Thursday, September 19, 2024

ಪ್ರಾಯೋಗಿಕ ಆವೃತ್ತಿ

ಅಪೂರ್ಣ ಕಾಮಗಾರಿ ಉದ್ಘಾಟನೆ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ

ಮಂಡ್ಯ ಜಿಲ್ಲೆಯಲ್ಲಿ ಅಪೂರ್ಣ ಕಾಮಗಾರಿಗಳನ್ನು ಉದ್ಘಾಟನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಜಿಲ್ಲಾ ಚುನಾವಣಾಧಿಕಾರಿಗೆ ಪತ್ರ ಬರೆದಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ಚುನಾವಣಾ ಆಯೋಗದ ಸೂಚನೆಗಳನ್ನು ಧಿಕ್ಕರಿಸಿ ಮತದಾರರಿಗೆ ಆಮಿಷವೊಡ್ಡುವ ಕಾರ್ಯಗಳು ನಿರಂತರವಾಗಿ ನಡೆಯುತ್ತಿದೆ. ಮತದಾರರನ್ನು ಮರಳು ಮಾಡುವ ಸಲುವಾಗಿ ನಿರ್ಮಾಣ ಹಂತದಲ್ಲಿರುವ ಅಪೂರ್ಣ ಸರ್ಕಾರಿ ಕಟ್ಟಡಗಳನ್ನು ಹಾಗೂ ಕಾಮಗಾರಿಗಳನ್ನು ಉದ್ಘಾಟಿಸಲಾಗುತ್ತಿದೆ.

ಜಿಲ್ಲೆಯಲ್ಲಿ ಇನ್ನೂ ಪೂರ್ಣವಾಗದೇ ಇರುವ ಕಾಮಗಾರಿಗಳನ್ನು ಉದ್ಘಾಟನೆ ಮಾಡುವ ಮೂಲಕ ಮತದಾರರ ಮೇಲೆ ಪ್ರಭಾವ ಭೀರಿ ಚುನಾವಣಾ ದೃಷ್ಠಿಯಿಂದ ಅನುಕೂಲ ಪಡೆದುಕೊಳ್ಳಲು ಪ್ರಯತ್ನಿಸುತ್ತಿರುವ ಪ್ರಕರಣಗಳು ಚುನಾವಣಾ ಆಯೋಗದ ನಿರ್ದೇಶನವನ್ನು ಧಿಕ್ಕರಿಸಿ ನಡೆಯುತ್ತಿವೆ. ಅದೇ ರೀತಿ ಟೆಂಡರ್‌ ಕರೆಯುವ ಮೊದಲೇ ಭೂಮಿ ಪೂಜೆ ಮಾಡಲಾಗುತ್ತಿದೆ. ಇದು ಬಹುತೇಕ ಎಲ್ಲ ಇಲಾಖೆಗಳಲ್ಲಿಯೂ ನಡೆಯುತ್ತಿದ್ದು, ಚುನಾವಣಾ ಆಯೋಗದ ಸೂಚನೆಯ ಸ್ಪಷ್ಟ ಉಲ್ಲಂಘನೆಯಾಗಿದೆ.

ಆದ್ದರಿಂದ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ತಾವು ಇಂತಹ ಕಾರ್ಯಗಳನ್ನು ತಡೆಯಲು ಕ್ರಮ ವಹಿಸಬೇಕು. ಮತದಾರರ ಮೇಲೆ ಪ್ರಭಾವ ಬೀರುವ ಯಾವುದೇ ಕಾರ್ಯಗಳೂ ನಡೆಯದಂತೆ ನೋಡಿಕೊಳ್ಳುವ ಮೂಲಕ ನಿಷ್ಪಕ್ಷಪಾತ ಚುನಾವಣೆ ನಡೆಸಲು ಹಾಗೂ ಚುನಾವಣಾ ಆಯೋಗದ ನಿರ್ದೇಶನವನ್ನು ಪಾಲಿಸುವಂತೆ ಒತ್ತಾಯಿಸಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆಗೆ ಶೀಘ್ರದಲ್ಲೇ ದಿನಾಂಕ ಘೋಷಣೆ ಯಾಗಲಿದ್ದು,ಈ ಬಗ್ಗೆ ರಾಜ್ಯಕ್ಕೆ ಭೇಟಿ ನೀಡಿದ ಕೇಂದ್ರ ಚುನಾವಣಾ ಆಯೋಗದ ತಂಡಗಳು ಚುನಾವಣೆಯ ತಯಾರಿಯ ಬಗ್ಗೆ ಪರಿಶೀಲನೆ ನಡೆಸಿವೆ. ರಾಜ್ಯದ ಉನ್ನತ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಸಭೆ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್‌ ಅವರು ಮತದಾರರಿಗೆ ಆಮಿಷವೊಡ್ಡುವುದನ್ನು ತಡೆಯಲು ನೀತಿ ಸಂಹಿತೆ ಜಾರಿಯಾಗುವವರೆಗೂ ಕಾಯದಂತೆ ಅಧಿಕಾರಿಗಳಿಗೆ ಸೂಚನೆ ನೀಡಿ ಅದರಂತೆ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಮನೋಜ ಕುಮಾರ ಮೀನಾ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಮಾ.8 ರಂದು ಪತ್ರ ಬರೆದು, “ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಮಾಡಬೇಕಾದಲ್ಲಿ ಆಯೋಗದ ಅನುಮತಿ ಪಡೆಯಬೇಕು” ಎಂದು ಸೂಚನೆ ನೀಡಿರುತ್ತಾರೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಆದರೂ ಚುನಾವಣ ಆಯೋಗದ ಆದೇಶ ಮೀರಿ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!