ಮಾರಕ ಡೆಂಗ್ಯೂ ಜ್ವರಕ್ಕೆ ಹಗಲು ವೇಳೆ ಕಚ್ಚುವ ಈಡಿಸ್ ಈಜಿಪ್ಟೈ ಸೊಳ್ಳೆ ಕಾರಣವಾಗಿದ್ದು, ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಬೇಕೆಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್. ಡಿ. ಬೆನ್ನೂರ ಹೇಳಿದರು.
ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಸಮುದಾಯ ಆರೋಗ್ಯ ಕೇಂದ್ರ ವ್ಯಾಪ್ತಿಯ ದೊಡ್ಡಪಾಳ್ಯ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಡೆಂಗ್ಯು ರೋಗದ ಬಗ್ಗೆ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಈಗ ವ್ಯಾಪಕವಾಗಿ ಮಳೆ ಬರುತ್ತಿರುವುದರಿಂದ ಎಲ್ಲೆಡೆ ನೀರು ಸಂಗ್ರಹವಾಗಿ ಸೊಳ್ಳೆ ಉತ್ಪತ್ತಿ ಹೆಚ್ಚಾಗಿ ಡೆಂಗ್ಯು ರೋಗ ಪ್ರಸರಣ ಕೂಡ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಮನೆಯ ಒಳಗಿರುವ ಸಿಮೆಂಟ್ ತೊಟ್ಟಿ,ಡ್ರಮ್ ಗಳನ್ನು ವಾರಕ್ಕೆ ಎರಡು ಬಾರಿ ಉಜ್ಜಿ ತೊಳೆದು ನೀರು ತುಂಬಿದ ನಂತರ ಸೊಳ್ಳೆಯ ಸಂಪರ್ಕವಾಗದಂತೆ ಭದ್ರವಾಗಿ ಮುಚ್ಚಿಡಬೇಕು ಎಂದರು.
ಹೂವಿನ ಕುಂಡ ಮತ್ತಿತರ ನೀರು ಶೇಖರಣೆ ಆಗುವ ಎಲ್ಲೆಡೆ ಗಮನಿಸಬೇಕು ಹಾಗೂ ಮನೆಯ ಸುತ್ತಮುತ್ತ ಬಿಸಾಡುವ ಘನತ್ಯಾಜ್ಯ ವಸ್ತುಗಳಾದ ಪ್ಲಾಸ್ಟಿಕ್ ಲೋಟ,ಎಳನೀರು ಚಿಪ್ಪು,ಹಳೇ ಟೈರು,ಒರಳು ಕಲ್ಲು, ಖಾಲಿ ಡಬ್ಬ ಇತ್ಯಾದಿಗಳಲ್ಲಿ ನೀರು ನಿಲ್ಲದಂತೆ ಗಮನಿಸಿದರೆ ಸೊಳ್ಳೆ ಉತ್ಪತ್ತಿ ತಡೆದು ರೋಗ ನಿಯಂತ್ರಿಸಬಹುದು ಎಂದರು.
ನಂತರ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೆಂಪೇಗೌಡ ಮಾತನಾಡಿ ರೋಗ ಬಂದ ನಂತರ ಕಷ್ಟ ಪಡುವ ಬದಲು ರೋಗ ಬರದಂತೆ ಮುಂಜಾಗ್ರತೆ ವಹಿಸುವುದು ಉತ್ತಮ. ತೀವ್ರ ಜ್ವರ, ತಲೆನೋವು, ಕಣ್ಣಿನ ಹಿಂಭಾಗ ನೋವು, ದೇಹದ ಮೇಲೆ ರಕ್ತದ ಗಂಧೆಗಳು ಡೆಂಗ್ಯು ಲಕ್ಷ್ಮಣ ಗಳಾಗಿದ್ದು,ಇಂತಹ ಲಕ್ಷಣಗಳು ಕಂಡು ಬಂದಾಗ ತಕ್ಷಣ ಸರಕಾರಿ ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಳ್ಳಿ. ಜೊತೆಗೆ ಮಲಗುವಾಗ ತಪ್ಪದೆ ಸೊಳ್ಳೆ ಪರದೆ ಉಪಯೋಗಿಸಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸದರಿ ವೇಳೆ ಮುಖ್ಯ ಶಿಕ್ಷಕ ರಘು ಕುಮಾರ್, ಸಹ ಶಿಕ್ಷಕರಾದ ಹನುಮಂತಪ್ಪ, ಗೋವಿಂದಯ್ಯ, ಸಂಧ್ಯಾವಳ್ಳಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಾಮಾಜಿಕ ಕಾರ್ಯಕರ್ತ ಮೋಹನ್ ಕುಮಾರ್ ಹಾಜರಿದ್ದರು.