ಮದ್ದೂರು ತಾಲ್ಲೂಕಿನ ಚಿಕ್ಕ ಹೊಸಗಾವಿ ಗ್ರಾಮದಲ್ಲಿ ಚರಂಡಿಗಳ ಸ್ವಚ್ಚತೆ ಮಾಡಿಸಬೇಕು ಹಾಗೂ ಗ್ರಾಮದಲ್ಲಿ ಬೆಳೆದುಕೊಂಡಿರುವ ಗಿಡಗಂಟಿಗಳನ್ನು ತಕ್ಷಣ ತೆರವುಗೊಳಿಸಬೇಕೆಂದು ಆಗ್ರಹಿಸಿ ಚಿಕ್ಕ ಹೊಸಗಾವಿ ಗ್ರಾಮಸ್ಥರು ಪ್ರತಿಭಟಿಸಿದರು.
ಗ್ರಾಮದ ಮುಖಂಡ ಅಪ್ಪಾಜಿ ಅವರು ಮಾತನಾಡಿ,ಹಲವು ಬಾರಿ ಗ್ರಾಮದ ಚರಂಡಿಗಳನ್ನು ಸ್ವಚ್ಛ ಮಾಡುವಂತೆ ಹಾಗೂ ಗಿಡಗಂಟಿಗಳನ್ನು ತೆರವು ಗೊಳಿಸಿ,ಗ್ರಾಮದ ರಸ್ತೆಗಳನ್ನು ಅಭಿವೃದ್ಧಿ ಪಡಿಸುವಂತೆ ಹಲವು ಬಾರಿ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ನಮ್ಮೂರಿಗೆ ಬಸ್ಸಿನ ಸೌಕರ್ಯವೂ ಇಲ್ಲ. ಚರಂಡಿಗಳಲ್ಲಿ ಆಳೆತ್ತರದ ಹೂಳು ತುಂಬಿಕೊಂಡು, ಗಿಡಗಂಟಿಗಳು ಬೆಳೆದು ಹಾವು ಚೇಳುಗಳ ವಾಸಸ್ಥಾನವಾಗಿದೆ. ನಿತ್ಯ ಮಹಿಳೆಯರು,ವೃದ್ಧರು ಮತ್ತು ಮಕ್ಕಳು ಆತಂಕದಲ್ಲೇ ತಿರುಗಾಡಬೇಕಾದ ಪರಿಸ್ಥಿತಿ ಇದೆ.ಚರಂಡಿಗಳನ್ನು ಸ್ವಚ್ಛ ಮಾಡದಿರುವುದರಿಂದ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಜನ ಇದ್ದಾರೆ.
ಇದಲ್ಲದೆ ರಾತ್ರಿ ವೇಳೆಯಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು ಸಾಕು ಪ್ರಾಣಿಗಳನ್ನು ಚಿರತೆಗಳು ಕೊಂದು ತಿನ್ನುತ್ತಿವೆ.ಅರಣ್ಯ ಇಲಾಖೆ ಚಿರತೆಗಳನ್ನು ಸೆರೆ ಹಿಡಿಯುವಲ್ಲಿ ಸಂಪೂರ್ಣ ವಿಫಲರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು, ಜಿಲ್ಲಾಡಳಿತ ಚಿಕ್ಕ ಹೊಸಗಾವಿ ಗ್ರಾಮದ ಅಭಿವೃದ್ಧಿ ಬಗ್ಗೆ ಗಮನ ಹರಿಸಿ ಅಭಿವೃದ್ಧಿಯನ್ನು ಮಾಡಬೇಕು.ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತದ ವಿರುದ್ಧ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ಮುಖಂಡರಾದ ಚಿಕ್ಕತಾಯಮ್ಮ, ಭೈರೇಶ, ರಮೇಶ, ಶಂಕರ, ಚಂದ್ರಮ್ಮ,ಸುಶೀಲಮ್ಮ, ಪುಟ್ಟತಾಯಮ್ಮ, ಭಾಗ್ಯಮ್ಮ, ಪುಟ್ಟಮ್ಮ, ಮಂಗಳಮ್ಮ ಸೇರಿದಂತೆ ಇತರರಿದ್ದರು.