Tuesday, September 17, 2024

ಪ್ರಾಯೋಗಿಕ ಆವೃತ್ತಿ

ನಾಗಮಂಗಲ| ಅಕ್ರಮ ಟೋಲ್ ಸಂಗ್ರಹ : ದಸಂಸ ನೇತೃತ್ವದಲ್ಲಿ ಪ್ರತಿಭಟನೆ

ನಾಗಮಂಗಲ ತಾಲ್ಲೂಕಿನ ಕದಬಹಳ್ಳಿ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 75ರ ಟೋಲ್ ನಲ್ಲಿ ಈ ಭಾಗದ ರೈತರು,ಜನಸಾಮಾನ್ಯರಿಂದ ಅಕ್ರಮವಾಗಿ ಟೋಲ್ ಹಣ ಸಂಗ್ರಹ ಮಾಡುತ್ತಿರುವುದನ್ನು ಪ್ರತಿಭಟಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ನೇತ್ರತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.

ರಾಜ್ಯ ದಲಿತ ಸಂಘರ್ಷ ಸಮಿತಿ ಮಂಡ್ಯ ಘಟಕದ ಸಂಚಾಲಕರಾದ ಹೆಚ್.ಕ್ಯಾತನಹಳ್ಳಿ ಮಂಜು ನೇತೃತ್ವದಲ್ಲಿ ಹಲವು ರೈತರು ಸಾಂಕೇತಿಕ ಪ್ರತಿಭಟನೆ ನಡೆಸಿ, ಈ ಭಾಗದ ಗ್ರಾಮೀಣ ಪ್ರದೇಶದ ಜನರಿಂದ ಟೋಲ್ ಹಣ ಸಂಗ್ರಹ ಮಾಡಬಾರದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳು ಸ್ಥಳೀಯ ಜನರಿಗೆ ಯಾವುದೇ ರೀತಿಯ ಸೌಕರ್ಯಗಳನ್ನು ಒದಗಿಸಿಲ್ಲ. ಜಮೀನು ಮತ್ತು ಮನೆಗೆ ಸಂಚರಿಸುವಾಗ ಹಣ ತೆತ್ತು ಹೋಗಬೇಕಾದ ಪರಿಸ್ಥಿತಿ ರೈತರಿಗೆ ನಿರ್ಮಾಣವಾಗಿದೆ.ರೈತರಿಂದ ಅಕ್ರಮವಾಗಿ ಟೋಲ್ ಸಂಗ್ರಹಿಸಲಾಗುತ್ತಿದೆ ಎಂದು ಕಿಡಿ ಕಾರಿದರು.

ನಾಗಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಕೇವಲ 25 ಕಿಲೋ ಮೀಟರ್ ಅಂತರದಲ್ಲಿ ನೆಲ್ಲಿಗೆರೆ ಮತ್ತು ಕದಬಹಳ್ಳಿ ಬಳಿ ಅಕ್ರಮವಾಗಿ ಎರಡು ಟೋಲ್ ಗಳು ಕಾರ್ಯನಿರ್ವಹಿಸುತ್ತಿದ್ದು,ಕಾನೂನು ಪ್ರಕಾರ ಅಕ್ರಮವಾಗಿದೆ.ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಗ್ರಾಮೀಣ ಪ್ರದೇಶದ ಜನರಿಗೆ ಸಂಪರ್ಕ ರಸ್ತೆ ಒದಗಿಸಬೇಕು. ಆದರೆ ಅದನ್ನು ಮಾಡದೆ ಸ್ಥಳೀಯರಿಂದಲೂ ಕೂಡ ಟೋಲ್ ಹಣ ಸಂಗ್ರಹ ಮಾಡುತ್ತಿದ್ದಾರೆ ಎಂದು ದೂರಿದರು.

ಈ ಭಾಗದ ಗ್ರಾಮೀಣ ಪ್ರದೇಶದ ಜನರು ತಮ್ಮ ಜಮೀನು ಮತ್ತು ಮನೆಗಳಿಗೆ ಹೋಗುವಾಗಲೂ ಪ್ರತಿ ಬಾರಿ ಟೋಲ್ ಕಟ್ಟಿ ಸಂಚರಿಸಬೇಕಾದ ದುಸ್ಥಿತಿ ಬಂದಿದೆ. ಈ ಸಂಬಂಧ ಹಲವು ವರ್ಷಗಳಿಂದ ಸುತ್ತಮುತ್ತ ಇರುವ ಗ್ರಾಮೀಣ ಪ್ರದೇಶದ ಜನರು ಹಲವಾರು ಆರೋಪಗಳನ್ನು ಮಾಡಿದ್ದರೂ ಇಲಾಖೆ ಅಧಿಕಾರಿಗಳು ಕ್ರಮ ತೆಗೆದುಕೊಂಡಿಲ್ಲ. ಸ್ಥಳೀಯ ರಾಜಕಾರಣಿಗಳ ಬೇಜವಾಬ್ದಾರಿತನದಿಂದ ಅಕ್ರಮ ಟೋಲ್ ಸಂಗ್ರಹ ನಡೆಯುತ್ತಿದ್ದು,ತಾಲೂಕಿನ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಎರಡು ಅಕ್ರಮ ಟೋಲ್ ಗಳನ್ನು ಈ ಕೂಡಲೇ ತೆರವು ಗೊಳಿಸಬೇಕೆಂದು ಮಂಡ್ಯ ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಹೆಚ್.ಕ್ಯಾತನಹಳ್ಳಿ ಮಂಜು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಗೋವಿಂದರಾಜು, ರುದ್ರೇಶ್, ಚಿರಂಜೀವಿ, ಮಂಜುನಾಥ್, ಮೌರ್ಯ, ಪಾಪಣ್ಣ ಮತ್ತು ಹಲವು ಮುಖಂಡರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!