Friday, September 13, 2024

ಪ್ರಾಯೋಗಿಕ ಆವೃತ್ತಿ

ಆರ್‌ಎಪಿಸಿಎಂಎಸ್ ಕಾಂಗ್ರೆಸ್ ಮಡಿಲಿಗೆ: ಯು.ಸಿ.ಶೇಖರ್ ಅಧ್ಯಕ್ಷ

ತೀವ್ರ ಕೂತೂಹಲ ಕೆರಳಿಸಿದ್ದ ರೈತರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಆರ್‌ಎಪಿಸಿಎಂಎಸ್) ದ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಯು.ಸಿ.ಶೇಖರ್ ಆಯ್ಕೆಯಾದರು.

ಸಂಘದ ಕೇಂದ್ರ ಕಚೇರಿಯಲ್ಲಿಂದು ಚುನಾವಣಾಧಿಕಾರಿ ಮಂಜುನಾಥ್ ಅವರ ಉಪಸ್ಥಿತಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಯು.ಸಿ.ಶೇಖರ್ 9 ಮತಗಳಿಸಿ ಅಧ್ಯಕ್ಷರಾಗಿ ಆಯ್ಕೆಯಾದರೆ, ಅವರ ಪ್ರತಿಸ್ಪರ್ಧಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹೇಮಲತಾ ಬಸವರಾಜು 5 ಮತಗಳನ್ನು ಪಡೆದು ಪರಾಜಿತರಾದರು.

ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಜಿ.ಪಿ.ಮಹೇಶ್ ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವರು ಅವಿರೋಧವಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಆಡಳಿತ ಮಂಡಳಿಯಲ್ಲಿ ಕಾಂಗ್ರೆಸ್ ಬೆಂಬಲಿತರಾದ ಯು.ಸಿ. ಶೇಖರ್, ಕೆ.ಸಿ.ರವೀಂದ್ರ, ಬೇಲೂರು ಸೋಮಶೇಖರ್, ಎನ್.ಪುನೀತ್ ಹಾಗೂ ಜಿ.ಎಸ್.ಅಂಜನಾ ಶ್ರೀಕಾಂತ್, ಜೆಡಿಎಸ್ ಬೆಂಬಲಿತರಾದ ಜಿ.ಪಿ.ಮಹೇಶ್, ಹೆಚ್. ಎಸ್.ಯೋಗೇಶ್ ಕುಮಾರ್, ಸಿ.ಕೆ.ಪಾಪ ಯ್ಯ, ಜಿ.ಎನ್.ಉದಯ್ ಕುಮಾರ್, ಶ್ರೀಧರ್ ಹಾಗೂ ಬಿಜೆಪಿ ಬೆಂಬಲಿತರಾದ ಹೇಮಲತಾ, ಡಿ.ಸಿ.ಸಿ. ಬ್ಯಾಂಕ್ ಪ್ರತಿನಿಧಿ ಸಿ.ಪಿ.ಉಮೇಶ್ ನಾಮನಿರ್ದೇಶನ ಸದಸ್ಯ ಬಸವರಾಜು ಹಾಗೂ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ವಿಕ್ರಮರಾಜೇ ಅರಸ್ ಸೇರಿದಂತೆ ಹದಿನಾಲ್ಕು ಮಂದಿ ಮತದಾನ ಹಕ್ಕು ಹೊಂದಿದ್ದರು.ಅಂತಿಮವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಉಮ್ಮಡಹಳ್ಳಿ ಶಿವಕುಮಾರ್ ತಂತ್ರಗಾರಿಕೆ

ಆರ್ ಎಪಿಸಿಎಂಎಸ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನಾಲ್ಕು ಮಂದಿ ಅಭ್ಯರ್ಥಿಗಳ ಗೆಲುವಿನಲ್ಲಿ ಮನ್ಮುಲ್ ನಿರ್ದೇಶಕ ಉಮ್ಮಡಹಳ್ಳಿ ಶಿವಕುಮಾರ್ ತಂತ್ರಗಾರಿಕೆ ಕೆಲಸ ಮಾಡಿತ್ತು. ಅದೇ ರೀತಿ ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆಯಲ್ಲಿಯೂ ಮನ್ಮುಲ್ ನಿರ್ದೇಶಕ ಉಮ್ಮಡಹಳ್ಳಿ ಶಿವಕುಮಾರ್ ಜೆಡಿಎಸ್ ಜೊತೆ ಮೈತ್ರಿ ಸಾಧಿಸಿ ತನ್ನ ಅಣ್ಣ ಯು.ಸಿ.ಶೇಖರ್ ಅವರನ್ನು ಅಧ್ಯಕ್ಷ ಗಾದಿಗೆ ಕೂರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಬೆಂಬಲಿತರು ತಲಾ ಐದು ಸ್ಥಾನಗಳಲ್ಲಿ ಆಯ್ಕೆಯಾಗಿದ್ದರು. ಅಧ್ಯಕ್ಷ ಗಾದಿ ಹಿಡಿಯಲು ಎರಡು ಪಕ್ಷಗಳು ತೀವ್ರ ಪೈಪೋಟಿ ನಡೆಸಿದ್ದವು.

ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಸಾಧಿಸಿ ಅಧಿಕಾರ ಹಿಡಿಯುತ್ತಾರೆಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿತ್ತು. ಆದರೆ ಅನಿರೀಕ್ಷಿತ ತಿರುವು ಪಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸಾಧಿಸಿ ಅಧಿಕಾರ ಹಿಡಿಯುವಲ್ಲಿ ಸಫಲವಾಗಿದೆ.

ಅಭಿವೃದ್ಧಿಗೆ ಆದ್ಯತೆ

ನೂತನ ಅಧ್ಯಕ್ಷ ಶೇಖರ್ ಮಾತನಾಡಿ, ಪಕ್ಷಾತೀತವಾಗಿ ಬಹುತೇಕ ನಿರ್ದೇಶಕರು ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷ ಗಾದಿ ನೀಡಿದ್ದಾರೆ. ಅವರ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಸಂಸ್ಥೆಯ ಅಭಿವೃಧ್ಧಿಗೆ ಪ್ರಥಮ ಆದ್ಯತೆ ನೀಡುತ್ತೇನೆ ಎಂದರು.

ಕಮಲ ಮುಡಿದ ಕಾಂಗ್ರೆಸ್ ಅಧ್ಯಕ್ಷೆ

ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ವಿರೋಧಿಸಿದ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಶ್ರೀಕಾಂತ್ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹೇಮಲತಾ ಅವರ ನಾಮಪತ್ರಕ್ಕೆ ಅನುಮೋದಕರಾಗುವ ಜೊತೆಗೆ ಮತ ಚಲಾಯಿಸುವ ಮೂಲಕ ಕಮಲ ಮುಡಿದರೂ ಹೇಮಲತಾ ಬಸವರಾಜು ಹಿನ್ನಡೆ ಅನುಭವಿಸಬೇಕಾಯಿತು.

ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿದ್ದ ಹೇಮಲತಾ ಅವರನ್ನು ಅಧ್ಯಕ್ಷ ಗಾದಿಗೇರಿಸಲು ಪತಿ ಬಸವರಾಜು ಅವರು ಸರ್ಕಾರದ ನಾಮಕರಣ ನಿರ್ದೇಶಕ ಕೋಣನಹಳ್ಳಿ ಎಲ್. ಕುಮಾರ್ ಅವರ ನಿರ್ದೇಶಕ ಸ್ಥಾನವನ್ನು ತಮ್ಮ ಪ್ರಭಾವ ಬಳಸಿ ರದ್ದುಗೊಳಿಸಿ, ತಾವೇ ನಾಮ ನಿರ್ದೇಶಿತ ಸದಸ್ಯರಾಗಿ ನೇಮಕಗೊಂಡಿದ್ದರು.

ಅಲ್ಲದೆ ಡಿ.ಸಿ.ಸಿ.ಬ್ಯಾಂಕ್ ನಾಮನಿರ್ದೇಶನವನ್ನು ಜೆಡಿಎಸ್‌ನ ಕಾಳೇಗೌಡ ಬದಲಾಗಿ ಸಿ.ಪಿ.ಉಮೇಶ್ ಹೆಸರಿಗೆ ಬದಲಿಸಿದರೂ ಹೇಮಲತಾ ಅವರು ಅಧ್ಯಕ್ಷ ಗಾದಿಗೇರಲು ವಿಫಲರಾದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!