲಿ ವೇದಿಕೆಯ ದಕ್ಷಿಣ ಕರ್ನಾಟಕ ವಿಭಾಗದ ಸಂಘಟನಾ ಕಾರ್ಯದರ್ಶಿ ಪ್ರಜ್ವಲ್, ಮಂಜುನಾಥ ಸೇರಿದಂತೆ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!