Saturday, September 14, 2024

ಪ್ರಾಯೋಗಿಕ ಆವೃತ್ತಿ

ಮಣಿಪುರ ಹಿಂಸಾಚಾರದ ಬಗ್ಗೆ ತುಟಿಬಿಚ್ಚದ ಪ್ರಧಾನಿ ; ಮೋದಿ ವಿರುದ್ದ INDIA ಮೈತ್ರಿಕೂಟ ವಾಗ್ದಾಳಿ

ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿಕೆ ನೀಡಬೇಕು ಎಂಬ ಬೇಡಿಕೆಗೆ ಪ್ರತಿಪಕ್ಷಗಳು ಪಟ್ಟು ಹಿಡಿದಿದ್ದು, ಸತತ ನಾಲ್ಕನೇ ದಿನವೂ ಸಂಸತ್ತಿನಲ್ಲಿ ಕಲಾಪ ಪ್ರತಿಭಟನೆಯಲ್ಲಿಯೇ ಮುಂದುವರೆದಿದೆ.

ಸದನದ ಕಲಾಪದಲ್ಲಿ ಈಶಾನ್ಯ ರಾಜ್ಯದ ಪರಿಸ್ಥಿತಿ ಕುರಿತು ಚರ್ಚಿಸಬೇಕು ಎಂದು ಸಭಾಪತಿ ಜಗದೀಪ್ ಧನಕರ್ ಅವರಿಗೆ 50 ನೋಟಿಸ್‌ಗಳನ್ನು ನೀಡಲಾಯಿತು. ಆನಂತರ ರಾಜ್ಯಸಭೆಯನ್ನು ಮಧ್ಯಾಹ್ನ 12 ಗಂಟೆಗೆ ಸದನವನ್ನು ಮುಂದೂಡಲಾಯಿತು.

ಲೋಕಸಭೆಯ ಕಲಾಪದಲ್ಲೂ ವಿರೋಧ ಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗುವ ಮೂಲಕ ಪ್ರತಿಭಟಿಸಿದ್ದಕ್ಕೆ ಸದನವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಯಿತು.

ಮೇ 3ರಿಂದ ಮಣಿಪುರದಲ್ಲಿ ಕುಕಿಗಳು ಮತ್ತು ಮೈತಿ ಸಮುದಾಯಗಳ ನಡುವೆ ಆರಂಭವಾಗಿ, ಇಡೀ ರಾಜ್ಯ ಹೊತ್ತಿಯುರಿಯುತ್ತಿದೆ. ಈ ಹಿಂಸಾಚಾರದಲ್ಲಿ ಈವರೆಗೂ 160ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 60,000ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ.

ಕಳೆದ ವಾರ ಇಬ್ಬರು ಕುಕಿ ಮಹಿಳೆಯರನ್ನು ಬೆತ್ತಲೆಯಾಗಿಸಿ ಮೆರವಣಿಗೆ ಮಾಡಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಆ ಬಳಿಕ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದವು.

ಮಂಗಳವಾರ, INDIA ಮೈತ್ರಿಕೂಟದ ಭಾಗವಾಗಿರುವ ಕೆಲವು ವಿರೋಧ ಪಕ್ಷಗಳು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕೊಠಡಿಯಲ್ಲಿ ಸಭೆ ನಡೆಸಿದರು. ವರದಿಗಳ ಪ್ರಕಾರ ಅವರು ಲೋಕಸಭೆಯಲ್ಲಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ನಿರ್ಧರಿಸಿದ್ದಾರೆ.

”ನಮ್ಮ ಹಲವಾರು ಮನವಿಗಳ ಹೊರತಾಗಿಯೂ, ಮಣಿಪುರದ ಬೆಳವಣಿಗೆಗಳು ಮತ್ತು ಕೇಂದ್ರದ ಕ್ರಮಗಳ ಬಗ್ಗೆ ಹೇಳಿಕೆ ನೀಡಲು ಮೋದಿ ನಿರಾಕರಿಸಿದ್ದಾರೆ. ಪ್ರಧಾನಿ ಪರಿಸ್ಥಿತಿಯ ಬಗ್ಗೆ ಹೇಳಿಕೆ ನೀಡುವಂತೆ ಒತ್ತಾಯಿಸಲು ಇದು [ಅವಿಶ್ವಾಸ ನಿರ್ಣಯ] ನಮಗೆ ಲಭ್ಯವಿರುವ ಏಕೈಕ ಸಂಸದೀಯ ಸಾಧನವಾಗಿದೆ” ಎಂದು ಹೆಸರು ಹೇಳಲಿಚ್ಚಿಸದ ವಿರೋಧ ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.

ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ನಾಯಕ ಶಶಿ ತರೂರ್, ”ಮಣಿಪುರವು ”ತೀವ್ರ ಬಿಕ್ಕಟ್ಟಿನಿಂದ” ಬಳಲುತ್ತಿದೆ ಮತ್ತು ಮೋದಿಯವರಿಗೆ ಆ ವಿಚಾರಕ್ಕಿಂತ ಹೆಚ್ಚು ಮಹತ್ವದ ವಿಷಯ ಬೇರೆ ಇರಲು ಸಾಧ್ಯವಿಲ್ಲ” ಎಂದು ಹೇಳಿದರು.

”ಭೀಕರ ಪ್ರಾಣಹಾನಿ ಸಂಭವಿಸಿದೆ… ಅತ್ಯಾಚಾರಗಳು ಮತ್ತು ಹಿಂಸಾಚಾರಗಳು ಮತ್ತು ಸ್ಥಳಾಂತರಗಳು ನಡೆದಿವೆ. ಈ ವಿಚಾರಗಳು ಕಾಡ್ಗಿಚ್ಚಿನಂತೆ ಎಲ್ಲೆಡೆ ಹರಡುತ್ತಿದೆ. ಈಗಾಗಲೇ ಮಿಜೋರಾಂನಲ್ಲಿ ಹಿನ್ನಡೆ ಉಂಟಾಗಿದೆ ಮತ್ತು ಮೈತಿಗಳು ರಾಜ್ಯದಿಂದ ಪಲಾಯನ ಮಾಡುತ್ತಿದ್ದಾರೆ.” ಎಂದು ಅವರು ಹೇಳಿದ್ದಾರೆ.

”ಕೇಂದ್ರ ಸಚಿವ ಪಿಯೂಷ್ ಗೋಯಲ್ ಸಂಸತ್ತಿನಲ್ಲಿ ವಿರೋಧ ಪಕ್ಷದ ಆಡಳಿತವಿರುವ ರಾಜ್ಯಗಳಲ್ಲಿ ಮಹಿಳೆಯರ ಮೇಲಿನ ಅಪರಾಧಗಳನ್ನು ಎತ್ತಿ ತೋರಿಸಿದರು. ಈ ವಿಷಯಗಳ ಬಗ್ಗೆಯೂ ಚರ್ಚೆ ನಡೆಸಬೇಕು” ಎಂದು ತರೂರ್ ಹೇಳಿದರು.

ಮಣಿಪುರ ರಾಜ್ಯದಲ್ಲಿ ಸುಮಾರು 80 ದಿನಗಳಿಂದ ಹಿಂಸಾಚಾರ ನಡೆಯುತ್ತಿದ್ದರೂ ಕೂಡ ಪ್ರಧಾನಿ ಮೋದಿ ಮೌನವಾಗಿದ್ದರು. ಆದರೆ ಲೈಂಗಿಕ ದೌರ್ಜನ್ಯದ ಬಗ್ಗೆ ದೇಶದ್ಯಂತ ಆಕ್ರೋಶ ಹೆಚ್ಚಾದ ಬಳಿಕ ಜುಲೈ 20ರಂದು ಅವರು ಮಣಿಪುರದ ವಿಚಾರದಲ್ಲಿ ಮೌನ ಮುರಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!